More

    ವಿದ್ಯುತ್ ಸ್ಪರ್ಶದಿಂದ ಒಂಟಿ ಸಲಗ ಸಾವು

    ಹನೂರು: ತಾಲೂಕಿನ ಡಿ.ಎಂ.ಸಮುದ್ರ (ಗೂಳ್ಯ) ಸಮೀಪದ ಜಮೀನೊಂದರ ಬಳಿ ಸುಮಾರು 25 ವರ್ಷದ ಒಂಟಿ ಸಲಗವೊಂದು ಸೋಮವಾರ ರಾತ್ರಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದೆ.


    ಗ್ರಾಮದ ಚಿಕ್ಕಮಲ್ಲಯ್ಯ ಎಂಬವರು ತಮ್ಮ ಜಮೀನಿನಲ್ಲಿ ಜೋಳ ಬೆಳೆದಿದ್ದು, ಜಮೀನಿನ ಸುತ್ತಲು ಬೆಳೆ ರಕ್ಷಣೆಗಾಗಿ ತಂತಿ ಅಳವಡಿಸಿ ವಿದ್ಯುತ್ ಸಂಪರ್ಕ ನೀಡಿದ್ದರು. ಸೋಮವಾರ ರಾತ್ರಿ ಮಲೆ ಮಹದೇಶ್ವರ ವನ್ಯಜೀವಿ ಧಾಮಕ್ಕೆ ಸೇರಿದ ಕಾಡಾನೆಯೊಂದು ಜೋಳದ ಫಸಲನ್ನು ತಿನ್ನಲು ಆಗಮಿಸಿದ್ದ ವೇಳೆ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲಿಯೇ ಮೃತಪಟ್ಟಿದೆ.


    ಈ ವೇಳೆ ಜಮೀನಿನ ಮಾಲೀಕ ಚಿಕ್ಕಮಲ್ಲಯ್ಯ ಆನೆಯ ಮೃತ ದೇಹವನ್ನು ಜೋಳದ ಕಡ್ಡಿಯಿಂದ ಮುಚ್ಚಿಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.


    ಅಧಿಕಾರಿಗಳಲ್ಲಿ ಗೊಂದಲ: ಮೃತಪಟ್ಟ ಆನೆಯ ಸಮೀಪದಲ್ಲಿಯೇ ಕಾವೇರಿ ಹಾಗೂ ಮಲೆ ಮಹದೇಶ್ವರ ವನ್ಯಜೀವಿ ಧಾಮವಿದೆ. ಹಾಗಾಗಿ, ಮೃತಪಟ್ಟ ಆನೆ ಯಾವ ವಲಯಕ್ಕೆ ಸೇರಿದ್ದು ಎಂಬ ಬಗ್ಗೆ ಅಧಿಕಾರಿಗಳಲ್ಲಿ ಗೊಂದಲ ಉಂಟಾಗಿತ್ತು. ಇದರಿಂದ ಮಂಗಳವಾರ ವಿಷಯ ತಿಳಿದ ಎರಡು ವನ್ಯಜೀವಿ ಧಾಮದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.


    ಈ ವೇಳೆ ಮೃತಪಟ್ಟಿರುವ ಆನೆ ಮಲೆ ಮಹದೇಶ್ವರ ವನ್ಯಜೀವಿ ಧಾಮಕ್ಕೆ ಸೇರಿದ್ದಾಗಿದ್ದೂ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಮಲೆ ಮಹದೇಶ್ವರ ವನ್ಯಜೀವಿ ಧಾಮದ ಡಿಎಫ್‌ಒ ಏಡುಕುಂಡಲು ವಿಜಯವಾಣಿಗೆ ತಿಳಿಸಿದರು.


    ವಿದ್ಯುತ್ ಸಂಪರ್ಕ ಕಡಿತ: ಆರೋಪಿ ಚಿಕ್ಕಮಲ್ಲಯ್ಯ ಪರಾರಿಯಾಗಿದ್ದಾನೆ. ಅರಣ್ಯಾಧಿಕಾರಿಗಳು ಹನೂರು ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಕೌದಳ್ಳಿ ಸೆಸ್ಕ್ ಉಪ ವಿಭಾಗದ ಎಇ ಮಹೇಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಜಮೀನಿಗೆ ನೀಡಿದ್ದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts