More

    ವಿವೇಕಾನಂದ, ನೇತಾಜಿ ಭಾರತೀಯತೆಯ ಐಕಾನ್-ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿಕೆ 

    ದಾವಣಗೆರೆ: ಸ್ವಾಮಿ ವಿವೇಕಾನಂದರು, ಸುಭಾಷ್ ಚಂದ್ರ ಬೋಸ್ ಇಬ್ಬರಲ್ಲೂ ಭಾರತೀಯ ಪರಂಪರೆಯ ಬಗ್ಗೆ ಅಪಾರ ಅಭಿಮಾನವಿತ್ತು. ಹಾಗಾಗಿಯೇ ಅವರು ಜಾಗತಿಕ ಮಟ್ಟದಲ್ಲಿ ಭಾರತೀಯತೆ ಎತ್ತಿ ಹಿಡಿದರು ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
    ದಾವಣಗೆರೆಯ ಮಿತ್ರಮಂಡಳಿ ವತಿಯಿಂದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ, ಸ್ವಾಮಿ ವಿವೇಕಾನಂದ ಹಾಗೂ ಸುಭಾಷ್‌ಚಂದ್ರ ಬೋಸ್ ಅವರ ಜಯಂತ್ಯುತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ’ವೀರ ಭಾರತ ಧೀರ ಪಥ’ ಕಾರ್ಯಕ್ರಮದಲ್ಲಿ ಮುಖ್ಯಭಾಷಣ ಮಾಡಿದರು.
    ಇಡೀ ಜಗತ್ತು ತುಚ್ಛವಾಗಿ ಕಾಣುತ್ತಿದ್ದ ಭಾರತವನ್ನು ಸರ್ವ ಶ್ರೇಷ್ಠವನ್ನಾಗಿಸಿದ್ದು ಸ್ವಾಮಿ ವಿವೇಕಾನಂದ ಮತ್ತು ಸುಭಾಷ್ ಚಂದ್ರ ಬೋಸ್ ಎಂಬ ಎರಡು ಅಪರೂಪದ ವ್ಯಕಿತ್ವಗಳು ಎಂದು ಬಣ್ಣಿಸಿದರು.
    ವಿವೇಕಾನಂದರು ದೇಶ ಸುತ್ತಾಡಿದಾಗ ಅತಿ ಯಾತನೆ ಎದುರಿಸಿದರು. ವಿಶ್ವ ಧರ್ಮ ಸಮ್ಮೇಳನದ ವೇದಿಕೆ ಹತ್ತುವುದೂ ಕಷ್ಟವಾಗಿತ್ತು. ಆದರೂ, ಅವರಲ್ಲಿ ಆತ್ಮವಿಶ್ವಾಸ ಸದಾ ಜಾಗೃತವಾಗಿತ್ತು. ಕಷ್ಟಗಳು ಬಂದಾಗಲೂ ಹಿಂದೆ ಸರಿಯಲಿಲ್ಲ. ಅಂತಹ ಧೀಶಕ್ತಿ ಅವರಲ್ಲಿತ್ತು ಎಂದು ಬಣ್ಣಿಸಿದರು.
    ಗೋದ್ರಾದಲ್ಲಿ 59 ಮಂದಿ ಕರ ಸೇವಕರು ಜೀವಂತವಾಗಿ ದಹಿಸಲ್ಪಟ್ಟಾಗ ಪ್ರತಿರೋಧ ನಡೆಯಿತು. ಆಗಿನ ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಅವರನ್ನು ವಿಚಾರಣೆ ನಡೆಸಿದ ಎಸ್‌ಐಟಿ, ಸುಪ್ರೀಂ ಕೋರ್ಟ್ ಕ್ಲೀನ್‌ಚಿಟ್ ನೀಡಿದ್ದರೂ ಅವರ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಭಾರತವನ್ನು ಆಂತರಿಕವಾಗಿ ಧ್ವಂಸ ಮಾಡುವ ನಿಟ್ಟಿನಲ್ಲಿ ಇನ್ನೂ ಕೆಲವು ವರದಿ ಬರಲಿವೆ. ಭಾರತೀಯರು ಅಂತಹ ಅಪಪ್ರಚಾರ ವರದಿಯ ಹಿಂದಿನ ರಹಸ್ಯ ತಿಳಿಯಬೇಕು. ಇಲ್ಲವಾದಲ್ಲಿ ಕಷ್ಟ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.
    ರಾಮಕೃಷ್ಣಾಶ್ರಮದ ಅಧ್ಯಕ್ಷ ತ್ಯಾಗೀಶ್ವರಾನಂದ ಜೀ ಮಾತನಾಡಿ, ವಿವೇಕಾನಂದರು ಪರಕೀಯ ದಾಸ್ಯದಲ್ಲಿದ್ದ ಭಾರತವನ್ನು ವಿಶ್ವದಲ್ಲೇ ಎತ್ತರಕ್ಕೆ ಕರೆದೊಯ್ದರು. ನೇತಾಜಿ ಅವರನ್ನೇ ಅನುಸರಿಸಿದರು. ತೀಕ್ಷ್ಣ್ಣ ಬುದ್ದಿವಂತಿಕೆ, ಅಪರಿಮಿತ ದೇಶಪ್ರೇಮ ಹೊಂದಿದ್ದ ಇಬ್ಬರೂ ಕೂಡ ಒಂದು ನಾಣ್ಯದ ಎರಡು ಮುಖಗಳು ಎಂದರು.
    ದುಸ್ಥಿತಿಯಲ್ಲಿದ್ದ ಭಾರತವನ್ನು ವಿವೇಕಾನಂದರು ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ ರಾಷ್ಟ್ರ ಎಂದು ಬಿಂಬಿಸಿದ್ದರು. ಇದರ ಹಿಂದೆ ಅವರಿಗಿದ್ದ
    ಎದೆಗಾರಿಕೆ, ಉತ್ಸಾಹ, ರಾಷ್ಟ್ರೀಯತೆ ಬಗ್ಗೆ ಅರಿವಾಗಲಿದೆ. ಸನಾತನ ಧರ್ಮದ ಅಂತರಂಗದ ತಿರುಳನ್ನು ವಿಶ್ವದ ವೇದಿಕೆ ಮೇಲೆ ಬಿತ್ತರಿಸಿದಾಗ ಜಗತ್ತಿನ ಜನರು ದಂಗಾಗಿದ್ದರು. ಆದರೆ ಇಂತಹ ಶ್ರೇಷ್ಠ ಭಾರತದಲ್ಲಿ ನಮ್ಮ ಜವಾಬ್ದಾರಿ ಏನಾಗಿದೆ ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.
    ವಿವೇಕಾನಂದರು ವ್ಯಕ್ತಿ ಮತ್ತು ಜನಾಂಗಕ್ಕೆ ಶ್ರೇಯಸ್ಕರವಾಗಿದ್ದನ್ನು ತಿಳಿಸಿದರು. ಭಾರತವನ್ನು ದುಸ್ಥಿತಿಯಿಂದ ಹೊರ ತರಲು ಯುವಜನಾಂಗದ ಶಕ್ತಿ ಜಾಗೃತಗೊಳಿಸಿದರು. ನಮಗೆ ಬೇಕಿರುವ ರಾಷ್ಟ್ರೀಯ ಭಾವನೆ, ನಾವೆಲ್ಲಾ ಒಂದು ಎನ್ನುವ ದಿವ್ಯೌಷಧ ನೀಡಿದರು ಎಂದು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಗುಂಡಿ ರಾಜಶೇಖರ್, ಎಚ್‌ಪಿ.ವಿಶ್ವಾಸ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts