More

    ವೈದ್ಯರ ರಕ್ಷಣೆಗೆ ಪಾರದರ್ಶಕ ಪೆಟ್ಟಿಗೆ ಸಿದ್ಧ

    ಹುಬ್ಬಳ್ಳಿ: ಕರೊನಾ ಸೋಂಕು ಪೀಡಿತ ವ್ಯಕ್ತಿಗೆ ಆಕ್ಸಿಜನ್ ನಳಿಕೆ ಅಳವಡಿಸುವ ವೈದ್ಯರಿಗೆ ಸೋಂಕು ತಗಲುವುದನ್ನು ತಪ್ಪಿಸಲು ಪೂರಕವಾಗಿರುವ ‘ಪಾರದರ್ಶಕ ರಕ್ಷಣಾ ಪೆಟ್ಟಿಗೆ (ಇನ್​ಟ್ಯೂಬೇಷನ್ ಬಾಕ್ಸ್) ಯನ್ನು ಇಲ್ಲಿಯ ಕಿಮ್್ಸ ವೈದ್ಯರ ಸಹಯೋಗದಲ್ಲಿ ಧಾರವಾಡ ಐಐಟಿಯವರು ರೂಪಿಸಿದ್ದಾರೆ.

    ಅರವಳಿಕೆ, ದಂತ, ಶ್ವಾಸಕೋಶ, ಪ್ಯಾಥಾಲಜಿ ಹಾಗೂ ಇತರೆ ವಿಭಾಗದ ವೈದ್ಯರು ಬಳಸಲು ಅನುಕೂಲವಾಗುವಂತೆ ಇದನ್ನು ಅಭಿವೃದ್ಧಿಪಡಿಸಲಾಗಿದೆ.

    ಹುಬ್ಬಳ್ಳಿ ಕಿಮ್್ಸ ಅರವಳಿಕೆ ತಜ್ಞ ವಿಭಾಗವರು ಇದರ ನೀಲಿನಕ್ಷೆಯನ್ನು ಸಿದ್ಧಪಡಿಸಿದ್ದರು. ಧಾರವಾಡ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯ ಯಾಂತ್ರಿಕ ಇಂಜಿನಿಯರಿಂಗ್ ವಿಭಾಗ ಈಗಾಗಲೇ ಐದು ಬಾಕ್ಸ್​ಗಳನ್ನು ಸಿದ್ಧಪಡಿಸಿ ಕಿಮ್ಸ್​ಗೆ ತಲುಪಿಸಿದೆ. ಇದು ರಾಜ್ಯದಲ್ಲಿಯೇ ಪ್ರಥಮ ಪ್ರಯೋಗವಾಗಿದೆ.

    ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಈ ರೀತಿಯ ಪಾರದರ್ಶಕ ರಕ್ಷಣಾ ಪೆಟ್ಟಿಗೆ ಸಿದ್ಧಪಡಿಸಲಾಗಿತ್ತು. ಆದರೆ, ಧಾರವಾಡ ಐಐಟಿ ಇದನ್ನೂ ಕೆಲ ಹೊಸತನಗಳಿಂದ ತನ್ನದೇ ವಿಧಾನದಲ್ಲಿ 5 ಎಂಎಂ ಅಕ್ರಿಲಿಕ್ ಶೀಟ್ ಬಳಸಿ ಪೆಟ್ಟಿಗೆ ಆಕೃತಿಯಲ್ಲಿ ಸಿದ್ಧಪಡಿಸಿದೆ.

    ಕರೊನಾ ಸೋಂಕಿತ ವ್ಯಕ್ತಿಯ ಎದೆಯ ಭಾಗ ಹಾಗೂ ವೈದ್ಯರು ನಿಲ್ಲುವ ಕಡೆ ಖಾಲಿ ಜಾಗವಿರುತ್ತದೆ. ವೈದ್ಯರು ರೋಗಿಯ ಮುಖ ನೋಡುತ್ತ ಆಕ್ಸಿಜನ್ ನಳಿಕೆ ಅಳವಡಿಸಲು, ಗಂಟಲ ದ್ರವ ಮಾದರಿ ಪರೀಕ್ಷೆ, ಔಷಧ ಕೊಡುವುದು ಸೇರಿ ಇತರೆ ಕಾರ್ಯಕ್ಕೆ ಇದನ್ನು ಬಳಸಬಹುದಾಗಿದೆ. ಸೋಂಕುಳ್ಳ ವ್ಯಕ್ತಿ ಕೆಮ್ಮಿದರೆ ಅಥವಾ ಸೀನಿದರೆ ಹೊರಬರುವ ಉಸಿರಾಟದ ಹನಿಗಳ ವಿರುದ್ಧ ತಡೆಗೋಡೆಯಾಗಿ ಈ ಸಾಧನ ಕಾರ್ಯ ನಿರ್ವಹಿಸಲಿದೆ.

    ಮರು ಬಳಕೆಗೆ ಅವಕಾಶ

    ಕರೊನಾ ಸೋಂಕಿತ ವ್ಯಕ್ತಿಗೆ ಬಳಸಿದ ಕೆಲ ವಸ್ತುಗಳನ್ನು ಸುಡುವುದು, ಇಲ್ಲವೇ ಉಪಯೋಗಕ್ಕೆ ಬಾರದಂತೆ ಮಾಡಲಾಗುತ್ತದೆ. ಆದರೆ, ಸೋಂಕಿತ ವ್ಯಕ್ತಿಯ ಮುಖಕ್ಕೆ ಇಡುವ ಈ ಪೆಟ್ಟಿಗೆಯನ್ನು, ರಾಸಾಯನಿಕ ಸಿಂಪಡಿಸಿ ತೊಳೆದು ಮತ್ತೆ ಬಳಕೆ ಮಾಡಬಹುದು ಎನ್ನುತ್ತಾರೆ ತಜ್ಞ ವೈದ್ಯರು.

    ಕಿಮ್ಸ್​ನ ಅರವಳಿಕೆ ವಿಭಾಗದ ತಜ್ಞ ವೈದ್ಯರು ಇಂಥ ಮಾದರಿ ಸಿದ್ಧಪಡಿಸಿದ್ದರು. ಧಾರವಾಡ ಐಐಟಿ ವಿಭಾಗದವರೊಂದಿಗೆ ಮಾತನಾಡಿದಾಗ ಒಪ್ಪಿಗೆ ಸಿಕ್ಕಿತು. ರೂಪುರೇಷೆ ಕೊಟ್ಟ ಕೆಲವೇ ದಿನಗಳಲ್ಲಿ ಸಿದ್ಧಪಡಿಸಿ, ತಲುಪಿಸಿದ್ದಾರೆ. ಕರೊನಾ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡುವಾಗ ಇದನ್ನು ಬಳಸುವುದರಿಂದ ವೈದ್ಯರು, ಸಿಬ್ಬಂದಿ ನಿರಾತಂಕವಾಗಿ ಕೆಲಸ ಮಾಡಬಹುದಾಗಿದೆ.

    | ಡಾ. ಸಿದ್ಧೇಶ್ವರ ಕಟಕೊಳ, ಹುಬ್ಬಳ್ಳಿ ಕಿಮ್್ಸ ಆರ್​ಎಂಒ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts