More

    ವೈದ್ಯರಿಬ್ಬರಿಗೆ ಶೋಕಾಸ್ ನೋಟಿಸ್

    ಕಾರವಾರ: ಕರೊನಾ ಮಹಾಮಾರಿ ಎದುರಿಸಲು ಬಹುತೇಕ ಸರ್ಕಾರಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಮಾಡುತ್ತಿರುವ ಸೇವೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಇಂಥ ತುರ್ತು ಪರಿಸ್ಥಿತಿಯ ಸಮಯದಲ್ಲೂ ಕೆಲ ವೈದ್ಯರು ತಮ್ಮ ಸಣ್ಣತನ ಪ್ರದರ್ಶಿಸಿದ್ದು, ಕರ್ತವ್ಯಕ್ಕೆ ಹಾಜರಾಗಲು ನಿರಾಕರಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

    ಕರೊನಾ ರೋಗಿಗಳ ಚಿಕಿತ್ಸೆಗೆ ಪತಂಜಲಿ ನೌಕಾ ಆಸ್ಪತ್ರೆಗೆ ತೆರಳಲು ಕುಮಟಾದ ಒಬ್ಬ ಹಾಗೂ ಅಂಕೋಲಾದ ಒಬ್ಬ ಸರ್ಕಾರಿ ವೈದ್ಯರು ನಿರಾಕರಿಸಿದ್ದಾರೆ. ಕರೊನಾ ವೈದ್ಯಕೀಯ ವ್ಯವಸ್ಥೆಯ ಜವಾಬ್ದಾರಿ ಹೊತ್ತಿದ್ದ ಜಿಪಂ ಸಿಇಒ ಆದೇಶ ಉಲ್ಲಂಘಿಸಿ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದರಿಂದ ಹಾಲಿ ಸೇವೆ ಸಲ್ಲಿಸುತ್ತಿರುವ ವೈದ್ಯರ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಸರ್ಕಾರಿ ಕರ್ತವ್ಯ ನಿರಾಕರಿಸಿದವರ ವಿರುದ್ಧ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ. ಕರ್ತವ್ಯ ಮಾಡಲು ನಿರಾಕರಿಸಿದ ಇಬ್ಬರಿಗೂ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಎರಡು ವೇತನ ಭಡ್ತಿ ತಡೆ ಹಿಡಿಯಲು ಶಿಫಾರಸು ಮಾಡಲಾಗಿದೆ ಎಂದು ಜಿಪಂ ಸಿಇಒ ಎಂ.ರೋಷನ್ ತಿಳಿಸಿದ್ದಾರೆ.

    ವ್ಯವಸ್ಥೆ ಹೇಗಿದೆ? : ಸದ್ಯ ಜಿಲ್ಲೆಯ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಪತಂಜಲಿ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ನಿಯೋಜನೆಯಾದ ಇಬ್ಬರು ವೈದ್ಯರು, 6 ವೈದ್ಯಕೀಯ ಸಿಬ್ಬಂದಿ ಶಿಫ್ಟ್ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಕುಟುಂಬದಿಂದ ಕಳೆದ ಒಂದು ವಾರದಿಂದ ದೂರವೇ ಇದ್ದಾರೆ. ಅಲ್ಲಿ ನಿಯೋಜನೆಯಾದವರಿಗೆ ಸ್ಥಳದಲ್ಲೇ ಉಳಿಯುವ ವ್ಯವಸ್ಥೆ ಮಾಡಲಾಗಿದೆ. ಈ ಮೊದಲು ಕರೊನಾ ಚಿಕಿತ್ಸೆ ನೀಡಿದ ವೈದ್ಯರು, ಸಿಬ್ಬಂದಿಯನ್ನು 14 ದಿನ ಕ್ವಾರಂಟೈನ್ ಮಾಡಬೇಕು ಎಂದು ಸರ್ಕಾರ ಆದೇಶಿಸಿತ್ತು. ಈಗ ಅದನ್ನು ಕೈಬಿಡಲಾಗಿದೆ. ಅವರು ಇಡೀ ದೇಹ ಮುಚ್ಚುವ ಕವಚ ಹಾಕಿಕೊಂಡು ಕಾರ್ಯನಿರ್ವಹಿಸುವುದರಿಂದ ಅಪಾಯ ಸಂಭವಿಸದು. ಇದರಿಂದ ಕ್ವಾರಂಟೈನ್​ನಲ್ಲಿಡುವ ಅವಶ್ಯಕತೆ ಇಲ್ಲ ಎಂದು ಸರ್ಕಾರ ಆದೇಶಿಸಿದೆ ಎಂದು ಸಿಇಒ ಎಂ.ರೋಷನ್ ತಿಳಿಸಿದ್ದಾರೆ.

    ಭಟ್ಕಳಕ್ಕೆ ತೆರಳಲು ಭಯ: ಕರೊನಾ ಇಡೀ ಜಿಲ್ಲೆಗೆ ವ್ಯಾಪಿಸದಿದ್ದರೂ ಭಟ್ಕಳದಲ್ಲಿ ಆರ್ಭಟ ತೋರುತ್ತಿದೆ. ಇದರಿಂದ ಭಟ್ಕಳದಲ್ಲಿ ಜಿಲ್ಲಾಡಳಿತ ಜಿಲ್ಲೆಯ ಬೇರೆ ಬೇರೆ ಕಡೆಗಳಿಂದ, ವಿಭಾಗಗಳಿಂದ ಹೆಚ್ಚಿನ ವೈದ್ಯರು, ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಿದೆ. ಆದರೆ, ಅಲ್ಲಿಯೂ ಕರ್ತವ್ಯ ನಿರ್ವಹಿಸಲು ಅನೇಕರು ಹೆದರುತ್ತಿದ್ದಾರೆ. ಇತ್ತೀಚೆಗೆ ಕರೊನಾ ರೋಗ ಪತ್ತೆಯಾದ ರೋಗಿಯ ಸಂಪರ್ಕಕ್ಕೆ ಬಂದ 40 ವೈದ್ಯಕೀಯ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಅವರ ಗಂಟಲ ದ್ರವದ ಮಾದರಿಯನ್ನು ಪಡೆಯಲಾಗಿದೆ.

    ಖಾಸಗಿ ವೈದ್ಯರಲ್ಲಿ ಹೆಬ್ಬಾರ ಮನವಿ: ಇಷ್ಟು ವರ್ಷ ಜಿಲ್ಲೆಯ ಜನರ ಆರೋಗ್ಯ ನೋಡಿದ್ದೀರಿ. ಇಂಥ ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ನಿಮ್ಮ ಜವಾಬ್ದಾರಿ ನಿಭಾಯಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಖಾಸಗಿ ವೈದ್ಯರಲ್ಲಿ ಮನವಿ ಮಾಡಿದ್ದಾರೆ. ನಿಮಗೆ ರೋಗ ಲಕ್ಷಣ ಗೊತ್ತಾಗುತ್ತದೆ. ಕರೊನಾ ಲಕ್ಷಣವಿರುವ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ, ಆದರೆ, ಇತರೆ ಸಣ್ಣಪುಟ್ಟ ರೋಗಿಗಳಿಗೂ ಚಿಕಿತ್ಸೆ ನೀಡದೇ ಬಿಡಬೇಡಿ. ಇದರಿಂದ ಸರ್ಕಾರಿ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚುತ್ತದೆ. ನಿಮಗೆ ಮೂಲ ಸೌಕರ್ಯ ಬೇಕಾದರೆ ಸರ್ಕಾರ ಅದನ್ನು ನೀಡಲು ಸಿದ್ಧವಿದೆ. ಕಷ್ಟಕಾಲದಲ್ಲಿ ನೆರವಾಗದೇ ವೈದ್ಯಕೀಯ ವೃತ್ತಿಗೆ ಅಗೌರವ ತೋರಬೇಡಿ ಎಂದಿದ್ದಾರೆ.

    ಸರ್ಕಾರದ ಕರ್ತವ್ಯದಲ್ಲಿರುವವರು ಇಂಥ ತುರ್ತು ಪರಿಸ್ಥಿತಿಯಲ್ಲಿ ತಮ್ಮ ಜವಾಬ್ದಾರಿಯನ್ನು ನಿರಾಕರಿಸುವಂತಿಲ್ಲ. ಇದರಿಂದ ಇಬ್ಬರು ವೈದ್ಯರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. | ಎಂ. ರೋಷನ್ ಜಿಪಂ ಸಿಇಒ, ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts