More

    ವಿದ್ಯಾರ್ಥಿ ದೆಸೆಯಿಂದಲೇ ದೇಶಾಭಿಮಾನ ಮೂಡಲಿ

    ಯಾದಗಿರಿ: ಯುವ ಜನರಲ್ಲಿ ದೇಶಪ್ರೇಮ ದೃಢವಾಗಿದ್ದರೆ, ಅವರು ತೊಡಗಿಸಿಕೊಳ್ಳುವ ಪ್ರತಿ ಕೆಲಸ ಸಹ ಅರ್ಥ ಗರ್ಭಿತವಾಗಿರುತ್ತದೆ. ದೇಶಸೇವೆಯಲ್ಲಿ ತೊಡಗಿಸಿಕೊಂಡ ಮಹಾತ್ಮರ ಬಗ್ಗೆ ಸದಾ ಗೌರವ ಹೊಂದುವಂತೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಕರೆ ನೀಡಿದರು.

    ಇಲ್ಲಿನ ತಾಪಂ ಕಚೇರಿ ಆವರಣದಲ್ಲಿ ಸೋಮವಾರ ಆಜಾದಿ ಕಾ ಅಮೃತ್ ಮಹೋತ್ಸವದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ನನ್ನ ದೇಶದ ನನ್ನ ಮಣ್ಣು ಅಭಿಯಾನದಡಿಯ ಅಮೃತ ಕಳಸ ಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ದೇಶಾಭಿಮಾನ ಬೆಳಸಿಕೊಳ್ಳುವ ಅವಕಾಶ ಒದಗಿ ಬಂದಾಗ ಪ್ರತಿಯೊಂದು ಮಗು ಸಹ ದೇಶದ ಆಸ್ತಿಯಾಗಲಿದೆ ಎಂದರು.

    ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮ ದೇಶಪ್ರೇಮ ಬಿಂಬಿಸುವ ಕಾರ್ಯಕ್ರಮವಾಗಿದೆ. ದೇಶದ ಸಾರ್ಥಕ ಹಾಗೂ ಸೇವೆಯನ್ನ ಪ್ರತಿಪಾದಿಸುವ ಕಾರ್ಯ ಇದು. ದೇಶದ ಮೂಲೆ ಮೂಲೆಯಿಂದ ಮಣ್ಣು ಶೇಖರಣೆ ಮಾಡಿ ವಿವಿಧ ರೀತಿಯ ಸಸ್ಯಗಳನ್ನು ಬೆಳೆಸುವ ವಿಶಿಷ್ಟ ಉದ್ದೇಶ ಹೊಂದಲಾಗಿದೆ. ದೇಶದ ಗಡಿಯಲ್ಲಿ ನಮ್ಮ ವೀರಯೋಧರು ಹಗಲಿರುಳು ಜನರ ರಕ್ಷಣೆಗೆ ಪ್ರಾಣವನ್ನೂ ಲೆಕ್ಕಿಸದೆ ಸೇವೆ ಮಾಡುತ್ತಿದ್ದಾರೆ. ಅವರ ಬಗ್ಗೆ ನಮ್ಮಲ್ಲಿ ಗೌರವದ ಭಾವನೆ ಮೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಜಿಪಂ ಸಿಇಒ ಗರೀಮಾ ಪನ್ವಾರ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಜನತೆ ದೇಶಾಭಿಮಾನ ಮೂಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಅಭಿಯಾನ ಆರಂಭಿಸಲಾಗಿದೆ. ಪ್ರತಿ ತಾಲೂಕಿನ ಹಳ್ಳಿಗಳಿಂದ ಮಣ್ಣನ್ನು ಸಂಗ್ರಹಿಸಿ ರಾಷ್ಟ್ರ ರಾಜಧಾನಿಗೆ ಕಳುಹಿಸುವ ಪ್ರಯತ್ನವಿದು. ಹಳ್ಳಿಯ ಜನ ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹ ಮಾಡುವುದರಿಂದ ಮಕ್ಕಳ ಜೀವನ ಹಾಳಾಗುತ್ತದೆ. ಈ ಬಗ್ಗೆ ಗ್ರಾಪಂ ಅಧ್ಯಕ್ಷರು, ಸದಸ್ಯರು ನಿಮ್ಮೂರಿನ ಜನತೆಗೆ ತಿಳಿವಳಿಕೆ ಮೂಡಿಸಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts