More

    ವೈದ್ಯರು, ಸಿಬ್ಬಂದಿ ಸೇವಾ ಮನೋಭಾವದಿಂದ ಕೆಲಸ ಮಾಡಿ

    ಮೈಸೂರು: ಆಸ್ಪತ್ರೆಗಳು ದೊಡ್ಡ ದೊಡ್ಡ ಕಟ್ಟಡಗಳಿಂದ ಅತ್ಯಾಧುನಿಕ ಉಪಕರಣಗಳಿಂದ ಇದ್ದರೆ ಸಾಲದು. ಅಲ್ಲಿ ಕೆಲಸ ಮಾಡುವ ವೈದ್ಯರು, ಸಿಬ್ಬಂದಿ ಮಾನವೀಯತೆ ಮತ್ತು ಸೇವಾ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.

    ನಗರದ ಜಯದೇವ ಆಸ್ಪತ್ರೆಯಲ್ಲಿ ಶನಿವಾರ ಆಯೋಜಿಸಿದ್ದ ಆಸ್ಪತ್ರೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯೆ ಎಂದರೆ ಸರ್ಟಿಫಿಕೇಟ್ ಆಗಿರಬಾರದು. ಮಾನವೀಯತೆ ಸಂಕಲ್ಪವೇ ಶ್ರೇಷ್ಠ ವಿದ್ಯೆ ಆಗಬೇಕು. ಕಳೆದ 14 ವರ್ಷದಲ್ಲಿ ಜಯದೇವ ಸಮೂಹ ಆಸ್ಪತ್ರೆಗಳಿಂದ 50 ಲಕ್ಷ ಜನರಿಗೆ ಚಿಕಿತ್ಸೆ ನೀಡಿದ್ದು, 6 ಲಕ್ಷ ಪ್ರೊಸಿಜರ್ಸ್‌ ಆಗಿದೆ. ಇದುವರೆಗೆ ನನ್ನ ಗಮನಕ್ಕೆ ಬಂದಂತಹ ಒಬ್ಬನೇ ಒಬ್ಬ ರೋಗಿಯನ್ನು ಹಣಕ್ಕಾಗಿ ಚಿಕಿತ್ಸೆ ನೀಡದೆ ಆಸ್ಪತ್ರೆಯಿಂದ ಕಳಿಸಿಲ್ಲ ಎಂದರು.

    ಜಯದೇವ ಆಸ್ಪತ್ರೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವುದರಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಹೊರ ದೇಶಗಳಿಂದಲೂ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ನಮ್ಮ ಆಸ್ಪತ್ರೆಗೆ ಹಲವಾರು ಹೃದಯವಂತ ದಾನಿಗಳು ನಿರಂತರವಾಗಿ ಸಹಾಯ ಮಾಡುತ್ತಿದ್ದಾರೆ. ಇವರಲ್ಲಿ ಇಸ್ಫೊಸಿಸ್‌ನ ಡಾ.ಸುಧಾಮೂರ್ತಿ ಮತ್ತು ನಾರಾಯಣಮೂರ್ತಿಯವರು 120 ಕೋಟಿ ರೂ. ಖರ್ಚು ಮಾಡಿ 350 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಬೆಂಗಳೂರಿನಲ್ಲಿ ಕಟ್ಟಿಸಿಕೊಟ್ಟಿದ್ದಾರೆ ಎಂದರು.

    ಸಂತೋಷ ಮಾರಾಟದ ವಸ್ತುವಲ್ಲ, ವಾರ್ಷಿಕೋತ್ಸವದಂತಹ ಕಾರ್ಯಕ್ರಮಗಳನ್ನು ಮಾಡುವುದರಿಂದ ವೃತ್ತಿಯಾಚೆಗಿನ ಪ್ರತಿಭೆ ಗೊತ್ತಾಗುತ್ತದೆ. ಉತ್ತಮ ಬಾಂಧವ್ಯ ಬೆಳೆಯುತ್ತದೆ. ಸಂಸ್ಥೆಯಲ್ಲಿ ಒಳ್ಳೆಯ ವಾತಾವರಣ ನಿರ್ಮಾಣವಾಗುತ್ತದೆ. ಆರೋಗ್ಯ ಕೂಡ ಚೆನ್ನಾಗಿರುತ್ತದೆ ಎಂದರು.

    ಎಂಎಂಸಿಆರ್‌ಐನ ಡೀನ್ ಹಾಗೂ ನಿರ್ದೇಶಕಿ ಡಾ.ಕೆ.ಆರ್.ದಾಕ್ಷಾಯಣಿ ಮಾತನಾಡಿ, ಜಯದೇವ ಆಸ್ಪತ್ರೆ ದೇವಾಲಯದಂತೆ ಇದ್ದು, ರೋಗಿಗಳಿಗೆ ಉತ್ತಮ ವಾತಾವರಣವಿದೆ ಎಂದರು.
    ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

    ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್.ಸದಾನಂದ್, ಡಾ.ಹರ್ಷಬಸಪ್ಪ, ಡಾ.ವೀಣಾನಂಜಪ್ಪ, ಡಾ.ರಾಜಿತ್, ಡಾ.ದಿನೇಶ್, ಡಾ.ಭಾರತಿ, ಡಾ.ಮಂಜುನಾಥ, ಡಾ.ಶಂಕರ್, ಡಾ.ಶ್ರೀನಿಧಿ ಹೆಗ್ಗಡೆ, ಡಾ.ಹೇಮಾ ರವೀಶ್, ಡಾ.ದೇವರಾಜು, ಡಾ.ಜಯಪ್ರಕಾಶ್, ಡಾ.ಕುಮಾರ, ಡಾ.ರಶ್ಮಿ, ಡಾ.ಪಶುಪತಿ, ಡಾ.ಸುಪ್ರಿಯಾ, ನರ್ಸಿಂಗ್ ಅಧೀಕ್ಷಕ ಹರೀಶ್‌ಕುಮಾರ್, ಪಿಆರ್‌ಒ ವಾಣಿ ಮೋಹನ್, ಚಂಪಕಮಾಲಾ ಮುಂತಾದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts