More

    ವಿವಿಧ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

    ಹುಣಸೂರು: ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಹೀನಕೃತ್ಯಗಳನ್ನು ಖಂಡಿಸಿ, ಕರ್ನಾಟಕ ದಲಿತ ಚಳವಳಿ ನವನಿರ್ಮಾಣ ವೇದಿಕೆ, ಬುಡಕಟ್ಟು ಕೃಷಿಕರ ಸಂಘ, ಆದಿವಾಸಿ ಮಹಿಳಾ ಸಂಘ, ದಲಿತ ಸಂಘರ್ಷ ಸಮಿತಿ, ಡೀಡ್ ಸಂಸ್ಥೆ ಇನ್ನಿತರ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.


    ನಗರದ ಸಂವಿಧಾನ ವೃತ್ತದಲ್ಲಿ ಬುಧವಾರ ಜಮಾವಣೆಗೊಂಡ ವಿವಿಧ ಸಂಘಟನೆಗಳ ಸದಸ್ಯರು, ಮಹಿಳೆಯರ ವಿರುದ್ಧ ಕೃತ್ಯ ಎಸಗಿರುವ ಕಿಡಿಗೇಡಿಗಳ ಬಂಧನ ಮತ್ತು ಕಠಿಣ ಶಿಕ್ಷೆಗೆ ಆಗ್ರಹಿಸಿ ಘೋಷಣೆ ಕೂಗಿದರು.


    ನವನಿರ್ಮಾಣ ವೇದಿಕೆ ಮುಖ್ಯಸ್ಥ ಹರಿಹರ ಆನಂದಸ್ವಾಮಿ ಮಾತನಾಡಿ, ನಾಲ್ಕು ತಿಂಗಳಿಂದ ನಡೆಯುತ್ತಿರುವ ಹಿಂಸಾಚಾರವನ್ನು ತಡೆದು ಶಾಂತಿ ಹಾಗೂ ಸಾಮರಸ್ಯ ಸ್ಥಾಪಿಸುವಲ್ಲಿ ಮಣಿಪುರ ಸರ್ಕಾರ ವಿಫಲವಾಗಿದೆ. ಕೇಂದ್ರ ಸರ್ಕಾರವೂ ಕ್ರಮ ವಹಿಸದೆ ಜಾಣ ಕುರುಡು ಪ್ರರ್ದಶಿಸುತ್ತಿದೆ. ಕೂಡಲೇ ರಾಷ್ಟ್ರಪತಿ ಮಧ್ಯ ಪ್ರವೇಶಿಸಿ ಶಾಂತಿ ಕಾಪಾಡಲು ಕ್ರಮ ವಹಿಸಬೇಕೆಂದು ಆಗ್ರಹಿಸಿದರು.


    ಆದಿವಾಸಿ ಮುಖಂಡರಾದ ಲಕ್ಷ್ಮೀ ಮಾತನಾಡಿ, ತಾಯಿ ಸಮಾನವಾದ ಹೆಣ್ಣು ಮಕ್ಕಳನ್ನು ಬೆತ್ತಲೆ ಮಾಡಿ, ಮೆರವಣಿಗೆ ನಡೆಸಿ ಹೀನಕೃತ್ಯ ಎಸಗಿರುವ ಕ್ರೂರಿಗಳ ಮೇಲೆ ಮಣಿಪುರ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಕ್ರಮ ಕೈಗೊಳ್ಳದಿರುವುದು ಇಡೀ ದೇಶಕ್ಕೆ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.


    ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜು ಮಲ್ಲಾಡಿ ಮಾತನಾಡಿ, ಮೂಲನಿವಾಸಿ ಬುಡಕಟ್ಟುಗಳು, ದಲಿತರು ಹಾಗೂ ಬಡ ವರ್ಗದ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇವೆ. ಈ ಜನಾಂಗಗಳಿಗೆ ರಕ್ಷಣೆ ಇಲ್ಲದಂತಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಎಚ್ಚೆತ್ತು ಶಾಂತಿ ಕಾಪಾಡಲು ಮುಂದಾಗಬೇಕೆಂದು ಒತ್ತಾಯಿಸಿದರು.


    ಡೀಡ್ ಮುಖ್ಯಸ್ಥ ಡಾ.ಎಸ್.ಶ್ರೀಕಾಂತ್ ಮಾತನಾಡಿದರು.
    ಪ್ರತಿಭಟನಾಕಾರರು ಉಪ ವಿಭಾಗಾಧಿಕಾರಿ ರುಚಿ ಬಿಂದಾಲ್ ಅವರಿಗೆ ಮನವಿ ಸಲ್ಲಿಸಿದರು.
    ಆದಿಜಾಂಬವ ಸಂಘದ ಶಿವಣ್ಣ, ಬುಡಕಟ್ಟು ಕೃಷಿಕರ ಸಂಘದ ಪಿ.ಕೆ.ರಾಮು, ಆದಿವಾಸಿ ಮುಖಂಡ ಬಸಪ್ಪ, ನವನಿರ್ಮಾಣ ವೇದಿಕೆಯ ದರ್ಶನ್, ದಲಿತ ಸಂಘರ್ಷ ಸಮಿತಿಯ ದೇವೆಂದ್ರ, ಸ್ವಾಮಿ, ಗಜೇಂದ್ರ ಆದಿವಾಸಿ ಮಹಿಳಾ ಸಂಘದ ಅಧ್ಯಕ್ಷೆ ಗಿರಿಜಾ, ಜಯಪ್ಪ, ವಿಠಲ್, ಬೊಮ್ಮಿ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts