More

    ವೃತ್ತಿ ಜತೆ ಕೃಷಿ ಪ್ರವೃತ್ತಿ, ಲಾಕ್‌ಡೌನ್ ಅವಧಿಯಲ್ಲಿ ಹವ್ಯಾಸಕ್ಕೆ ಮಹತ್ವ

    ಧನಂಜಯ ಗುರುಪುರ
    ಇವರು ವೃತ್ತಿಯಲ್ಲಿ ವಕೀಲ, ಪ್ರವೃತ್ತಿಯಲ್ಲಿ ಕೃಷಿಕ. ಅಜ್ಜನಿಂದ ಕೃಷಿ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಚಂದ್ರಹಾಸ ಪೂಜಾರಿ ಕೌಡೂರು, ವೃತ್ತಿಯೊಂದಿಗೆ ಪ್ರವೃತ್ತಿಗೂ ಮಹತ್ವ ನೀಡುವ ಕಾಲವಿದು ಎಂದು ವಿಶ್ಲೇಷಿಸಿದ್ದಾರೆ.

    ಗುರುಪುರ ಶಗ್ರೀ ವೈದ್ಯನಾಥ ದೈವಸ್ಥಾನದಲ್ಲಿ ವೈದ್ಯನಾಥ ಪಾತ್ರಿಯೂ ಆಗಿರುವ ಚಂದ್ರಹಾಸ ಕಳೆದ ಹಾಗೂ ಈ ವರ್ಷದ ಲಾಕ್‌ಡೌನ್ ಬಿಡುವಿನ ವೇಳೆ ಕೃಷಿಗೆ ಆದ್ಯತೆ ನೀಡುತ್ತಿದ್ದಾರೆ. ಮುಖ್ಯವಾಗಿ ಕಂಗು, ತೆಂಗು, ಬಾಳೆ ಬೆಳೆಗೆ ಆದ್ಯತೆ ನೀಡಿದ್ದಾರೆ. ದೈವಸ್ಥಾನ ಮತ್ತು ಭಂಡಾರದ ಮನೆ ಸುತ್ತಲಿನ ಭತ್ತದ ಕೃಷಿ ಪ್ರದೇಶಕ್ಕೆ ಹೊಂದಿಕೊಂಡಿರುವ ಖಾಲಿ ಜಾಗದಲ್ಲಿ ಸುಮಾರು 250ರಷ್ಟು ಅಡಕೆ ಗಿಡ ನೆಟ್ಟಿರುವ ಇವರು, ಭವಿಷ್ಯದಲ್ಲಿ ಗದ್ದೆ ಬದುಗಳ ಎರಡೂ ಪಾರ್ಶ್ವದಲ್ಲಿ ಇನ್ನೂ 300-400 ಅಡಕೆ ಗಿಡ ನೆಡಲು ನಿರ್ಧರಿಸಿದ್ದಾರೆ.

    ಕಂಗಿನ ತೋಟದಲ್ಲಿ ಉಪಬೆಳೆಯಾಗಿ ಬಾಳೆ ಗಿಡ ನಳನಳಿಸುತ್ತಿದ್ದು, ಫಲ ನೀಡುವ ಹಂತಕ್ಕೆ ಬಂದಿದೆ. ಪ್ರತಿದಿನ ತೋಟ ಸುತ್ತಾಡಿ ತೆಂಗು, ಕಂಗು ಮತ್ತು ಬಾಳೆ ಗಿಡಗಳತ್ತ ಗಮನ ಹರಿಸುತ್ತ ಖುದ್ದಾಗಿ ಗಿಡಗಳಿಗೆ ನೀರು ಎರೆಯುತ್ತಾರೆ. ತೋಟ ಚಿಕ್ಕದಾದರೂ ಚೊಕ್ಕದಾಗಿದ್ದು, ಅನುಕರಣೆಗೆ ಯೋಗ್ಯವಾಗಿದೆ.
    ಯುವಜನರು ಕೆಲಸವಿಲ್ಲವೆಂದು ಹೇಳುವ ಬದಲು ತಮ್ಮಲ್ಲಿರಬಹುದಾದ ಸಣ್ಣ ಜಾಗದಲ್ಲೂ ಕೃಷಿಗೆ ಆದ್ಯತೆ ನೀಡಬೇಕು. ಕೃಷಿಯ ಖುಷಿಯ ಜತೆಗೆ ಆದಾಯವೂ ಇದೆ ಎನ್ನುತ್ತಾರೆ ಇವರು.

    ನನ್ನದು ಕೆಲಸವಿಲ್ಲದ ಸಮಯದಲ್ಲಿ ಮಾತ್ರ ತೋಟಗಾರಿಕೆಯಲ್ಲ. ಭತ್ತದ ಬೇಸಾಯವೂ ಇದೆ. ವಕೀಲಿ ವೃತ್ತಿಯ ಒತ್ತಡದಲ್ಲೂ ಪ್ರತಿನಿತ್ಯ ತೋಟದ ಆಗುಹೋಗುಗಳತ್ತ ಗಮನ ಹರಿಸುತ್ತೇನೆ. ವಕೀಲ ವೃತ್ತಿಯಂತೆ ಕೃಷಿ, ತೋಟಗಾರಿಕೆಯಲ್ಲೂ ಖುಷಿ ಇದೆ. ತೋಟಕ್ಕೆ ಸಾವಯವ ಗೊಬ್ಬರ ಬಳಸುತ್ತಿದ್ದೇನೆ. ಖಾಲಿ ಬಿದ್ದಿರುವ ಸಣ್ಣ ಜಾಗದಲ್ಲಿ 10ರಿಂದ 20 ಕಂಗು ಅಥವಾ ತೆಂಗು, ಬಾಳೆಗಿಡ ನೆಟ್ಟು ಅಲ್ಪಾವಧಿಯಲ್ಲಿ ಆದಾಯ ಪಡೆಯಲು ಸಾಧ್ಯವಿದೆ.
    ಚಂದ್ರಹಾಸ ಕೌಡೂರು, ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts