More

    ವಿಶ್ವ ಗುರುವಾಗುವತ್ತ ಭಾರತ ಹೆಜ್ಜೆ

    ಬೀದರ್: ಭಾರತ ಮೊದಲಿಗಿಂತಲೂ ಬಲಿಷ್ಠಗೊಂಡಿದೆ. ಪಾಕಿಸ್ತಾನ ಮಾತ್ರವಲ್ಲ, ಚೀನಾ ಸಹ ನಮಗೆ ಕೆಣಕಲು ಈಗ ನೂರು ಬಾರಿ ಯೋಚನೆ ಮಾಡಬೇಕಾಗುತ್ತಿದೆ. ದೇಶ ಕ್ರಮೇಣ ವಿಶ್ವಗುರುವಾಗುತ್ತ ಹೆಜ್ಜೆ ಇರಿಸಿದೆ ಎಂದು ಖ್ಯಾತ ಚಿಂತಕ, ವಿಜಯವಾಣಿ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.

    ಯುವ ಬ್ರಿಗೇಡ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಿದ್ದ ಸ್ವರಾಜ್ಯಕ್ಕೆ ಮುಕ್ಕಾಲು ನೂರು ಸಂಭ್ರಮಕ್ಕೆ ಕನ್ನಡ ತೇರು ಅಭಿಯಾನದ ಕಲ್ಯಾಣ ಕರ್ನಾಟಕ ಭಾಗದ ಸಮಾರೋಪದಲ್ಲಿ ಮಾತನಾಡಿದ ಅವರು, ಭಾರತ ಈಗ ಬದಲಾಗಿದೆ. ಇಡೀ ವಿಶ್ವ ನಮ್ಮ ಕಡೆಗೆ ತಿರುಗಿ ನೋಡುತ್ತಿದೆ. ವಿಶ್ವದಲ್ಲಿ ಯುದ್ಧ ತಡೆಯಲು ಜಾಗತಿಕ ನಾಯಕರ ಸಮಿತಿಯಲ್ಲಿ ಭಾರತ ಇರಬೇಕೆಂದು ವಿಶ್ವದ ಅನೇಕ ನಾಯಕರು ಒತ್ತಾಯಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

    ಭಾರತ ಇಂದು ಕೇವಲ ಭೌತಿಕವಾಗಿ ಸಮರ್ಥವಾಗಿಲ್ಲ, ಮಾನಸಿಕವಾಗಿಯೂ ಬಲಿಷ್ಠವಾಗಿದೆ. ಭಾರತ-ಪಾಕಿಸ್ತಾನ ಮಧ್ಯೆ ನಡೆದಿದ್ದ ಮೊದಲ ಯುದ್ಧ ನಿಲ್ಲಿ ಸದಿದ್ದರೆ ಗೋ ಸರಬರಾಜು ಮಾಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ ಅಮೆರಿಕಕ್ಕೆ ನಿಮ್ಮ ಗೋ ಬೇಕಿಲ್ಲ ಎಂದು ಧೈರ್ಯದಿಂದ ಹೇಳಿದ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಸ್ಮರಿಸಿದ ಸೂಲಿಬೆಲೆ, ಇಂಥ ಮಹಾನ್ ವ್ಯಕ್ತಿಗಳಿಂದಲೇ ಭಾರತ ಬಲಿಷ್ಠಗೊಳ್ಳುತ್ತ ಬಂದಿದೆ. ಇಂದಿನ ಮಕ್ಕಳಲ್ಲಿ ರಾಷ್ಟ್ರ ಪ್ರೇಮ ತುಂಬುವ, ಮುಂದಿನ ಪೀಳಿಗೆಗೆ ಅದನ್ನು ಹೇಳುವ ಉದ್ದೇಶದಿಂದಲೇ ಈ ಕನ್ನಡದ ತೇರು ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

    ಬಿಜೆಪಿ ಮುಖಂಡ ಗುರುನಾಥ ಕೊಳ್ಳುರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಸಮಗ್ರ ವಿಕಾಸದತ್ತ ಸಾಗಿದೆ. ಅಮೃತ ಮಹೋತ್ಸವ ಹೊತ್ತಿನಲ್ಲಿ ವಿಶ್ವವೇ ನಮ್ಮತ್ತ ನೋಡುತ್ತಿದೆ. ದೇಶದ ಸ್ವಾತಂತ್ರ್ಯಕ್ಕೆ ಕರ್ನಾಟಕ ಕೊಡುಗೆ ಅಪಾರ. ಕನ್ನಡದ ತೇರು ಮೂೂಲಕ ಚಕ್ರವರ್ತಿ ಸೂಲಿಬೆಲೆ ಅವರು ಕನ್ನಡಿಗ ವೀರರ ರೋಚಕ ಹೋರಾಟದ ಚರಿತ್ರೆ ಜನರಿಗೆ ತಲುಪಿಸಿ, ದೇಶಪ್ರೇಮ ಹೆಚ್ಚಿಸುತ್ತಿರುವುದು ಮಾದರಿಯಾಗಿದೆ ಎಂದರು.

    ಕಸಾಪ ಜಿಲ್ಲಾ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಿಡಿಎ ಅಧ್ಯಕ್ಷ ಬಾಬು ವಾಲಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ,ಪ್ರಮುಖರಾದ ಶಶಿಧರ ಹೊಸಳ್ಳಿ, ಎಂ.ಎಸ್.ಮನೋಹರ, ಬಾಬುರಾವ ದಾನಿ, ಶಿವಶಂಕರ ಟೋಕರೆ, ತರುಣ್ ನಾಗಮಾರಪಳ್ಳಿ, ರಾಜಶೇಖರ ಮಂಗಲಗಿ, ಪರಮೇಶ್ವರ ಬಿರಾದಾರ್ ಇತರರಿದ್ದರು.ಯುವ ಬ್ರಿಗೇಡ್ ರಾಜ್ಯ ಸಂಚಾಲಕ ವರ್ಧಮಾನ ತ್ಯಾಗಿ ಪ್ರಾಸ್ತಾವಿಕ ಮಾತನಾಡಿದರು. ಶಿವಕುಮಾರ ಕಟ್ಟೆ ಸ್ವಾಗತಿಸಿದರು. ಕಸಾಪ ಯುವ ಘಟಕ ಜಿಲ್ಲಾಧ್ಯಕ್ಷ ಗುರುನಾಥ ರಾಜಗೀರಾ ನಿರೂಪಣೆ ಮಾಡಿದರು. ವೀರೇಶ ಸ್ವಾಮಿ ವಂದಿಸಿದರು.

    ಮಹಾಬಲಿ ಹನುಮಾನ ಕನ್ನಡಿಗ

    ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಲಂಕೆಯನ್ನೇ ಸುಟ್ಟ ಮಹಾವೀರ ಶ್ರೀ ಹನುಮಾನ ದೇವರು ಕನ್ನಡಿಗ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು. ಸೀತಾ ಮಾತೆಯ ಅಪಹರಣವಾದಾಗ ತನ್ನಲ್ಲಿರುವ ಶಕ್ತಿ, ಸಾಮಥ್ರ್ಯಗಳನ್ನು ಬಳಸಿ ಲಂಕೆಗೆ ಜಿಗಿದು, ಮಾತೆಯನ್ನು ಭೇಟಿ ಮಾಡಿ ಬಂದ ಹನುಮನನ್ನು ಕನ್ನಡಿಗ ಎಂದು ಹೇಳಿಕೊಳ್ಳಲು ನಮಗೆಲ್ಲ ಹೆಮ್ಮೆ ಎನಿಸುತ್ತದೆ. ದೇಶದ ಇತಿಹಾಸ, ಸಂಸ್ಕೃತಿ, ಪರಂಪರೆ ಶ್ರೀಮಂತಗೊಳಿಸುವಲ್ಲಿ ಕರ್ನಾಟಕದ ಕೊಡುಗೆ ಅಪಾರವಿದೆ ಎಂದು ಬಣ್ಣಿಸಿದರು.


    ನುಡಿ ತೇರಿನ ಮೆರವಣಿಗೆ ವೈಭವ

    ಕನ್ನಡ ತೇರು ಅಭಿಯಾನ ನಿಮಿತ್ತ ನಗರದಲ್ಲಿ ಭವ್ಯ ಮೆರವಣಿಗೆ ನಡೆಯಿತು. ಕರ್ನಾಟಕ ಫಾರ್ಮಸಿ ಕಾಲೇಜು ಆವರಣದಲ್ಲಿ ಮೆರವಣಿಗೆಗೆ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಚಾಲನೆ ನೀಡಿದರು. ಮೈಲೂರು ಕ್ರಾಸ್, ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ಸರ್ಕಲ್, ಅಂಬೇಡ್ಕರ್ ವೃತ್ತದ ಮೂಲಕ ರಂಗಮಂದಿರಕ್ಕೆ ತಲುಪಿ ಮೆರವಣಿಗೆ ಕೊನೆಗೊಂಡಿತು. ಕೆಆರ್ ಇ ನ್ಯಾಸ್  ಅಧ್ಯಕ್ಷ ಡಾ.ಬಸವರಾಜ ಪಾಟೀಲ್ ಅಷ್ಟೂರ್, ಬಿಡಿಎ ಅಧ್ಯಕ್ಷ ಬಾಬು ವಾಲಿ, ಎಚ್ಕೆಇ ಆಡಳಿತ ಮಂಡಳಿ ಸದಸ್ಯ ಡಾ.ರಜನೀಶ್ ವಾಲಿ, ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ, ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಕಾಶೀನಾಥ ನೌಬಾದೆ, ಕರ್ನಾಟಕ ಪಿಯು ಕಾಲೇಜಿನ ಪ್ರಾಚಾರ್ಯ ಡಾ.ಬಸವರಾಜ ಬಲ್ಲೂರ್, ಸಹಜಾನಂದ ಕಂದಗೂಳೆ, ನಿತಿನ್ ಕರ್ಪೂರ ಇತರರಿದ್ದರು. ಒಂದು ಕಿಮೀ ಉದ್ದದ ಕನ್ನಡ ಧ್ವಜವನ್ನು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪ್ರದರ್ಶಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts