More

    ಸವಾಲುಗಳ ನಡುವೆಯೂ ದೇಶ ಸದೃಢ

    ಬೇಲೂರು: ಹಲವು ಸವಾಲುಗಳ ನಡುವೆಯೂ ಭಾರತ ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಬಲಾಢ್ಯ ದೇಶವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ್ಯದ ಗ್ರಾಮ ವಿಕಾಸ ಸಂಯೋಜಕ ಬಾಲಕೃಷ್ಣ ಕಿಣಿ ಅಭಿಪ್ರಾಯಪಟ್ಟರು.

    ತಾಲೂಕಿನ ಅರೇಹಳ್ಳಿಯಲ್ಲಿ ಆರ್‌ಎಸ್‌ಎಸ್ ವತಿಯಿಂದ ಭಾನುವಾರ ಆಯೋಜಿಸಿದ್ದ ವಿಜಯದಶಮಿ ಪಥಸಂಚಲನ ರ್ಕಾಯಕ್ರಮದಲ್ಲಿ ಮಾತನಾಡಿದರು.
    ಹಿಂಸೆ ನೀಡುವುದನ್ನು ಬಿಟ್ಟು ಶಾಂತಿ ಸಾರುವ ದೇಶವಾಗಿ, ವಿಶ್ವಕ್ಕೆ ಗುರುವಾಗಿ ಭಾರತ ಮುನ್ನಡೆಯುತ್ತಿದೆ. ಇಲ್ಲಿವರೆಗೂ ನಮ್ಮ ದೇಶ ಮತ್ತೊಂದು ದೇಶದ ವಿರುದ್ಧ ದಂಡೆತ್ತಿ ಹೋದ ಉದಾಹರಣೆಗಳಿಲ್ಲ. ಪ್ರತಿಯೊಂದು ದೇಶದಲ್ಲೂ ಹಿಂದು ಧರ್ಮದ ದೇವಾಲಯವಿದ್ದು, ಇದು ನಮ್ಮ ಸಂಸ್ಕೃತಿಯ ವಿಶಾಲತೆಗೆ ಹಿಡಿದ ಕೈಗನ್ನಡಿ ಎಂದರು.

    ರಾಜ್ಯ ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಎ.ಎನ್.ನಾಗರಾಜ್ ಮಾತನಾಡಿ, ಪ್ರಪಂಚವು ನಮ್ಮ ಅಂಗೈಯಲ್ಲಿರುವಂತೆ ಭಾಸವಾಗುತ್ತಿದ್ದರೂ ಮಾನವೀಯ ಸಂಬಂಧಗಳು ದೂರಾಗುತ್ತಿವೆ. ಇದರ ನಡುವೆ ಇಂದಿನ ಯುವ ಸಮುದಾಯದಲ್ಲಿ ಸಂಸ್ಕೃತಿ ಕಣ್ಮರೆಯಾಗುತ್ತಿರುವುದು ದುರದೃಷ್ಟಕರ ಸಂಗತಿ. ಆದ್ದರಿಂದ ಇಂತಹ ಕಾರ್ಯಕ್ರಮಗಳ ಮೂಲಕ ಯುವ ಸಮುದಾಯದಲ್ಲಿ ದೇಶಾಭಿಮಾನ, ನಮ್ಮ ಸಂಸ್ಕೃತಿಯನ್ನು ಕಲಿಸಿ, ಬೆಳೆಸುವುದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

    302 ಗಣ ವೇಷಧಾರಿಗಳು, 174 ಸಾರ್ವಜನಿಕರು, 47 ಮಾತೆಯರನ್ನೊಳಗೊಂಡು ಆಂಜನೇಯಸ್ವಾಮಿ ದೇವಸ್ಥಾನದಿಂದ ಹೊರಟ ಪಥಸಂಚಲನವು ಸಂತೋಷನಗರ, ಡಾ.ಶಿವಕುಮಾರ ಸ್ವಾಮೀಜಿ ವೃತ್ತ, ಮುಖ್ಯರಸ್ತೆ, ಹೊಸಪೇಟೆ, ಅಂಬೇಡ್ಕರ್ ವೃತ್ತ, ಸಂತೋಷ ನಗರ, ಮೇಲನಹಳ್ಳಿ ಮೂಲಕ ಅರೇಹಳ್ಳಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನಕ್ಕೆ ಆಗಮಿಸಿದ ನಂತರ ವೇದಿಕೆ ಕಾರ್ಯಕ್ರಮ ಜರುಗಿತು. ಆರ್‌ಎಸ್‌ಎಸ್ ಕಾರ್ಯವಾಹ ಪ್ರಸನ್ನ ಹೊಸಮನೆ, ಜಿಲ್ಲಾ ಸಹಕಾರ್ಯವಾಹ ಶ್ರೀಧರ್, ಸಂಪರ್ಕ ಪ್ರಮುಖ್ ಶ್ರೀಕಾಂತ್, ಕಾರ್ಯಕಾರಿಣಿ ಸದಸ್ಯ ರವಿ ಆಚಾರ್ಯ, ನಾರಾಯಣ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts