More

    ವೈದ್ಯ ವೃತ್ತಿಗೆ ಬೇಕು ಕಲಾ ನಂಟು  -ಸಾಹಿತಿ ಡಾ. ರಹಮತ್ ತರೀಕೆರೆ ಅಭಿಮತ -ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ನುಡಿತರಂಗ 

    ದಾವಣಗೆರೆ: ಇತರೆ ವೃತ್ತಿಪರರಂತೆ ವೈದ್ಯರು ಸಾಹಿತ್ಯ, ಸಂಗೀತ, ರಂಗಭೂಮಿ ಮೊದಲಾದ ಕಲಾ ಲೋಕಗಳಲ್ಲಿ ಒಗ್ಗಿಕೊಳ್ಳಬೇಕು. ಹಾಗಾದಾಗ ವೈದ್ಯ ವೃತ್ತಿಯಲ್ಲಿ ಕಸುವು ಹೆಚ್ಚಲಿದೆ ಎಂದು ಸಾಹಿತಿ ಡಾ. ರಹಮತ್ ತರೀಕೆರೆ ಹೇಳಿದರು.

    ನಗರದ ಜೆಜೆಎಂ ವೈದ್ಯಕೀಯ ಕಾಲೇಜಿನ ಅಂಗರಚನಾ ಶಾಸ್ತ್ರ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ- ‘ನುಡಿತರಂಗ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವೃದ್ಯ ವೃತ್ತಿಯಾಚೆಗೂ ಕ್ರಿಯಾಶೀಲತೆ, ರಾಜಕೀಯ ಪ್ರಜ್ಞೆ, ದೇಶದ ಒಳಿತು ಕೆಡುಕಿನ ಬಗ್ಗೆ ವಿಮರ್ಶಿಸುವ ಮನೋಭಾವ ರೂಢಿಸಿಕೊಳ್ಳಬೇಕು ಎಂದರು.
    ಸಾಹಿತ್ಯ, ಸಂಗೀತ, ರಂಗಭೂಮಿ ಮೊದಲಾದ ಕಲೆಗಳು ನಮ್ಮ ಹಾಗೂ ವೈದ್ಯರೊಳಗಿನ ಕಾಯಿಲೆಗಳಿಗಿರುವ ಮದ್ದು. ಇವಕ್ಕೆ ಒಗ್ಗಿಕೊಳ್ಳಬೇಕು. ಶಿಕ್ಷಕರು, ವೈದ್ಯರು ಭ್ರಷ್ಟಾಚಾರಿಗಳಾಗಬಾರದು. ವೈದ್ಯರು ನೈತಿಕತೆ ಮರೆತರೆ ಸಮಾಜವೇ ಹಾಳಾಗಲಿದೆ ಎಂದು ತಿಳಿಸಿದರು. ವೈದ್ಯಕೀಯ ಕ್ಷೇತ್ರದ ಬಗ್ಗೆ ವೃತ್ತಿಯಾಚೆಗೂ ಜನಸಾಮಾನ್ಯರಿಗೆ ತಿಳಿಸುವುದೇ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
    ಧನ್ವಂತರಿಯು ರೈತನ ಎದೆಯಲ್ಲಿರುವ ಸಮಾಜದ ಭಾರ ತೆಗೆಯುವುದನ್ನು ಕುವೆಂಪು ಧನ್ವಂತರಿ ಚಿಕಿತ್ಸೆ ಪುಸ್ತಕದಲ್ಲಿ ಚಿತ್ರಿಸಿದ್ದಾರೆ. ದೇಹದ ಕಾಯಿಲೆ ಬಗ್ಗೆ ಗಮನಿಸುವ ವೈದ್ಯರು ಆತನ ಮನಸ್ಸಿನ ಬಗ್ಗೆಯೂ ಅಧ್ಯಯನ ಮಾಡಬೇಕು. ಕೆಲವರು ಅಮಾನುಷ ಸಿದ್ಧಾಂತಗಳನ್ನು ಬೆಂಬಲಿಸಿದ್ದಾರೆ. ಹಣ ಹಾಗೂ ಸ್ವಜಾತಿ-ಧರ್ಮ ವ್ಯಾಮೋಹವೂ ಒಳ್ಳೆಯದಲ್ಲ ಎಂದು ಕಿವಿಮಾತು ಹೇಳಿದರು.
    ಭಾರತದಲ್ಲಿಂದು ವೃತ್ತಿಪರ ಹಾಗೂ ಉನ್ನತ ಶಿಕ್ಷಣ ಎತ್ತರಕ್ಕೆ ತಲುಪಿದ್ದರೂ ಸಮಾಜ ಮಾನವತೆಯಿಲ್ಲದೆ ಅಮಾನುಷವಾಗಿದೆ. ಆಹಾರದ ಕಾರಣಕ್ಕೆ ನಡೆಯುತ್ತಿರುವ ಹಿಂಸೆ ವಿಚಾರದಲ್ಲೂ ವೈದ್ಯರು ಮೌನ ಮುರಿಯಬೇಕಿದೆ. ವೈದ್ಯಕೀಯ ಶಾಸ್ತ್ರ ಹಿನ್ನೆಲೆಯಲ್ಲಿ ವೈದ್ಯರು ಕೆಟ್ಟಲ್ಲಿ ಸಮಾಜದ ಮಾನದಂಡ ಕೆಳಮಟ್ಟಕ್ಕೆ ಹೋಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
    ಸಾರ್ವಜನಿಕ ಖರ್ಚಿನಲ್ಲಿ ಪದವಿ ಪಡೆಯುತ್ತಿರುವ ವೈದ್ಯರು ಇಂದು ಎಂತಹ ಸೇವೆ ನೀಡುತ್ತಿದ್ದಾರೆ? ಕಾರ್ಪೋರೇಟ್ ಆಸ್ಪತ್ರೆಗಳಲ್ಲಿ ಇಚ್ಛೆ ಇಲ್ಲದಿದ್ದರೂ ಬಿಲ್ ಮಾಡುವ, ಆಪರೇಷನ್, ಟೆಸ್ಟ್ ಮಾಡುವ ಸ್ಥಿತಿಯಲ್ಲಿರುವ ವೈದ್ಯರು ಕೂಡ ರೋಗಗ್ರಸ್ತರಾಗಿದ್ದಾರೆ. ಅದರಿಂದ ಹೊರಬಂದು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವಂತಾಗಲಿ ಎಂದು ಆಶಿಸಿದರು.
    ಧರ್ಮ ಇಂದು ಬೀದಿಗೆ ಬಂದು ನಿಂತಿದ್ದು, ರಕ್ತಪಾತಕ್ಕೂ ಹಿಂಜರಿದಿಲ್ಲ. ಧರ್ಮದ ಹೆಸರಲ್ಲಿ ಎಲ್ಲೆಡೆ ಕಹಿ ಹಂಚುವ ಕೆಲಸ ನಡೆದಿದೆ. ಕುವೆಂಪು ಹೇಳಿದಂತೆ ಎಲ್ಲರೂ ನಿರಂಕುಶಮತಿಗಳಾಗುವ ಅಗತ್ಯವಿದೆ. ವೈಚಾರಿಕತೆ ಮತ್ತು ಪ್ರಶ್ನಿಸುವ ಮನೋಭಾವವಿಲ್ಲದೆ ಹೋದಲ್ಲಿ ಸಮಾಜ ಬೌದ್ಧಿಕ ವಿಕಲಾಂಗ ಆಗುವ ಅಪಾಯವಿದೆ ಎಂದು ಪ್ರಸ್ತಾಪಿಸಿದರು.
    ಬಾಪೂಜಿ ವಿದ್ಯಾಸಂಸ್ಥೆ ನಿರ್ದೇಶಕ ಡಾ.ಎಂ.ಜಿ.ಈಶ್ವರಪ್ಪ ಮಾತನಾಡಿ ದೇಹ, ಮನಸ್ಸು ಹಾಗೂ ಸಮಾಜದ ಆರೋಗ್ಯವೇ ಬೇರೆ ಬೇರೆ. ಇಂದಿನ ಟಿವಿ ಗಮನಿಸಿದರೆ ಸಮಾಜ ಆರೋಗ್ಯಕರವಾಗಿದೆ ಎಂದೆನಿಸುವುದಿಲ್ಲ. ಸಾಹಿತ್ಯದ ಪ್ರಬೇಧ ಹೆಚ್ಚಿದ್ದರೂ ಮನಸ್ಸಿಗೆ ಹಿತ ನೀಡಲಿವೆ ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ಬಾಪೂಜಿ ವಿದ್ಯಾಸಂಸ್ಥೆ ಸದಸ್ಯ ಡಾ. ಸಂಪನ್ನ ಮುತಾಲಿಕ್, ಜೆಜೆಎಂ ಕಾಲೇಜಿನ ಪ್ರಾಚಾರ್ಯೆ ಡಾ. ಎಸ್. ಶುಕ್ಲಾಶೆಟ್ಟಿ, ಸಂಸ್ಥೆಯ ಅಭಿವೃದ್ಧಿ ನಿರ್ದೇಶಕ ಡಾ.ಮಂಜುನಾಥ ಆಲೂರು, ಆಡಳಿತ ವಿಭಾಗದ ನಿರ್ದೇಶಕ ಟಿ. ಸತ್ಯನಾರಾಯಣ, ಡಾ. ಅನುರೂಪಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts