More

    ವಿಳಂಬವಾಗಿದೆ ಯುಡಿಐಡಿ ಕಾರ್ಡ್ ವಿತರಣೆ

    ಕುಮಟಾ: ತಾಲೂಕಿನ ನೂರಾರು ಅಂಗವಿಕಲರು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡು ಬಂದು ಮೂರು ತಿಂಗಳಾಗಿದೆ. ಆದರೂ ಈವರೆಗೆ ತಮ್ಮ ಮನೆಗೆ ಯುಡಿಐಡಿ ಕಾರ್ಡ್ ಬಂದಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

    ಕುಮಟಾ ತಾಲೂಕಿನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಅಂಗವಿಕಲರಿದ್ದಾರೆ. ಈಗಾಗಲೇ ಗುರುತಿನ ಚೀಟಿ ಪಡೆದಿರುವ ಅಂಗವಿಕಲರು ಹಾಗೂ ಹೊಸದಾಗಿ ಗುರುತಿನ ಚೀಟಿ ಪಡೆಯಲಿಚ್ಛಿಸುವವರು ಆನ್​ಲೈನ್​ನಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ನೋಂದಣಿ ಬಳಿಕ ಆಯಾ ಜಿಲ್ಲಾ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ತಪಾಸಿಸಿ, ರಾಜ್ಯ ವೈದ್ಯಕೀಯ ಪ್ರಾಧಿಕಾರದಿಂದ ದೃಢೀಕರಿಸಲ್ಪಟ್ಟ ವೈದ್ಯಕೀಯ ಪ್ರಮಾಣಪತ್ರದ ಸಮಗ್ರ ಮಾಹಿತಿಯುಳ್ಳ ಗಣಕೀಕೃತ ವಿಶಿಷ್ಟ ಅಂಗವಿಕಲರ ಗುರುತಿನ ಚೀಟಿ (ಯುಡಿಐಟಿ ಸ್ಮಾರ್ಟ್ ಕಾರ್ಡ್) ನೀಡಲಾಗುತ್ತದೆ.

    ಗುರುತಿನ ಚೀಟಿ ಪಡೆಯುವ ಹೊಸ ವಿಧಾನ ಆರಂಭವಾದ ಬೆನ್ನಲ್ಲೇ ನೂರಾರು ಅಂಗವಿಕಲರು ತೀರಾ ಕಷ್ಟಪಟ್ಟು ಜಿಲ್ಲಾಸ್ಪತ್ರೆಗಳಿಗೆ ತೆರಳಿ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡಿದ್ದಾರೆ. ಎರಡು ಮೂರು ತಿಂಗಳ ಬಳಿಕವಷ್ಟೇ ಅಂಗವಿಕಲರ ಅನುಕೂಲಕ್ಕಾಗಿ ಆಯಾ ತಾಲೂಕಾಸ್ಪತ್ರೆಯಲ್ಲಿ ವಾರಕ್ಕೊಮ್ಮೆ ತಪಾಸಣೆ ಶಿಬಿರ ನಡೆಸುವ ಅವಕಾಶ ಕಲ್ಪಿಸಲಾಗಿದೆ. ಮೂರ್ನಾಲ್ಕು ತಿಂಗಳ ಹಿಂದೆಯೇ ಜಿಲ್ಲಾಸ್ಪತ್ರೆಯಲ್ಲಿ ತಪಾಸಿಸಿಕೊಂಡವರ ಯುಡಿಐಡಿ ಕಾರ್ಡ್ ಈವರೆಗೂ ಬಂದಿಲ್ಲ. ಆದರೆ, ಕುಮಟಾ ತಾಲೂಕಾಸ್ಪತ್ರೆಯಲ್ಲಿ ವಾರದ ಶಿಬಿರದಲ್ಲಿ ತಪಾಸಿಸಿಕೊಂಡವರ ಯುಡಿಐಡಿ ಕಾರ್ಡ್​ಗಳು 10-15 ದಿನದಲ್ಲೇ ಮನೆಗೆ ತಲುಪುತ್ತಿದ್ದು, ಇ-ಯುಡಿಐಡಿ ಕಾರ್ಡ್​ಗಳು ತಕ್ಷಣ ಆನ್​ಲೈನ್​ನಲ್ಲಿ ದೊರೆಯುತ್ತಿವೆ ಎಂದು ಹಲವು ಅಂಗವಿಕಲರು ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಹಿಂದೆ ತಪಾಸಿಸಿಕೊಂಡವರ ವೈದ್ಯಕೀಯ ಪ್ರಮಾಣಪತ್ರದ ಸಮಗ್ರ ಮಾಹಿತಿ ಈವರೆಗೂ ಆನ್​ಲೈನ್ ಅಪಲೋಡ್ ಆಗಿಲ್ಲ. ಹೀಗಾಗಿ, ಆನ್​ಲೈನ್​ನಲ್ಲಿ ಇ-ಯುಡಿಐಡಿ ಕಾರ್ಡ ಮುದ್ರಣ ಪಡೆಯುವುದಕ್ಕೂ ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ.

    ಈ ವಿಷಯ ನನ್ನ ಗಮನಕ್ಕೆ ಬಂದಿದೆ. ಬಹುಶಃ ವೈದ್ಯರ ಬಳಿಯೇ ಕಡತ ಪೆಂಡಿಂಗ್ ಇದೆ. ಈ ಕೆಲಸಕ್ಕೆ ಪ್ರತಿನಿತ್ಯ ಒಬ್ಬರು ಕಂಪ್ಯೂಟರ್ ಅಪರೇಟರ್ ಬೇಕು. ಸಮಯಾವಕಾಶದ ಕೊರತೆ ಇರಬಹುದು. ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಸದ್ಯ ಕರೊನಾ ಸಮಸ್ಯೆ ಇದೆ. ಶೀಘ್ರದಲ್ಲಿ ಕಾರ್ಡ ವಿತರಣೆಗೆ ಕ್ರಮ ಕೈಗೊಳ್ಳುತ್ತಾರೆ. | ಪ್ರವೀಣ ಪಾಟೀಲ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ

    ಕಾರವಾರ ಜಿಲ್ಲಾಸ್ಪತ್ರೆಗೆ ಹೋಗಿ ಕಷ್ಟಪಟ್ಟು ವೈದ್ಯಕೀಯ ತಪಾಸಣೆ ಮಾಡಿಸಿಕೊಂಡು ನಮ್ಮ ದಾಖಲೆಗಳನ್ನು ಕೊಟ್ಟು ಬಂದು ಮೂರೂವರೆ ತಿಂಗಳಾಯಿತು. ಇನ್ನೂತನಕ ಸ್ಮಾರ್ಟ್ ಕಾರ್ಡ್ ಬಂದಿಲ್ಲ. ಮೊಬೈಲ್​ಫೋನ್​ಗೂ ನೋಂದಣಿ ಮೆಸೇಜ್ ಬಂದಿಲ್ಲ. ನಾವು ಬಹಳಷ್ಟು ಜನ ಯುಡಿಐಡಿ ಕಾರ್ಡ್​ಗಾಗಿ ಕಾಯುತ್ತಿದ್ದೇವೆ. ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡ ಇಡೀ ಜಿಲ್ಲೆಯ ನೂರಾರು ಅಂಗವಿಕಲರ ಯುಡಿಐಡಿ ಕಾರ್ಡ್ ಬರುವುದು ಬಾಕಿ ಇದೆ. | ರವಿಶಂಕರ ಗುನಗಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts