More

    ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

    ಧಾರವಾಡ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಜಿಲ್ಲಾ ಘಟಕದ ನೇತೃತ್ವದಲ್ಲಿ ನೂರಾರು ಮಹಿಳೆಯರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

    ಇಲ್ಲಿನ ಕಲಾಭವನ ಆವರಣದಿಂದ ಪ್ರತಿಭಟನಾ ರ‍್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ನಿರುದ್ಯೋಗದಿಂದ ಜನರು ಮೊದಲೇ ಹೈರಾಣಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸಿಲಿಂಡರ್ ದರ ಹೆಚ್ಚಿಸಿ ಮತ್ತಷ್ಟು ಸಂಕಷ್ಟಕ್ಕೆ ಸಲುಕಿಸಿದೆ. ಹೀಗಾಗಿ ಕೂಡಲೇ ಅಡುಗೆ ಅನಿಲ ದರ ಹೆಚ್ಚಳ, ಪಡಿತರ ಕಡಿತದ ಪ್ರಸ್ತಾವ ಕೈಬಿಡಬೇಕು ಎಂದು ಆಗ್ರಹಿಸಿದರು.

    ಹಸಿವೆ ಹಾಗೂ ಅಪೌಷ್ಟಿಕತೆಯಿಂದ ಚಿಕ್ಕ ಮಕ್ಕಳು ಮೃತಪಡುತ್ತಿದ್ದರೆ, ರಾಜ್ಯ ಸರ್ಕಾರ ಪ್ರತಿ ಲೀ. ಹಾಲಿಗೆ 2 ರೂ. ಹೆಚ್ಚಿಸಿದೆ. ವೃದ್ಧರಿಗೆ ಬರಬೇಕಾದ ವೃದ್ಧಾಪ್ಯ ವೇತನವೂ ಕೆಲ ತಿಂಗಳಿಂದ ಬಂದಿಲ್ಲ. ಹೊಸದಾಗಿ ಪಡಿತರ ಚೀಟಿ ಅರ್ಜಿ ಸಲ್ಲಿಸಿದವರು ವರ್ಷಗಟ್ಟಲೇ ಕಾಯುವಂತಾಗಿದೆ. ಆದಾಗ್ಯೂ ಸರ್ಕಾರಗಳು ಜನರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಆರೋಪಿಸಿದರು.

    ನಂತರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿಪತ್ರ ರವಾನಿಸಿದರು. ರಾಮಾಂಜನಪ್ಪ ಆಲ್ದಳಿ, ಶರಣು ಗೋನವಾರ, ಮಧುಲತಾ ಗೌಡರ, ಭವಾನಿಶಂಕರ ಗೌಡ, ಹನುಮೇಶ ಹುಡೇದ, ಶರಣು ಪಾಟೀಲ, ಮಹಾಂತೇಶ ಬೀಳೂರು, ವಿಜಯಲಕ್ಷ್ಮೀ ದೇವತ್ಕಲ್, ಗಂಗಾ ಕೋಕರೆ, ರಾಜು, ದೇವಮ್ಮ, ರಣಜಿತ್ ದೂಪದ್, ಶಶಿಕಲಾ ಮೇಟಿ, ರಾಜಾಸಾಬ್, ಬಿಬಿಜಾನ್, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts