More

    ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

    ಬೆಳಗಾವಿ: ಸರ್ಕಾರದ ವಿವಿಧ ಪ್ರತಿಷ್ಠಾನಗಳಲ್ಲಿ ಸ್ಥಾನಮಾನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮಂಗಳವಾರ ಜಿಲ್ಲೆಯ ಸಾಹಿತಿಗಳು, ಕಲಾವಿದರು, ಶಿಕ್ಷಣ ತಜ್ಞರು ಪ್ರತಿಭಟಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

    ಸದ್ಯ ರಾಜ್ಯದಲ್ಲಿರುವ ಸುಮಾರು 24 ಪ್ರತಿಷ್ಠಾನಗಳ ಅಧ್ಯಕ್ಷರು ಹಾಗೂ ಸದಸ್ಯರು ಬಹಳ ವರ್ಷಗಳಿಂದ ಬದಲಾಗಿಲ್ಲ. ಪ್ರತಿ ಮೂರು ವರ್ಷಕ್ಕೊಮ್ಮೆ ಅಧ್ಯಕ್ಷ, ಸದಸ್ಯರನ್ನು ಬದಲಾವಣೆ ಮಾಡಿ ಹೊಸಬರಿಗೆ ಅವಕಾಶ ಕಲ್ಪಿಸಿಕೊಡಬೇಕು. ಆಯಾ ಜಿಲ್ಲೆಗಳ ವ್ಯಾಪ್ತಿಗೆ ಅನುಗುಣವಾಗಿ ರಾಜ್ಯೋತ್ಸವ ಪ್ರಶಸ್ತಿಗಳ ಸಂಖ್ಯೆಯನ್ನು ನಿಗದಿಪಡಿಸಬೇಕು. ಅಲ್ಲದೆ, ಕನ್ನಡಕ್ಕಾಗಿ ಹೋರಾಡಿದ, ಶ್ರಮಿಸುತ್ತಿರುವ ಅರ್ಹರಿಗೆ ಪ್ರಶಸ್ತಿಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

    2021-22ನೇ ಸಾಲಿನ ಅವಧಿಯಲ್ಲಿ ಸಣ್ಣ ಜಿಲ್ಲೆಯಾಗಿರುವ ಹಾವೇರಿ ಮತ್ತು ಬಾಗಲಕೋಟೆಗೆ 2 ರಿಂದ 3 ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಆದರೆ, ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಗೆ ಒಂದೇ ಒಂದು ಪ್ರಶಸ್ತಿ ನೀಡಲಿಲ್ಲ. ಜಿಲ್ಲೆಗೆ ಮೀಸಲಾಗಿರುವ ಪ್ರಶಸ್ತಿಗಳು ಬೇರೆ ಜಿಲ್ಲೆಯವರಿಗೆ ನೀಡಲಾಗುತ್ತಿದೆ. ಇದರಿಂದ ಗಡಿ ಭಾಗದ ಜಿಲ್ಲೆಯ ಸಾಹಿತಿಗಳಿಗೆ, ಕಲಾವಿದರಿಗೆ, ಹೋರಾಟಗಾರರು ಹಾಗೂ ತಜ್ಞರು ಪ್ರಶಸ್ತಿಗಳಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದರು.

    ನಮ್ಮ ಭಾಗದ ವಿಶ್ವವಿದ್ಯಾಲಯಗಳು ಪದವಿ ಪ್ರಧಾನ ಸಮಾರಂಭದಲ್ಲಿ ನೀಡುವ ಗೌರವ ಡಾಕ್ಟರೇಟ್ ಪದವಿಗಳು ಆಯಾ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಬರುವ ಸಾಧಕರಿಗೆ ನೀಡಬೇಕು, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಪದವಿ ಪ್ರಧಾನದಲ್ಲಿ ಬೆಳಗಾವಿ ಜಿಲ್ಲೆಯ ಒಬ್ಬರಿಗೂ ಗೌರವ ಡಾಕ್ಟರೇಟ್ ನೀಡದೆ ಅನ್ಯಾಯ ಮಾಡಲಾಗಿದೆ. ಈ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಬೇಕು ಎಂದು ಆಗ್ರಹಿಸಿದರು.

    5 ವರ್ಷಗಳಿಂದ ಬೆಳಗಾವಿ ಭಾಗದ ಸಾಹಿತಿಗಳು ಖ್ಯಾತ ರಂಗಭೂಮಿ ಕಲಾವಿದ ನಾಟ್ಯಭೂಷಣ, ಏಣಗಿ ಬಾಳಪ್ಪ, ಎಸ್.ಡಿ.ಇಂಚಲ, ಖ್ಯಾತ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕ, ಖ್ಯಾತ ಗಾಯಕ ಕುಮಾರ ಗಂಧರ್ವ ಹಾಗೂ ಮಕ್ಕಳ ಕವಿ, ಉಳಿದ ಅವರ ಹೆಸರಿನಲ್ಲಿ ಪ್ರತಿಷ್ಠಾನ ರಚಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಲಾಭವಾಗಿಲ್ಲ ಎಂದು ದೂರಿದ್ದಾರೆ. ಸಾಹಿತಿ ಬಿ.ಎಸ್.ಗವಿಮಠ, ಡಾ.ಎಚ್.ಬಿ.ರಾಜಶೇಖರ, ಬಸವರಾಜ ಜಗಜಂಪಿ, ಯ.ರು.ಪಾಟೀಲ, ಬಸವರಾಜ ಗಾರ್ಗಿ, ಡಾ.ಗುರುದೇವಿ ಹುಲ್ಲೆಪ್ಪನವರಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts