More

    ವೈದ್ಯರು, ಸಿಬ್ಬಂದಿ ನೇಮಕಕ್ಕೆ ಸೂಚನೆ

    ಸವಣೂರ: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವ ಪಿಎಚ್​ಸಿ ಕೇಂದ್ರಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ನಿಯೋಜನೆಗೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟಿಎಚ್​ಒ (ಪ್ರಭಾರ) ಹನುಮಂತ ಕುಡಚಿ ಅವರನ್ನು ತಾ.ಪಂ. ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣನವರ ತರಾಟೆಗೆ ತೆಗೆದುಕೊಂಡರು.

    ಪಟ್ಟಣದ ತಾಪಂ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕಡಕೋಳ ಗ್ರಾಮದ ಪಿಎಚ್​ಸಿ ಕೇಂದ್ರಕ್ಕೆ ಸಿಬ್ಬಂದಿ ನೇಮಿಸಲು ಹಲವು ಬಾರಿ ಕೋರಿಕೆ ಸಲ್ಲಿಸಿದರೂ ಇದುವರೆಗೂ ಕ್ರಮ ಕೈಗೊಂಡಿಲ್ಲ. ಪಿಎಚ್​ಸಿ ಕೇಂದ್ರದ ಹತ್ತಿರದ ಗ್ರಾಮಗಳ ರೋಗಿಗಳು ಪರದಾಡುವಂತಾಗಿದೆ. ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನೇತ್ರ ವೈದ್ಯರ ಕುರಿತು ಹಲವು ಆರೋಪಗಳು ಕೇಳಿಬಂದಿವೆ. ಕೂಡಲೆ ಪಿಎಚ್​ಸಿ ಕೇಂದ್ರಗಳಿಗೆ ಸಿಬ್ಬಂದಿ ನೇಮಕ, ಆರೋಗ್ಯ ಇಲಾಖೆಯ ವತಿಯಿಂದ ಅಂಗವಿಕಲರಿಗೆ ವಿತರಿಸುವ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ)ಯ ಶಿಬಿರ ಆಯೋಜನೆಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕಣ್ಣಿನ ವೈದ್ಯರ ವಿರುದ್ಧ ತನಿಖೆ ಕೈಗೊಂಡು ವರದಿ ಸಲ್ಲಿಸಬೇಕು ಎಂದು ಟಿಎಚ್​ಒ (ಪ್ರಭಾರ) ಹನುಮಂತ ಕುಡಚಿ ಅವರಿಗೆ ಅಧ್ಯಕ್ಷರು ಸೂಚಿಸಿದರು.

    ಕಂದಾಯ ಹಾಗೂ ಕೃಷಿ ಇಲಾಖೆಯ ಜಂಟಿ ಬೆಳೆ ಹಾಗೂ ಭೂ ಹಾನಿ ಪರಿಶೀಲನೆ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಅರ್ಹ ಫಲಾನುಭವಿಗಳನ್ನು ಕಡೆಗಣಿಸಿ ಅನರ್ಹರಿಂದ ಹಣ ಪಡೆದು ಹೆಚ್ಚಿನ ಪರಿಹಾರ ನೀಡಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಅಧ್ಯಕ್ಷ ಸುಬ್ಬಣ್ಣನವರ ಕೃಷಿ ಇಲಾಖೆ ಅಧಿಕಾರಿಯನ್ನು ಪ್ರಶ್ನಿಸಿದರು. ಬೆಳೆ ಮತ್ತು ಭೂ ಹಾನಿಯನ್ನು ಸಮರ್ಪಕವಾಗಿ ಪರಿಶೀಲನೆ ಕೈಗೊಂಡಿದ್ದೇವೆ. ಆದರೆ, ಪರಿಹಾರ ಹಂಚಿಕೆ ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಬಸನಗೌಡ ಪಾಟೀಲ ಸಭೆಗೆ ತಿಳಿಸಿದರು.

    ವಿವಿಧ ಇಲಾಖೆಯ ಅಧಿಕಾರಿಗಳು ಮಾಸಿಕ ಪ್ರಗತಿ ವರದಿ ಸಲ್ಲಿಸಿದರು. ಉಪಾಧ್ಯಕ್ಷೆ ಜಯಶೀಲಾ ರೊಟ್ಟಿಗವಾಡ, ಇಒ ಮುನಿಯಪ್ಪ ಪಿ., ಎಡಿ ಸದಾನಂದ ಅಮರಾಪೂರ, ಇತರರು ಪಾಲ್ಗೊಂಡಿದ್ದರು.

    ಮೇವು ಕೇಂದ್ರ ತೆರೆಯಿರಿ: ಈ ಬಾರಿ ನೆರೆ ಹಾವಳಿಂದಾಗಿ ಜಾನವಾರುಗಳಿಗೆ ಮೇವು ಇಲ್ಲದಂತಾಗಿದೆ. ಆದರೂ ಮೇವಿನ ಕೇಂದ್ರಗಳನ್ನು ಏಕೆ ತೆರೆದಿಲ್ಲ ಎಂದು ಪಶು ಸಂಗೋಪನಾ ಇಲಾಖೆಯ ಅಧಿಕಾರಿಯನ್ನು ಅಧ್ಯಕ್ಷ ಸುಬ್ಬಣ್ಣವರ ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ವೈದ್ಯಾಧಿಕಾರಿ ಡಾ. ಬೀರಪ್ಪ ಪುಟ್ಟಕ್ಕನವರ, ಜಿಲ್ಲಾಧಿಕಾರಿಯಲ್ಲಿಯೇ ಮೇವಿನ ಕೇಂದ್ರಗಳನ್ನು ತೆರೆಯದಂತೆ ಆದೇಶಿಸಿದ್ದಾರೆ. ಮೇವಿನ ಕೇಂದ್ರಗಳನ್ನು ತೆರೆಯಲು ಮರು ಪ್ರಸ್ತಾವನೆ ಸಲ್ಲಿಸಲು ಉಪನಿದೇಶಕರೊಂದಿಗೆ ಸಮಾಲೋಚನೆ ಕೈಗೊಂಡು ಮುಂದಿನ ಕ್ರಮ ಕೈಗೊಳ್ಳವುದಾಗಿ ಸಭೆಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts