More

    ವೀರಶೈವ ಲಿಂಗಾಯತ ಮಠಗಳ ಕೊಡುಗೆ ಅಪಾರ

    ಬಸವನಬಾಗೇವಾಡಿ: ವೀರಶೈವ ಲಿಂಗಾಯತ ಮಠಮಾನ್ಯಗಳು ದಾಸೋಹ, ಶಿಕ್ಷಣ, ವಸತಿ ನೀಡುವ ಜತೆಗೆ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಸಮಾಜದಲ್ಲಿ ಸಮಾನತೆ ಸಾರುತ್ತಿವೆ ಎಂದು ಆಲಗೂರಿನ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಡಾ. ಮಹಾದೇವ ಶ್ರೀಗಳು ಹೇಳಿದರು.

    ತಾಲೂಕಿನ ಮನಗೂಳಿ ಪಟ್ಟಣದ ಹಿರೇಮಠದ ಆವರಣದಲ್ಲಿ ಕಲಬುರಗಿ ಶರಣಬಸವೇಶ್ವರ ಪುರಾಣ ಪ್ರಾರಂಭೋತ್ಸವದ ಸಾನ್ನಿಧ್ಯ ವಹಿಸಿ ಗುರುವಾರ ಅವರು ಮಾತನಾಡಿದರು.

    ರಾಜ್ಯದಲ್ಲಿ ಬಡಕುಟುಂಬದ ಮಕ್ಕಳಿಗೆ ಒಂದು ಕಾಲದಲ್ಲಿ ಶಿಕ್ಷಣ ದೊರೆಯದ ಸಂದರ್ಭದಲ್ಲಿ ರಾಜ್ಯದ ಅನೇಕ ವೀರಶೈವ ಲಿಂಗಾಯತ ಮಠಮಾನ್ಯಗಳು ಶಿಕ್ಷಣ ನೀಡಿ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಿವೆ. ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಂಡು ಜನರನ್ನು ಜ್ಞಾನದತ್ತ ಸಾಗಿಸುವ ಕಾರ್ಯವನ್ನು ನಿರಂತರವಾಗಿ ವೀರಶೈವ ಲಿಂಗಾಯತ ಮಠಮಾನ್ಯಗಳು ಮಾಡುತ್ತಿವೆ ಎಂದು ಹೇಳಿದರು.

    ಸಾನ್ನಿಧ್ಯ ವಹಿಸಿದ್ದ ಯರನಾಳ ವಿರಕ್ತಮಠದ ಗುರುಸಂಗನಬಸವ ಶ್ರೀಗಳು ಮಾತನಾಡಿ, ಪ್ರತಿಯೊಬ್ಬ ಮನುಷ್ಯನಿಗೆ ತನ್ನ ಕುಟುಂಬದ ಜಂಜಾಟದಲ್ಲಿ ಶಾಂತಿ, ನೆಮ್ಮದಿ ದೊರೆಯಬೇಕಾದರೆ ಇಂಥ ಧಾರ್ಮಿಕ ಮತ್ತು ಪುರಾಣ ಪ್ರವಚನಗಳಲ್ಲಿ ಭಾಗಿಯಾಗಬೇಕು. ಶರಣರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಸುಂದರವಾಗಿ ಸಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

    ಜೆ.ಡಿ.ಎಸ್. ಮುಖಂಡ ಅಪ್ಪುಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಡಿ.ಸಿ.ಸಿ. ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ಉದ್ಘಾಟನೆ ನೆರವೇರಿಸಿದರು. ಮನಗೂಳಿಯ ಪಟ್ಟಿಕಂಥಿ ಡಾ. ಮಹಾಂತಲಿಂಗ ಶ್ರೀಗಳು, ಹುಲಜಂತಿ ಮಾಳಿಂಗರಾಯ ಮಹಾರಾಜರು, ಅಭಿನವ ಸಂಗನಬಸವ ಶ್ರೀಗಳು, ಪುರಾಣ ಪಠಣಕಾರ ಮಸೂತಿಯ ಡಾ. ಶಿವಲಿಂಗ ಶರಣರು, ಮುಖ್ಯ ಅತಿಥಿಯಾಗಿ ವಿಶ್ವನಾಥ ಪಾಟೀಲ, ಬಿ.ಕೆ. ಕಲ್ಲೂರ, ಈರಪ್ಪ ಹುಣಿಸಿನಕಟ್ಟಿ ಹಾಗೂ ಇತರರಿದ್ದರು. ಎ.ಐ. ಗೆಣ್ಣೂರ ನಿರೂಪಿಸಿದರು. ಮಹಾಂತೇಶ ಮನಗೂಳಿ ಸ್ವಾಗತಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts