More

    ವೈದ್ಯರಿಗೆ ಬೇಕು ಸಹಾನುಭೂತಿ, ವೃತ್ತಿ ಕೌಶಲ- ಡಾ.ವಿ.ರವಿ

    ದಾವಣಗೆರೆ: ರೋಗಿಗಳ ಬಗ್ಗೆ ಸಹಾನುಭೂತಿ, ಹೊಣೆಗಾರಿಕೆ ಹಾಗೂ ಚಿಕಿತ್ಸೆಯ ಉತ್ತಮ ಕೌಶಲವಿಲ್ಲದ ಯಾವುದೇ ವೈದ್ಯರು ವೈದ್ಯಕೀಯ ವೃತ್ತಿಗೆ ನ್ಯಾಯ ಕೊಡಲು ಸಾಧ್ಯವಿಲ್ಲ ಎಂದು ಬೆಂಗಳೂರು ನಿಮ್ಹಾನ್ಸ್ ನ್ಯೂರೋವೈರಾಲಜಿ ವಿಭಾಗ ಮುಖ್ಯಸ್ಥ ಡಾ.ವಿ.ರವಿ ಹೇಳಿದರು.
    ಇಲ್ಲಿನ ಎಸ್ಸೆಸ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ 12ನೇ ಪದವಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಕೋವಿಡ್ ಸಾಂಕ್ರಾಮಿಕ ಬಂದ ನಂತರ ವೈದ್ಯಕೀಯ ಶಿಕ್ಷಕರು, ವೈದ್ಯ ಸಿಬ್ಬಂದಿಗೆ ಹೊಸ ಪಾಠ ಕಲಿಸಿತು. ಅದನ್ನು ನಿಯಂತ್ರಣ ಮಾಡುವ ಚಿಕಿತ್ಸಾ ವಿಧಾನವೇ ಆರಂಭದಲ್ಲಿ ಕ್ಲಿಷ್ಟವಾಗಿತ್ತು. ಎರಡು ಡೋಸ್ ಲಸಿಕೆ ನೀಡಿದ್ದರಿಂದ ಶೇ. 93 ರಷ್ಟು ಜನರು ಅಪಾಯದಿಂದ ಪಾರಾದರು. ಇದರ ಜತೆಗೆ ಕೋವಿಡ್ ನಿಯಂತ್ರಣೆಯಲ್ಲಿ ಅನುಸರಿಸಿದ ವರ್ತನೆಗಳೂ ಸಹಕಾರಿಯಾದವು ಎಂದು ಸ್ಮರಿಸಿದರು.
    ವೈದ್ಯಕೀಯ ವ್ಯಾಸಂಗದಲ್ಲಿ ಟಾಪರ್ ಆಗಿ ದೊಡ್ಡ ಹುದ್ದೆಯಲ್ಲಿರುವ ಕೆಲವು ವೈದ್ಯರಿಗೆ ಚುಚ್ಚುಮದ್ದು ಮಾಡುವ ವಿಧಾನದ ಅರಿವಿಲ್ಲ. ರೋಗ ಪತ್ತೆ ಅಥವಾ ಅದನ್ನು ಉಪಶಮನ ಮಾಡುವುದಕ್ಕೂ ಮುನ್ನ ರೋಗಿಗಳೊಂದಿಗೆ ಉತ್ತಮ ಸಂವಹನ ಹಾಗೂ ಅವರನ್ನು ಸ್ಪರ್ಶಿಸಿದ ಮಾತ್ರಕ್ಕೆ ಅರ್ಧದಷ್ಟು ಕಾಯಿಲೆಗಳು ಗುಣಮುಖವಾಗಲಿವೆ ಎಂದು ಹೇಳಿದರು.
    ಕೋಲಾರ ಜಿಲ್ಲೆಯಲ್ಲಿ ಎಲ್ಲ ಪಿಎಚ್ ಸಿ, ತಾಲೂಕು, ಜಿಲ್ಲಾಸ್ಪತ್ರೆ ಮಟ್ಟದಲ್ಲೂ ಡಿಜಿಟಲೀಕರಣ ಆರೋಗ್ಯ ವ್ಯವಸ್ಥೆ 2019ರಿಂದಲೇ ಚಾಲ್ತಿಯಲ್ಲಿದೆ. ರೋಗಿಗಳ ಕಡತಗಳು ನಾಶವಾಗುವ ಸಾಧ್ಯತೆ ಇರುವುದರಿಂದ ಚಿಪ್ ಹಾಗೂ ನಾವೀನ್ಯ ತಂತ್ರಜ್ಞಾನ ದೊಂದಿಗೆ ರೋಗಿಯ ಹಳೆಯ ದಾಖಲೆ ಗಮನಿಸಲು ಸಾಧ್ಯವಾಗಿದೆ. ಪ್ರಗತಿಪರ ಜಿಲ್ಲೆಯಾದ ದಾವಣಗೆರೆ ಕೂಡ ಈ ವ್ಯವಸ್ಥೆ ಬರಬೇಕಿದೆ. ಇಲ್ಲಿನ ವೈದ್ಯಕೀಯ ಕಾಲೇಜು ಇದರತ್ತ ಗಮನ ಹರಿಸಲಿ ಎಂದು ಆಶಿಸಿದರು.
    ಎಸ್ಸೆಸ್ ಕೇರ್ ಟ್ರಸ್ಟ್ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ, ರಾಜೀವ್ ಗಾಂಧಿ ವಿವಿಯ ಸೆನೆಟ್ ಸದಸ್ಯ ಡಾ. ರವೀಂದ್ರ ಬಣಕಾರ್, ವೈದ್ಯಕೀಯ ನಿರ್ದೇಶಕ ಡಾ. ಅರುಣ್ ಕುಮಾರ್ ಅಜ್ಜಪ್ಪ, ಪೆಥಾಲಜಿ ವಿಭಾಗ ಮುಖ್ಯಸ್ಥೆ ಡಾ. ಶಶಿಕಲಾ ಕೃಷ್ಣಮೂರ್ತಿ, ಎಸ್ಸೆಸ್ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಸ್.ಪ್ರಸಾದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts