More

    ವಿವಾದ ಸೃಷ್ಟಿಸಿದ ಸೋಂಕಿತನ ಅಂತ್ಯ ಸಂಸ್ಕಾರ

    ಕಾರವಾರ: ಕೋವಿಡ್​ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರ ವಿವಾದಕ್ಕೆ ಕಾರಣವಾಯಿತು. ಅಂತ್ಯಕ್ರಿಯೆಯನ್ನು ಇಲ್ಲಿನ ಸ್ಮಶಾನದಲ್ಲಿ ನಡೆಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಯೂ ಜರುಗಿತು.

    ಸೋಮವಾರ ಕ್ರಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಶಿರಸಿ ಬಾಳಗಾರಿನ ವ್ಯಕ್ತಿಯೊಬ್ಬರು ಸಾವನ್ನಪ್ಪಿದರು. ಕರೊನಾದಿಂದ ಸಾವನ್ನಪ್ಪಿದ ಇವರ ಅಂತ್ಯಕ್ರಿಯೆಯನ್ನು ಸಾರ್ವಜನಿಕ ಸ್ಮಶಾನದಲ್ಲಿ ಮಾಡಲು ನಗರಸಭೆ ಸಿಬ್ಬಂದಿ ಮುಂದಾದರು. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿ ಸವೋದಯ ನಗರ, ಶಿರವಾಡ, ಸದಾಶಿವಗಡದಲ್ಲಿ ನಾಗರಿಕರು ಮಾಜಿ ಶಾಸಕ ಸತೀಶ ಸೈಲ್, ಜಿಪಂ ಸದಸ್ಯೆ ಚೈತ್ರಾ ಕೊಠಾರಕರ್, ಚಂದ್ರಹಾಸ ಕೊಠಾರಕರ್ ನೇತೃತ್ವದಲ್ಲಿ ಸೇರಿ ಸೋಮವಾರ ರಾತ್ರಿಯಿಡೀ ಪ್ರತಿಭಟನೆ ನಡೆಸಿದರು.

    ಕರೊನಾ ಸೋಂಕಿತರ ಅಂತ್ಯಕ್ರಿಯೆಯನ್ನು ಸಾರ್ವಜನಿಕ ಸ್ಮಶಾನದಲ್ಲಿ ಮಾಡುವುದರಿಂದ ಇತರರ ಅಂತ್ಯಕ್ರಿಯೆಗಳಿಗೆ ಜನರು ಬರಲು ಆತಂಕ ಪಡುತ್ತಾರೆ. ಶವವನ್ನು ಶಿರಸಿಗೆ ಕರೆದೊಯ್ಯಿರಿ ಎಂದು ಸ್ಥಳೀಯರು ಒತ್ತಾಯಿಸಿದರು. ಇದರಿಂದ ದಿಕ್ಕು ಕಾಣದ ನಗರಸಭೆ ಸದಸ್ಯರು ತಡ ರಾತ್ರಿ ಸಂಕ್ರುಬಾಗ ಸಮೀಪ ಜಿ.ಕೆ.ಶಿವಪ್ರಸಾದ ಅವರಿಗೆ ಸೇರಿದ ಕ್ವಾರಿಯ ಪಕ್ಕ ಶವ ಸುಟ್ಟು ಹಾಕಿದ್ದರು. ಈ ಕುರಿತು ಬೆಳಗ್ಗೆ ಮಾಹಿತಿ ಪಡೆದ ಸಮೀಪದ ಬಿಣಗಾ ನಾಗರಿಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ 300 ಮೀಟರ್ ದೂರದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದೆ. ನಾಯಿಗಳು ಅಲ್ಲಿ ಓಡಾಡುತ್ತಿವೆ ಎಂದು ದೂರಿದರು. ಮಾಧ್ಯಮಗಳಲ್ಲಿ ಈ ಸಂಬಂಧ ವರದಿ ಪ್ರಕಟವಾಗುತ್ತಿದ್ದಂತೆ ನಗರಸಭೆ ಅಧಿಕಾರಿಗಳು ಜೆಸಿಬಿ ಮೂಲಕ ಈ ಜಾಗವನ್ನು ಮುಚ್ಚಿದರು.

    ಕರೊನಾದಿಂದ ಮೃತರಾದವರನ್ನು ರಸ್ತೆಯ ಪಕ್ಕದಲ್ಲೇ ಸುಟ್ಟು ಹಾಕಲಾಗಿದೆ. ಇದರಿಂದ ಜನರಿಗೆ ಆತಂಕ ಶುರುವಾಗಿದೆ. ನಗರಸಭೆ ಈ ಕ್ರಮ ಸರಿಯಲ್ಲ.
    ಪ್ರಕಾಶ ನಾಯ್ಕ, ಬಿಣಗಾ ಕಾರವಾರ ನಗರಸಭೆ ಸದಸ್ಯ

    ಕೋವಿಡ್ 19 ನಿಯಮಾವಳಿಯಂತೆ ಮೃತರ ಅಂತ್ಯಕ್ರಿಯೆ ನಡೆಸಲಾಗಿದೆ. ಆದ್ದರಿಂದ ಕರೊನಾ ಹರಡುವುದಿಲ್ಲ. ಜನ ಆತಂಕಪಡಬಾರದು. ಅಂತ್ಯಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ.
    ಡಾ.ಹರೀಶ ಕುಮಾರ ಕೆ. ಜಿಲ್ಲಾಧಿಕಾರಿ, ಉತ್ತರ ಕನ್ನಡ

    ಶಾಸಕಿ ರೂಪಾಲಿ ಸಭೆ
    ಮೃತ ಸೋಂಕಿತರ ಅಂತ್ಯಸಂಸ್ಕಾರದಲ್ಲಿ ಅಚಾತುರ್ಯ ಆದ ಬಗ್ಗೆ ಶಾಸಕಿ ರೂಪಾಲಿ ನಾಯ್ಕ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂತ್ಯಸಂಸ್ಕಾರಕ್ಕೆ ಜನರಿಗೆ ತೊಂದರೆ ಉಂಟಾಗದ ಪ್ರತ್ಯೇಕ ಸ್ಥಳ ಗುರುತಿಸಬೇಕು ಎಂದು ಸೂಚಿಸಿದ್ದಾರೆ. ಡಿಎಚ್​ಒ ಡಾ. ಶರದ್ ನಾಯಕ, ತಹಸೀಲ್ದಾರ್ ರಾಮಚಂದ್ರ ಕಟ್ಟಿ, ಸಿಪಿಐ ಸಂತೋಷ ಅವರು ಸಭೆಯಲ್ಲಿದ್ದರು.

    ಬದುಕು ಕಸಿದುಕೊಂಡ ಬೆಂಗಳೂರು

    ಶಿರಸಿ: ಬದುಕನ್ನು ಕಟ್ಟಿಕೊಳ್ಳಲು ಬೆಂಗಳೂರು ಸೇರಿ, ಅಲ್ಲಿ ಕರೊನಾಕ್ಕೆ ತುತ್ತಾದ ವ್ಯಕ್ತಿ ಊರಿಗೆ ಬಂದು ಮಸಣ ಸೇರಿದ ಮನಕಲಕುವ ಘಟನೆ ಜರುಗಿದೆ. ತಾಲೂಕಿನ ಕಾನಗೋಡ ಪಂಚಾಯಿತಿ ವ್ಯಾಪ್ತಿಯ ಬಾಳಗಾರ ಊರಿನ ವ್ಯಕ್ತಿ ಕರೊನಾಕ್ಕೆ ಬಲಿಯಾದವರು. ಇದರಿಂದ ಶಿರಸಿಯಲ್ಲಿ ಕರೊನಾ ವೈರಸ್ ಕುರಿತು ಮತ್ತಷ್ಟು ಭಯ ಸೃಷ್ಟಿಯಾಗಿದೆ.

    ನಾಲ್ಕೈದು ವರ್ಷಗಳ ಹಿಂದೆ ಶಿರಸಿಯಲ್ಲಿ ಕಂಪ್ಯೂಟರ್ ಸೆಂಟರ್ ನಡೆಸುತ್ತಿದ್ದ ಯುವಕನೊಬ್ಬ ಕನಸಿನ ಮೂಟೆ ಕಟ್ಟಿಕೊಂಡು ಬೆಂಗಳೂರಿನತ್ತ ಸಾಗಿದ. ಅಲ್ಲಿ ಖಾಸಗಿ ಹೋಟೆಲ್ ಒಂದರಲ್ಲಿ ಮ್ಯಾನೇಜರ್ ಕೆಲಸ ಮಾಡತೊಡಗಿದ. ಇದೇ ವೇಳೆಗೆ ಕರೊನಾ ಮಹಾಮಾರಿ ಪಸರಿಸತೊಡಗಿತು. ಎಲ್ಲೆಡೆ ಲಾಕ್​ಡೌನ್ ಆಯಿತು. ಈ ವೇಳೆ ಈ ಯುವಕನೂ ಊರಿಗೆ ಬಂದಿದ್ದ. ನಂತರ ಲಾಕ್ ಡೌನ್ ನಿಯಮ ಸರಳೀಕರಣವಾಯಿತು. ಮತ್ತೆ ದುಡಿಮೆಗಾಗಿ ರಾಜಧಾನಿಯತ್ತ ತೆರಳಿದ. ಆದರೆ, ವಿಧಿಯ ಆಟ ಬೇರೆಯದ್ದೇ ಇತ್ತು. ನಾಲ್ಕೈದು ದಿನಗಳ ಹಿಂದೆ ಮೈ ಕೈ ನೋವು, ಜ್ವರದಿಂದ ಬಳಲುತ್ತಿದ್ದ ಈತ ಚಿಕಿತ್ಸೆಗಾಗಿ ಬೆಂಗಳೂರಿನ 10ಕ್ಕೂ ಹೆಚ್ಚಿನ ಆಸ್ಪತ್ರೆಗಳಿಗೆ ಓಡಾಟ ನಡೆಸಿದ್ದ. ಅಲ್ಲಿ ಎಲ್ಲಿಯೂ ದಾಖಲು ಮಾಡಿಕೊಳ್ಳದ ಕಾರಣ ಸ್ವತಃ ಕಾರನ್ನು ಚಾಲನೆ ಮಾಡಿಕೊಂಡು ಜುಲೈ 4ರ ಬೆಳಗಿನ ಜಾವ 1.30ಕ್ಕೆ ಶಿರಸಿಯ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ಬಂತು.

    ಈ ವೇಳೆ ಸ್ಕಾನಿಂಗ್ ಮಾಡಿದಾಗ ನ್ಯೂಮೋನಿಯಾ ಆಗಿರುವುದು ಕಂಡು ಬಂದಿತು. ತಕ್ಷಣ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಯಿತು. ನಂತರ ವರದಿ ಕರೊನಾ ಪಾಸಿಟಿವ್ ಬಂದಿದ್ದು, ತಕ್ಷಣವೇ ಕಾರವಾರದ ಕ್ರಿಮ್್ಸ್ಸೆ ದಾಖಲಿಸಲಾಯಿತು.. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಕಾರಣ ಮನೆಯವರಿಗೆ ಶವ ಹಸ್ತಾಂತರಿಸಲು ಜಿಲ್ಲಾಡಳಿತ ಮುಂದಾಯಿತು. ಕರೊನಾದಿಂದ ಮೃತಪಟ್ಟ ಕಾರಣ ಮನೆಯವರು ಶವ ಬೇಡ ಎಂದು ಲಿಖಿತವಾಗಿ ಬರೆದುಕೊಟ್ಟಿದ್ದರು.

    ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಶವಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು. ಎಲ್ಲೆಡೆ ಚಿಕಿತ್ಸೆಗಾಗಿ ಓಡಾಡಿದ್ದಲ್ಲದೆ, ಅಂತಿಮವಾಗಿ ತವರಿನ ನೆಲದ ಚಿಕಿತ್ಸೆ ಕೂಡ ಫಲಿಸದೆ ಇಹಲೋಕ ತ್ಯಜಿಸಿದ ಯುವಕನ ಬಗ್ಗೆ ಅನುಕಂಪ ವ್ಯಕ್ತವಾಗಿದೆ. ಜತೆ, ಕರೊನಾ ಚಿಕಿತ್ಸೆಗೆ ರೋಗಿಯನ್ನು ದಾಖಲಿಸಿಕೊಳ್ಳದ ರಾಜಧಾನಿಯ ಆಸ್ಪತ್ರೆಗಳ ಬಗೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.

    ಕೋವಿಡ್- 19 ಸಂದರ್ಭದಲ್ಲಿ ಜ್ವರ, ಶೀತ ಹಾಗೂ ಇತರ ಲಕ್ಷಣಗಳಿವೆ ಎಂದು ಆಸ್ಪತ್ರೆಗೆ ತೆರಳಿದ ರೋಗಿಗಳ ಪರೀಕ್ಷೆಗೆ ಅವಕಾಶ ನೀಡುತ್ತಿಲ್ಲ. ಇದು ಅಮಾನವೀಯ. ಕರೊನಾ ಪರೀಕ್ಷೆ ಬೇಕಾದರೆ ಮಾಡಲಿ. ಆದರೆ, ಚಿಕಿತ್ಸೆ ಕೊಡಲಿ. ಜನಸಾಮಾನ್ಯರ ಆರೋಗ್ಯ ಕಾಯಬೇಕಾದ ಆಸ್ಪತ್ರೆಗಳೇ ರೋಗಿಗಳನ್ನು ಕಡೆಗಣಿಸಿದರೆ ಅಂತಹ ಆಸ್ಪತ್ರೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು.
    | ಗಣೇಶ ಡಿ. ಸಾಮಾಜಿಕ ಹೋರಾಟಗಾರ ಶಿರಸಿ

    ಇನ್ನಿಬ್ಬರು ಎಲ್ಲಿ ಹೋದರು?
    ಬೆಂಗಳೂರಿಂದ ಆಗಮಿಸಿ ನಗರದ ಆಸ್ಪತ್ರೆಗೆ ದಾಖಲಾಗಿದ್ದ ಬಾಳಗಾರಿನ ಯುವಕನ ಜತೆ ಮತ್ತಿಬ್ಬರು ಇದ್ದರು ಎಂದು ಹೇಳಲಾಗುತ್ತಿದೆ. ಇವರಲ್ಲಿ ಓರ್ವ ಮಹಿಳೆಯೂ ಇದ್ದಳು. ಈಕೆ ಶಿರಸಿಯವಳಾಗಿದ್ದು, ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ. ಮತ್ತೊಬ್ಬ ವ್ಯಕ್ತಿ ವಾಪಸ್ ಬೆಂಗಳೂರಿಗೆ ತೆರಳಿದ್ದಾನೆ ಎಂಬ ವದಂತಿ ಹಬ್ಬಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts