More

    ವಿರೋಧಿಗಳ ಕುತಂತ್ರಕ್ಕೆ ಬಲಿಯಾಗಲ್ಲ

    ಪಾಂಡವಪುರ: ಒತ್ತಡಕ್ಕೆ ಮಣಿದು ಮಂಡ್ಯದಿಂದ ಸ್ಪರ್ಧಿಸಿದರೆ ವಿರೋಧಿಗಳ ಕುತಂತ್ರಕ್ಕೆ ಬಲಿಯಾಗಬೇಕಾಗುತ್ತದೆ. ಇದರ ಬದಲು ಸಾಮಾನ್ಯ ಕಾರ್ಯಕರ್ತನನ್ನು ಕಣಕ್ಕಿಳಿಸಿ ಗೆಲ್ಲಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

    ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಜೆಡಿಎಸ್ ವತಿಯಿಂದ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು.

    ನಾನು ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾದರೆ ನನ್ನನ್ನು ಮುಗಿಸಲೆಂದೆ ನಾಳೆ ಸ್ವಾಭಿಮಾನ ಉಳ್ಳವರು ನಾಮಪತ್ರ ಸಲ್ಲಿಸಲು ಸಿದ್ಧರಾಗಿದ್ದಾರೆ. ಜಿಲ್ಲೆಯಿಂದ ಆಯ್ಕೆಯಾದವರು ಸಿಎಂ ಆಗ ಬೇಕು ಎಂಬ ಆಸೆ ಇದೆ. ನಾನು ಅರ್ಜಿ ಹಾಕಿದರೆ ಕಾಂಗ್ರೆಸ್, ಬಿಜೆಪಿ, ರೈತಸಂಘ ಅಭ್ಯರ್ಥಿಗಳು ಅರ್ಜಿ ಹಾಕಲ್ಲ. ಸಂಸದೆ ಬಂದು ನಿಲ್ಲುತ್ತಾರೆ. ಎಲ್ಲರೂ ಒಂದಾಗಿ ನಡೆಸುವ ಕುತಂತ್ರದಿಂದ ನಾನು ಅಷ್ಟು ಸುಲಭವಾಗಿ ಚುನಾವಣೆ ನಡೆಸಲು ಆಗಲ್ಲ. ಸ್ವಾಭಿಮಾನ ಇರುವವರು ಈಗಾಗಲೇ ಬಿಜೆಪಿ ಸೇರಿ ನನ್ನ ವಿರುದ್ಧ ಸ್ಪರ್ಧಿಸುವ ಸವಾಲು ಹಾಕಿದ್ದಾರೆ. ದೊಡ್ಡವರಿಗೆ ಸವಾಲು ಹಾಕುವಷ್ಟು ನಾನು ದೊಡ್ಡವನಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.

    2023ಕ್ಕೆ ನಾನು ಮುಖ್ಯಮಂತ್ರಿ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ದೇಹವನ್ನು ದಂಡಿಸಿ ಇಡೀ ರಾಜ್ಯವನ್ನು ಏಕಾಂಗಿಯಾಗಿ ಸುತ್ತಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸಿದ್ದೇನೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿದಂತೆ ಎಲ್ಲ ಭಾಗದಲ್ಲೂ ಜೆಡಿಎಸ್ ಪಕ್ಷ ಗಟ್ಟಿಯಾಗಿದೆ.
    ಕಳೆದ ಬಾರಿಯಂತೆ ಈ ಚುನಾವಣೆಯಲ್ಲಿ ಏಳಕ್ಕೆ ಏಳು ಕ್ಷೇತ್ರವನ್ನು ಗೆಲ್ಲಿಸಿ ಕೊಟ್ಟರೆ ಮಂಡ್ಯ ಜಿಲ್ಲೆಯ ಸರ್ಕಾರ ಮಾಡುತ್ತೇನೆ. ಅಧಿಕಾರಾವಧಿಯಲ್ಲಿ ಪಂಚರತ್ನ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತೇನೆ. ಎರಡು ರಾಷ್ಟೀಯ ಪಕ್ಷಗಳ ಘಟಾನುಘಟಿ ನಾಯಕರ ಮುಂದೆ ಒಂದು ಸಣ್ಣ ಪ್ರಾದೇಶಿಕ ಪಕ್ಷ ಸರಿಸಮಾನವಾಗಿ ನಿಂತು ಹೋರಾಟ ಮಾಡುತ್ತಿದೆ ಎಂದರು.

    ಕೆಲವರು ಎಲ್ಲರನ್ನು ಮುಖ್ಯಮಂತ್ರಿ ಮಾಡಿದ್ದೀರಿ ಈ ಬಾರಿ ನನಗೂ ಒಂದು ಅವಕಾಶ ಕೊಡಿ ಎಂದು ಕೇಳುತ್ತಿದ್ದಾರೆ. ಅವರಿಗೆ ಬೆಂಗಳೂರಿನಲ್ಲಿ ಲೂಮಾ ಮಾಲು ಕಟ್ಟೋದಿಕ್ಕಾಗಿ ಅವಕಾಶ ನೀಡಬೇಕೆ? ಬಡವರು ಮತ್ತು ಮಹಿಳೆಯರ ಕಷ್ಟದ ಬಗ್ಗೆ ಒಂದು ದಿನವೂ ಅನುಕಂಪ ವ್ಯಕ್ತಪಡಿಸಿಲ್ಲ. ಇಂಥವರಿಗೆ ಜನ ಏಕೆ ಬೆಂಬಲ ನೀಡಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
    ರೈತಸಂಘ ಹೋರಾಟದ ಬಗ್ಗೆ ಗೌರವವಿದೆ. ಆದರೆ ಐದು ವರ್ಷ ಅಮೆರಿಕದಲ್ಲಿ ಇದ್ದವರು ಈಗ ಬಂದು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇವರಿಗೆ ಕಾಂಗ್ರೆಸ್ ಯಾವ ಪುರುಷಾರ್ಥ ಸಾಧನೆಗೆ ಬೆಂಬಲ ಕೊಟ್ಟಿದೆ ಎಂದು ಟೀಕಿಸಿದರು.
    ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ಕಳೆದ ಚುನಾವಣೆಯಲ್ಲಿ ಮತದಾರರು ಕೊಟ್ಟ ಶಕ್ತಿಯಿಂದ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಸಾಧ್ಯವಾಯಿತು. ವಿರೋಧಿಗಳ ಎದೆಯಲ್ಲಿ ಸೋಲಿನ ಆತಂಕ ಆವರಿಸಿದೆ. ಅದಕ್ಕಾಗಿ ನನ್ನ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಮೂರು ದಿನದಲ್ಲಿ ದುದ್ದ ಖರೀದಿ ಮಾಡ್ತೀನಿ ಅಂತಾ ಅಪ್ರಪ್ರಚಾರದಲ್ಲಿ ಮಾಡುತ್ತಿರುವ ವಿರೋಧಿಗಳು 2013ರಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಶಾಸಕರಾದಾಗ ಯಾರನ್ನು ಖರೀದಿ ಮಾಡಿ ಆಯ್ಕೆಯಾಗಿದ್ದೀರಿ ಎಂಬುದನ್ನು ತಿಳಿಸಬೇಕು. ನನಗೆ ಇನ್ನೂ ವಯಸ್ಸು ಇದೆ. ಪುಟ್ಟಣ್ಣಯ್ಯ ಅವರಿಗೆ ಕಾಲು ತೂತ್ತಾಗಿದೆ ಮತ್ತು ಅವರ ಮನೆಯವರು ತಾಳಿ ತೋರಿಸಿಕೊಂಡು ಓಡಾಡುತ್ತಿದ್ದಾರೆ ಎಂಬ ಕಾರಣಕ್ಕೆ ದುದ್ದ ಜನ ಆಯ್ಕೆ ಮಾಡಿದರು ಎಂದು ಟೀಕೆಗಳಿಗೆ ಉತ್ತರ ನೀಡಿದರು.
    ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜಿ.ಬಿ.ಶಿವಕುಮಾರ್, ಪುರಸಭೆ ಅಧ್ಯಕ್ಷೆ ವಿ.ಕೆ.ಅರ್ಚನಾ ಚಂದ್ರು, ಉಪಾಧ್ಯಕ್ಷೆ ಶ್ವೇತಾ ಉಮೇಶ್, ದಸಂಸ ಮುಖಂಡ ವೆಂಕಟಗಿರಿಯಯ್ಯ, ಜೆಡಿಎಸ್ ಮುಖಂಡರಾದ ಮಲ್ಲೇಶ್, ಗುರುಸ್ವಾಮಿ, ಚೆಲುವರಾಜು, ದ್ಯಾವಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts