More

    ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ


    ಚಾಮರಾಜನಗರ : ಅಂಗನವಾಡಿ ಕಾರ್ಯಕರ್ತರನ್ನು ಚುನಾವಣಾ ಕೆಲಸಕ್ಕೆ ಬಳಸಬಾರದು, 12 ಗಂಟೆಗಳ ಕೆಲಸದ ಅವಧಿ ಅಧಿಸೂಚನೆಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಹಾಗೂ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.


    ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಸೇರಿದ ಪ್ರತಿಭಟನಾಕಾರರು ಶ್ರೀಭುವನೇಶ್ವರಿ ವೃತ್ತಕ್ಕೆ ತೆರಳಿ ರಸ್ತೆ ತಡೆ ನಡೆಸಿದರು. ಬಳಿಕ ಬಿ.ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ಸಾಗಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


    ಈ ಸಂದರ್ಭದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ರಾಜ್ಯ ಕಾರ್ಯದರ್ಶಿ ರಾಮಕೃಷ್ಣ ಮಾತನಾಡಿ, 1942 ರಂದು ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂದು ಕ್ವಿಟ್ ಇಂಡಿಯಾ ಚಳವಳಿ ನಡೆಸಲಾಗಿತ್ತು. ನೆನಪಿನಾರ್ಥ 81ನೇ ವಾರ್ಷಿಕೋತ್ಸವ ಆಚರಣೆ ಮಾಡುತ್ತಿದ್ದೇವೆ. ಪ್ರಸ್ತುತ ದೇಶ ಆರ್ಥಿಕ ಅಸಮಾನತೆಯಲ್ಲಿ ನಲುಗುತ್ತಿದೆ. ರೈತ, ಕಾರ್ಮಿಕ ವಿರೋಧಿ ಕಾನೂನು ಸಂಸತ್ತಿನಲ್ಲಿ ಜಾರಿಯಾಗುತ್ತಿದೆ. ದುಡಿಯುವವರಿಗೆ ಕನಿಷ್ಠ ಕೂಲಿಯೂ ಸಿಗದಂತೆ ಕೇಂದ್ರ ಸರ್ಕಾರ ಮಸೂದೆಗಳನ್ನು ಜಾರಿ ಮಾಡಿದೆ ಎಂದು ಆಕ್ರೋಶ ಹೊರ ಹಾಕಿದರು.


    ರಾಜ್ಯದಲ್ಲಿ ಮಕ್ಕಳ ಅಪೌಷ್ಟಿಕತೆ ಮತ್ತು ರಕ್ತಹೀನತೆ ಪ್ರಮಾಣವೂ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಮಕ್ಕಳೊಡನೆ ಮತ್ತು ಗರ್ಭಿಣಿ, ಬಾಣಂತಿಯರೊಡನೆ ಹೆಚ್ಚಿನ ಒಡನಾಡಬೇಕಿದೆ. ಆದರೆ ಇಂದು ದಾಖಲೆಗಳನ್ನು ನಿರ್ವಹಿಸುವ ತಾಂತ್ರಿಕ ಕೆಲಸಗಳೇ ಹೆಚ್ಚಾಗಿ ಮಕ್ಕಳ ಬಗ್ಗೆ ಹೆಚ್ಚಿನ ಗಮನಕೊಡಲು ಆಗುತ್ತಿಲ್ಲ. ಕಾರ್ಯಕರ್ತರನ್ನು ಇನ್ನಿತರೆ ಕೆಲಸಗಳಿಗೆ ನೇಮಿಸುವುದನ್ನು ಬಿಡಬೇಕು. ಕಾರ್ಮಿಕರಿಗೆ 12 ಗಂಟೆಗಳ ಅವಧಿ ಅಧಿಸೂಚನೆಯನ್ನು ವಾಪಸ್ ಆಗಬೇಕು. ಕನಿಷ್ಠ ವೇತನವನ್ನು ನಿಗದಿಗೊಳಿಸಬೇಕು. ಕಾರ್ಮಿಕ ವಿರೋಧಿ ಮಸೂದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.


    ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಕೆ. ಸುಜಾತಾ, ಪ್ರಧಾನ ಕಾರ್ಯದರ್ಶಿ ಎ.ನಾಗಮಣಿ, ಖಜಾಂಚಿ ಜೆ.ಭಾಗ್ಯ, ಶಾಹಿದಾ ಬಾನು, ಮೀನಾಕ್ಷಿ, ಸುಜಾತಾ, ಚಿಕ್ಕನಾಗಮ್ಮ, ಗುರುಲಿಂಗಮ್ಮ, ಸುರೇಶ್ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts