More

    ವೇಮನರ ವಚನಗಳಲ್ಲಿ ಸಾಮಾಜಿಕ ನ್ಯಾಯ

    ಗದಗ: ಬಸವವಾದಿ ಶರಣರು 12ನೇ ಶತಮಾನದಲ್ಲಿ ಪ್ರತಿಪಾದಿಸಿದ ಸಾಮಾಜಿಕ ನ್ಯಾಯದ ತತ್ವಗಳನ್ನು 14ನೇ ಶತಮಾನದಲ್ಲಿ ಜನಸಾಮಾನ್ಯರ ಆಡುಭಾಷೆಯಲ್ಲಿ ಕಠೋರತೆಯಿಂದ ಪ್ರತಿಪಾದಿಸಿದ ವೇಮನರು ಒಂದು ಜಾತಿ, ಧರ್ಮ, ವರ್ಗಕ್ಕೆ ಸೀಮಿತವಲ್ಲ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.

    ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮಹಾಯೋಗಿ ವೇಮನ ಜಿಲ್ಲಾ ರಡ್ಡಿ ಸಮಾಜ ಸಂಘದ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಕರ್ನಾಟಕ ವಿಶ್ವವಿದ್ಯಾಲಯ ವೇಮನರ ಸಂದೇಶಗಳ ಪ್ರಕಟಣೆಗೆ ಮುಂದಾಗಿರುವುದು ಸ್ವಾಗತಾರ್ಹ ಕ್ರಮ ಎಂದರು.

    ಅಪರ ಜಿಲ್ಲಾಧಿಕಾರಿ ಸತೀಶಕುಮಾರ ಮಾತನಾಡಿ, ಸಾಮಾಜಿಕ ಸಮಸ್ಯೆ ಮತ್ತು ಪಿಡುಗುಗಳ ನಿವಾರಣೆಯಲ್ಲಿ ಹಲವಾರು ಶ್ರೇಷ್ಠ ದಾರ್ಶನಿಕರು, ಸಂತರು, ಶರಣರು ಮಹತ್ವದ ಪಾತ್ರ ವಹಿಸಿದ್ದು, ವೇಮನರ ಕೊಡುಗೆ ಗಮನಾರ್ಹ ಎಂದು ಹೇಳಿದರು.

    ಮಹಾಯೋಗಿ ವೇಮನರ ಜೀವನ ಮತ್ತು ಸಂದೇಶ ಕುರಿತು ಡಾ. ಕೆ. ರವೀಂದ್ರನಾಥ ಉಪನ್ಯಾಸ ನೀಡಿ, ವೀರೇಶ್ವರ ಪುಣ್ಯಾಶ್ರಮದ ಪುಟ್ಟರಾಜ ಗವಾಯಿಗಳು ರಚಿಸಿದ ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ಪುರಾಣದಲ್ಲಿ ವೇಮನರ ಜೀವನ ಕುರಿತು ಸಾಕಷ್ಟು ಸಂಗತಿಗಳು ಕಾಣಸಿಗುತ್ತವೆ. 1324ರಿಂದ 1424ರ ಶತಮಾನದ ಅವಧಿಯ ರಡ್ಡಿ ಸಮುದಾಯದ ಚರಿತ್ರೆಯಲ್ಲಿ ವೇಮನರು ಹಾಗೂ ಹೇಮರಡ್ಡಿ ಮಲ್ಲಮ್ಮ ಅವರು ಸಾಂಸ್ಕೃತಿಕ ನಾಯಕರಾಗಿ ಅಜರಾಮರರಾಗಿದ್ದಾರೆ ಎಂದು ವಿವರಿಸಿದರು.

    ಜಿ.ಪಂ. ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಉದ್ಘಾಟಿಸಿದರು. ಮುಗಳಖೋಡ ಅಬ್ಬಿಗೇರಿ ಶಾಖಾ ಮಠದ ಬಸವರೆಡ್ಡಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

    ಗದಗ ತಾ.ಪಂ. ಅಧ್ಯಕ್ಷ ಎಸ್.ಎಸ್. ಪಾಟೀಲ, ನರಗುಂದ ತಾ.ಪಂ. ಅಧ್ಯಕ್ಷ ವಿಠ್ಠಲ ಗೋವಿಂದರಡ್ಡಿ ತಿಮ್ಮರಡ್ಡಿ, ಮಾಜಿ ಶಾಸಕ ಬಿ.ಆರ್. ಯಾವಗಲ್, ಡಾ. ಪ್ರವೀಣ ಸಾಲಿಗೌಡರ, ರವೀಂದ್ರನಾಥ ದೊಡ್ಡಮೇಟಿ, ವಿರೂಪಾಕ್ಷಪ್ಪ ಮೇಟಿ, ರಮೇಶಪ್ಪ ಭೂಮರಡ್ಡಿ, ಎನ್.ಬಿ. ಪಾಟೀಲ, ಎನ್.ಎನ್. ಗೋಕಾವಿ, ಎಸ್.ಜಿ. ಕೋನರಡ್ಡಿ, ಆರ್.ಎಸ್. ಪಾಟೀಲ, ಕೆ.ಬಿ. ಗಡಗಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮಹಾಯೋಗಿ ವೇಮನ ಗದಗ ಜಿಲ್ಲಾ ರಡ್ಡಿ ಸಮಾಜ ಸಂಘದ ಅಧ್ಯಕ್ಷ ರವೀಂದ್ರನಾಥ ಮೂಲಿಮನಿ, ಕರಬಸಪ್ಪ ಹಂಚಿನಾಳ, ಶೇಖರ ರಡ್ಡಿ, ಜಯಶ್ರೀ ಕೋಲ್ಕಾರ, ಶಿವನಗೌಡ ಹಳ್ಳೂರ, ಇತರರು ಇದ್ದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಸ್ವಾಗತಿಸಿದರು. ಜೇನುಗೂಡು ಕಲಾತಂಡದಿಂದ ನಾಡಗೀತೆ ಹಾಗೂ ವೀರೇಶ್ವರ ಪುಣ್ಯಾಶ್ರಮದ ಕಲಾವಿದರಿಂದ ಸಂಗೀತ ಸೇವೆ ಜರುಗಿತು.

    ಮಹಾತ್ಮರು ಇಡೀ ಮಾನವಕುಲಕ್ಕೆ ಸೀಮಿತ

    ಮುಂಡರಗಿ: ಶಿವಶರಣರು, ಸಂತರು, ದಾಸಶ್ರೇಷ್ಠರು, ಮಹಾತ್ಮರು ಇಡೀ ಮನುಕುಲಕ್ಕೆ ಸೀಮಿತ ಹೊರತು ಯಾರೋ ಒಬ್ಬರಿಗೆ ಮಾತ್ರ ಸೀಮಿತವಲ್ಲ. ಮಹಾಯೋಗಿ ವೇಮನರು ತಮ್ಮ ಪದ್ಯ, ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ ಎಂದು ಜಿ.ಪಂ. ಸದಸ್ಯೆ ಶೋಭಾ ಮೇಟಿ ಹೇಳಿದರು.

    ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಭಾನುವಾರ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಓದುವ ಹವ್ಯಾಸದಿಂದ ಮಹಾತ್ಮರ ಚರಿತ್ರೆ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ. ಈ ಬಗ್ಗೆ ಪ್ರತಿಯೊಬ್ಬರು ಅಧ್ಯಯನಶೀಲರಾಗಬೇಕು ಎಂದರು.

    ಉಪನ್ಯಾಸಕ ಎಸ್.ಆರ್. ಬಸಾಪುರ ಮಾತನಾಡಿ, 15ನೇ ಶತಮಾನದಲ್ಲಿ ಯೋಗಿವೇಮನರು ತೆಲುಗಿನಲ್ಲಿ 12 ಸಾವಿರ ಪದ್ಯಗಳನ್ನು ರಚಿಸಿದ್ದರು. ಅವುಗಳಲ್ಲಿ 6 ಸಾವಿರ ಪದ್ಯಗಳನ್ನು ಕನ್ನಡಕ್ಕೆ ಅನುವಾದ ಮಾಡಲಾಗಿದೆ. ಅವರ ರಚನೆಯಲ್ಲಿ ಜಾತಿ, ಬೇಧ ಮರೆತು ಎಲ್ಲರೂ ಒಂದಾಗಿ ಬಾಳಬೇಕು ಎನ್ನುವ ಸಂದೇಶಗಳಿವೆ. ಸುಸ್ಥಿತ ಆರೋಗ್ಯಯುತ ಸಮಾಜ ನಿರ್ವಣಕ್ಕೆ ಶ್ರಮಿಸಿದ ಮಹಾಪುರುಷ ಮಹಾಯೋಗಿ ವೇಮನರು ಎಂದರು.

    ತಾಲೂಕು ರಡ್ಡಿ ಸಮಾಜದ ಅಧ್ಯಕ್ಷ ಡಾ.ಬಿ.ಎಸ್.ಮೇಟಿ ಮಾತನಾಡಿ, ಸ್ಥಳೀಯ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನವು 2 ತಿಂಗಳೊಳಗೆ ಉದ್ಘಾಟನೆಯಾಗಲಿದೆ ಎಂದು ತಿಳಿಸಿದರು. ಪುರಸಭೆ ಸದಸ್ಯ ರಾಜಾಬಕ್ಷೀ ಬೆಟಗೇರಿ ಮಾತನಾಡಿದರು. ಪುರಸಭೆ ಸದಸ್ಯ ಸಂತೋಷ ಹಿರೇಮನಿ, ಎಸ್.ಡಿ. ಮಕಾಂದಾರ, ಸುರೇಶ ಜಲ್ಲರಡ್ಡಿ, ಹನುಮರಡ್ಡಿ ಚೆನ್ನಳ್ಳಿ, ಈರಣ್ಣ ಮೇಟಿ, ಮಹೇಶ ನಾಗರಹಳ್ಳಿ, ಮಲ್ಲೇಶ ಹರಿಜನ, ಮಾರುತಿ ಉಪ್ಪಾರಗಡ್ಡಿ, ಪ್ರಭು ಪಾಟೀಲ, ಬಿ.ಡಿ. ಸೂರಪಕರ್, ಶಾಂತಾ ಮಠಪತಿ, ರೂಪಾ ಎಚ್.ಎಂ, ಸೌಮ್ಯ ಇ.ಬಿ, ಗೀತಾ ವಿ. ಉಪಸ್ಥಿತರಿದ್ದರು. ಶಿರಸ್ತೇದಾರ್ ಎಸ್.ಎಸ್. ಬಿಚ್ಚಾಲಿ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts