More

    ವೇತನ ಪರಿಷ್ಕರಣೆಗೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಧರಣಿ

    ದಾವಣಗೆರೆ: ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಡಿಯಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ವಿಭಾಗೀಯ ಕಚೇರಿ ಘಟಕ-1ರ ಎದುರು ಮಂಗಳವಾರ ಧರಣಿ ಸತ್ಯಾಗ್ರಹ ನಡೆಸಿದರು.
    ಧರಣಿ ಸಭೆಯಲ್ಲಿ ಮಾತನಾಡಿದ ಕೆಎಸ್‌ಆರ್‌ಟಿಸಿ ಸ್ಟಾಪ್ ಆ್ಯಂಡ್ ವರ್ಕರ್ಸ್ ಯೂನಿಯನ್ ದಾವಣಗೆರೆ ಘಟಕದ ಜಿಲ್ಲಾಧ್ಯಕ್ಷ ಎಚ್.ಜಿ.ಉಮೇಶ್, ಮೂಲ ವೇತನಕ್ಕೆ ಬಿ.ಡಿ.ಎ ಸೇರಿಸಿ, ಪರಿಷ್ಕೃತ ಮೂಲ ವೇತನದ ಶೇ.25ರಷ್ಟನ್ನು ಹೆಚ್ಚಳ ಮಾಡಿ, ವೇತನ ಶ್ರೇಣಿ ಸಿದ್ಧಪಡಿಸಬೇಕು. ಇನ್ಕ್ರಿಮೆಂಟ್ ದರ ಪರಿಷ್ಕೃತ ಮೂಲ ವೇತನದ ಶೇ.3ರಷ್ಟು ಇರಬೇಕು. ಆಯ್ಕೆ ಶ್ರೇಣಿ ಹಾಗೂ ಉನ್ನತ ಶ್ರೇಣಿಗಳ ವೇತನ ಶ್ರೇಣಿಯನ್ನು ಸಿದ್ಧಪಡಿಸಬೇಕು. ಸೇವಾವಧಿಯ ಪ್ರತಿ 10 ವರ್ಷಕ್ಕೊಮ್ಮೆ ಆಯ್ಕೆ ಶ್ರೇಣಿ ಬಡ್ತಿ ನೀಡಬೇಕೆಂದು ಆಗ್ರಹಿಸಿದರು.
    ಚಾಲಕ, ನಿರ್ವಾಹಕರು, ತಾಂತ್ರಿಕ ಹಾಗೂ ಆಡಳಿತ ಸಿಬ್ಬಂದಿಗೆ ಹಾಲಿ ಇರುವ ಬಾಟಾ, ಮಾಸಿಕ, ದೈನಂದಿನ ಭತ್ಯೆಗಳನ್ನು ಐದು ಪಟ್ಟು ಹೆಚ್ಚಿಸಬೇಕು. ಹೊಲಿಗೆ ಭತ್ಯೆ, ಷೂ, ಜೆರ್ಸಿ, ರೇನ್‌ಕೋಟ್ ಇತ್ಯಾದಿಗಳಿಗೆ ಕೊಡಲಾಗುವ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಬೇಕು. ಎಲ್ಲಾ ನಿರ್ವಾಹಕರು, ಕ್ಯಾಷಿಯರ್ ಗಳಿಗೆ ಸಮಾನವಾದ ಕ್ಯಾಷ್ ಅಲೋವೆನ್ಸ್ ನೀಡಬೇಕೆಂದು ಒತ್ತಾಯಿಸಿದರು.
    ಇ.ಎಸ್.ಐ ಮಾದರಿಯಲ್ಲಿ ಆಡಳಿತ ವರ್ಗದವರಿಂದ ನೌಕರರ ಮೂಲ ವೇತನದ ಶೇ. 35 ಹಾಗೂ ಕಾರ್ಮಿಕರಿಂದ ಶೇ.0.5 ವಂತಿಗೆ ಸಂಗ್ರಹಿಸಿ ಟ್ರಸ್ಟ್ ರಚಿಸಿ, ಸಾರಿಗೆ ನೌಕರರಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವ ಯೋಜನೆ ರೂಪಿಸಬೇಕು. ಇದನ್ನು ನಿವೃತ್ತ ಕಾರ್ಮಿಕರು ಮತ್ತು ಅವರ ಪತಿ-ಪತ್ನಿಗೂ ನೀಡಬೇಕು. ಮುಷ್ಕರ ಸಂದರ್ಭದಲ್ಲಿ ಸೇವೆಯಿಂದ ವಜಾಗೊಂಡ ನೌಕರರನ್ನು ಷರತ್ತಿಲ್ಲದೆ, ಮರು ನೇಮಕ ಮಾಡಬೇಕೆಂದು ಹೇಳಿದರು.
    ಎಲ್ಲಾ ನೌಕರರಿಗೂ ಪಾಳಿ ವ್ಯವಸ್ಥೆ ಜಾರಿ ಮಾಡಬೇಕು. ಮಹಿಳಾ ನೌಕರರಿಗೆ ಘಟಕ, ಬಸ್ ನಿಲ್ದಾಣ, ಟರ್ಮಿನಲ್ಗಳಲ್ಲಿ ವಿಶ್ರಾಂತಿ ಕೊಠಡಿ, ಶೌಚಗೃಹ ವ್ಯವಸ್ಥೆ, ಕುಡಿಯುವ ನೀರು ಹಾಗೂ ಘಟಕಗಳಲ್ಲಿ ಶಿಶುಪಾಲನಾ ಕೇಂದ್ರ ವ್ಯವಸ್ಥೆ ಮಾಡಿಕೊಡಬೇಕು. ಮಹಿಳಾ ನೌಕರರಿಗೆ ಅವರ ಆಯ್ಕೆಯಂತೆ ಗುಣಮಟ್ಟದ ಸಮವಸ್ತ್ರ ಕೊಡಬೇಕು. ಮಹಿಳಾ ನೌಕರರಿಗೆ 8 ಗಂಟೆಗಿಂತ ಅಧಿಕ ಕೆಲಸದಲ್ಲಿ ಕರ್ತವ್ಯ ನಿಯೋಜಿಸಬಾರದು.ಈ ಎಲ್ಲಾ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿ ಕೈಗಾರಿಕಾ ವಿವಾದ ಕಾಯ್ದೆ 1947ರ ಅನ್ವಯ ಜಂಟಿ ಕ್ರಿಯಾ ಸಮಿತಿಯ ಜತೆ ಕೈಗಾರಿಕಾ ಒಪ್ಪಂದ ಮಾಡಬೇಕು ಎಂದು ಒತ್ತಾಯಿಸಿದರು.
    ಧರಣಿ ಮುಷ್ಕರದಲ್ಲಿ ದಾವಣಗೆರೆ ಘಟಕದ ಪ್ರಧಾನ ಕಾರ್ಯದರ್ಶಿ ಮಿರ್ಜಾ ರೆಹಮತ್‌ಉಲ್ಲಾ, ಪ್ರಕಾಶ್, ಎಚ್.ಹನುಮಂತಪ್ಪ, ಕರಿಗೌಡಪ್ಪ, ಆನಂದನಾಯ್ಕ, ಎಂ.ಎನ್.ಲೋಕಪ್ಪ, ವಸಂತ್ ಇತರರಿದ್ದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts