More

    ವಿದ್ಯಾರ್ಥಿಗಳಿಗಿರಲಿ ಅನ್ವೇಷಣೆ ಗುಣ -ಡಾ.ಎಂ.ಜಿ.ಈಶ್ವರಪ್ಪ – ಶರಣ ಸಾಹಿತ್ಯ ಪರಿಷತ್ತು ಸಂಸ್ಥಾಪಕರ ದಿನಾಚರಣೆ

    ದಾವಣಗೆರೆ: ಇಂದಿನ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಮಾಜದಲ್ಲಿ ಹೊಸತನ್ನು ಕಾಣಬೇಕು. ಅನ್ವೇಷಣೆ ಗುಣ ಹೊಂದಬೇಕು ಎಂದು ಜಾನಪದ ವಿದ್ವಾಂಸ ಡಾ.ಎಂ.ಜಿ. ಈಶ್ವರಪ್ಪ ಆಶಿಸಿದರು.
    ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದಿಂದ ಇಲ್ಲಿನ ಎವಿಕೆ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶರಣ ಸಾಹಿತ್ಯ ಪರಿಷತ್ತು ಸಂಸ್ಥಾಪಕರ ದಿನಾಚರಣೆ ಹಾಗೂ ಮಾಗನೂರು ಬಸಪ್ಪ ಮತ್ತು ಸರ್ವಮಂಗಳಮ್ಮ ಸ್ಮಾರಕ ದತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ತರಗತಿಯೊಳಗೆ ಪಠ್ಯ ಕೇಳುವುದು ಮತ್ತು ಅದರಾಚೆಗೆ ಪಠ್ಯ ಇರುವಂತೆ ನೋಡಿಕೊಳ್ಳುವುದೇ ಬೇರೆ. ಕಾರಿಡಾರ್, ಕ್ಯಾಂಪಸ್, ಊರಿನಲ್ಲಿ ನಾವು ಓದಿದ ವಿಷಯ ಹಾಗೂ ಮಹಾಪುರುಷರು ಹೇಳಿದ್ದನ್ನು ಆಚರಣೆಗೆ ತರಬೇಕು ಎಂದು ಹೇಳಿದರು.
    ಸಮಾಜದಲ್ಲಿ ಅಸಹನೆ, ವೈಷಮ್ಯ, ದ್ವೇಷ, ಅಸೂಯೆ ಹೆಚ್ಚಿದೆ. ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಬೆತ್ತಲೆ ಮೆರವಣಿಗೆ ಆಗುತ್ತಿವೆ. ದೇಹದ ಅವಯವ ಕತ್ತರಿಸಿ ಫ್ರಿಡ್ಜ್‌ನಲ್ಲಿರಿಸುವ, ಬೇಯಿಸುವ ಕ್ರೂರತೆಯ ದಿನದಲ್ಲಿ ನಾವಿದ್ದೇವೆ. ಹಾಗಾದರೆ ಬುದ್ಧ-ಬಸವ-ಗಾಂಧೀಜಿ ಚಿಂತನೆಗಳು ಏನಾದವು ಎಂಬುದನ್ನು ವಿದ್ಯಾರ್ಥಿಗಳು ಪರಾಮರ್ಶೆ ಮಾಡಬೇಕು ಎಂದರು.
    ದಾವಣಗೆರೆಯಲ್ಲಿ 1807ರಲ್ಲೇ ದಾನಿಗಳಿದ್ದರು ಎಂಬುದನ್ನು ಫ್ರಾನ್ಸಿಸ್ ಬುಕನನ್ ಕೂಡ ಉಲ್ಲೇಖಿಸಿದ್ದಾನೆ. ಇಲ್ಲಿನ ಕಾಲೇಜುಗಳಿಗೆ ದಾನಿಗಳ ಹೆಸರಿದ್ದು, ಈ ವೈಶಿಷ್ಟೃವನ್ನು ಬೇರೆಲ್ಲೂ ಕಾಣಲಾಗದು. ಮಾಗನೂರು ಬಸಪ್ಪ, ಧರ್ಮರತ್ನಾಕರ ಮದ್ದೂರಾಯಪ್ಪ, ಗುಂಡಿ ಮಹಾದೇವಪ್ಪ, ಕಿರುವಾಡಿ ವೀರಬಸಪ್ಪ, ಬ್ರಹ್ಮಪ್ಪ ತವನಪ್ಪ ಮೊದಲಾದ ದಾನಿಗಳು ಇಂದಿನ ಯುವಕರಿಗೆ ಆದರ್ಶಪುರುಷರು ಎಂದು ತಿಳಿಸಿದರು.
    ಉಪನ್ಯಾಸ ನೀಡಿದ ಎವಿಕೆ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಡಾ.ಮಂಜುನಾಥ ಕುರ್ಕಿ, ವಚನ ಸಾಹಿತ್ಯ ನಮ್ಮೆಲ್ಲರ ಬದುಕಿನ ಸಂವಿಧಾನ. ನಮ್ಮ ಜೀವನಕ್ಕೆ ಅದರ ಚೌಕಟ್ಟು ಹಾಕಿಕೊಂಡಲ್ಲಿ ಸಮಸಮಾಜ ಸೃಷ್ಟಿಸಬಹುದು. ನಾಗರಿಕ, ಸುಸಂಸ್ಕೃತರಾಗಿ ಬದುಕುಬಹುದು. ಆತ್ಮ ಸಾಕ್ಷಾತ್ಕಾರ ಸಾಧಿಸಬಹುದು ಎಂದು ಹೇಳಿದರು.
    ನಾವಿಂದು ವಿಜ್ಞಾನ-ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸಿದ್ದರೂ ನೈತಿಕತೆ, ಸಾಮಾಜಿಕ ಮೌಲ್ಯಗಳು ಮರೆಯಾಗಿವೆ. ಇದಕ್ಕೆ ಇಂದಿನ ಶಿಕ್ಷಣ ವ್ಯವಸ್ಥೆಯೇ ಕಾರಣವಾಗಿದೆ. ಬಾಲ್ಯದಿಂದಲೇ ಸಂಸ್ಕಾರ ಕಲಿಸದಿದ್ದಲ್ಲಿ ಹೆತ್ತವರ ವೃದ್ಧಾಪ್ಯ ಕಾಲದಲ್ಲಿ ಮಕ್ಕಳು ವೈದ್ಯರ ಬದಲಾಗಿ ವಕೀಲರನ್ನು ಸಂಪರ್ಕಿಸುವ ಕಾಲ ಬರಬಹುದು ಎಂದು ಸೂಕ್ಷ್ಮವಾಗಿ ಹೇಳಿದರು.
    ಸುತ್ತೂರಿನ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 70ನೇ ಜನ್ಮದಿನ(1986ರ ಆಗಸ್ಟ್ 29)ದಂದು ಶರಣ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು. ಶ್ರೀಗಳು ಅನಥಾಶ್ರಮ, ವೃದ್ಧಾಶ್ರಮ ಸ್ಥಾಪಿಸಿ ನಿರ್ಗತಿಕರಿಗೆ ಆಶ್ರಯದಾತರಾದರು. 1954ರಲ್ಲಿ ಜಿಎಸ್‌ಎಸ್ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿದರು. ಅನ್ನ, ಅಕ್ಷರ, ಆರೋಗ್ಯ, ಆದಾಯ ಮತ್ತು ಆಧ್ಯಾತ್ಮ ಪಂಚ ತತ್ವಗಳಡಿ ಅನೇಕ ಸಂಸ್ಥೆ ತೆರೆದರು ಎಂದು ವಿವರಿಸಿದರು.
    ಮಾಗನೂರು ಬಸಪ್ಪ ಅವರು ದಾವಣಗೆರೆ ಎಜುಕೇಷನಲ್ ಅಸೋಸಿಯೇಷನ್ ಅಲ್ಲದೆ ಅನೇಕ ಬ್ಯಾಂಕ್‌ಗಳ ನಿರ್ಮಾತೃ ಆದರು. ಕ್ವಿಟ್ ಇಂಡಿಯಾ ಹೋರಾಟಗಾರರಿಗೆ ಅನ್ನ-ಆಶ್ರಯ ನೀಡಿದ್ದರು ಎಂದೂ ಸ್ಮರಿಸಿದರು.
    ಮಾಗನೂರು ಬಸಪ್ಪ ಶಿಕ್ಷಣ ಕಾಲೇಜಿನ ಪ್ರಾಧ್ಯಾಪಕ ಎಸ್.ಟಿ. ಶಾಂತರಾಜ್ ಮಾತನಾಡಿ, ವೇದೋಪನಿಷತ್ತಿಗೆ ಕಡಿಮೆ ಇಲ್ಲದ ವಚನ ಸಾಹಿತ್ಯ ವಿಶ್ವದ ಎಲ್ಲ ಭಾಷೆಗಳಿಗೂ ಅನುವಾದಗೊಂಡಿದೆ ಎಂದರು.
    ಮಾಸಬ ಕಾಲೇಜು, ಎವಿಕೆ ಮಹಿಳಾ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಸಾಪ ಜಿಲ್ಲಾಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ, ಮಾಗನೂರು ಬಸಪ್ಪ ಪ್ರತಿಷ್ಠಾನ ಉಪಾಧ್ಯಕ್ಷೆ ಎಂ.ಎಸ್. ಸುನಂದಾದೇವಿ, ಮಾಸಬ ಕಾಲೇಜು ಪ್ರಾಚಾರ್ಯೆ ಜಿ.ಸಿ.ನೀಲಾಂಬಿಕೆ, ಎವಿಕೆ ಪ್ರಾಚಾರ್ಯೆ ಕಮಲಾ ಸೊಪ್ಪಿನ್ ಇದ್ದರು. ಡಾ. ರಣಧೀರ ಸ್ವಾಗತಿಸಿದರು. ಡಾ.ಆರ್.ಜಿ. ಕವಿತಾ ನಿರೂಪಿಸಿದರು. ಡಾ. ಮಾಚಿಹಳ್ಳಿ ಮಂಜಪ್ಪ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts