More

    ವಿದೇಶದಲ್ಲಿರುವವರ ಮಾಹಿತಿ ನೀಡಿ

    ಹಾವೇರಿ: ಜಿಲ್ಲೆಯಲ್ಲಿ ಈವರೆಗೂ ಯಾವುದೇ ಕರೊನಾ ಪ್ರಕರಣಗಳು ವರದಿಯಾಗಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಲಾಗುತ್ತಿದೆ. ಜಿಲ್ಲೆಯ ನಿವಾಸಿಗಳು ಉದ್ಯೋಗ, ಶಿಕ್ಷಣ ಮತ್ತಿತರ ಕಾರಣಗಳಿಂದ ಹೊರದೇಶದಲ್ಲಿ ವಾಸಿಸುತ್ತಿದ್ದರೆ ಅಂಥವರ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲತಃ ಹಾವೇರಿಯವರಾಗಿದ್ದು, ಹೊರದೇಶದಲ್ಲಿ ನೆಲೆಸಿದ್ದರೆ, ಸದ್ಯದಲ್ಲೇ ಸ್ವದೇಶಕ್ಕೆ ಆಗಮಿಸುತ್ತಿದ್ದರೆ ಅವರ ಸಂಬಂಧಿಕರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ದುಬೈ, ಸೌದಿಅರೇಬಿಯಾ, ಸಿಂಗಾಪುರ, ಜಪಾನ್, ಯೂರೋಪ್ ರಾಷ್ಟ್ರ ಸೇರಿ ಜಗತ್ತಿನ ಯಾವ ಯಾವ ದೇಶದಲ್ಲಿ ಹಾವೇರಿ ಜಿಲ್ಲೆಯವರು ವಾಸಿಸುತ್ತಿದ್ದಾರೆ. ಅವರ ಹೆಸರು, ವಿಳಾಸ ಮತ್ತು ಮಾಹಿತಿಯನ್ನು ಒದಗಿಸಬೇಕು. ಈ ಮಾಹಿತಿಯನ್ನು ಕೇವಲ ಕರೊನಾ ಹರಡದಂತೆ ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸಂಗ್ರಹಿಸಲಾಗುತ್ತಿದೆ. ವಿದೇಶದಲ್ಲಿ ನೆಲೆಸಿದ ಕುಟುಂಬದ ಸದಸ್ಯರ ಮಾಹಿತಿಯನ್ನು ಆರೋಗ್ಯ ಇಲಾಖೆ ಅಥವಾ ಜಿಲ್ಲಾಡಳಿತದ ಸಹಾಯವಾಣಿ 08375-249102ಗೆ ಕರೆ ಮಾಡಿ ಸ್ವಯಂ ಪ್ರೇರಣೆಯಿಂದ ನೀಡಬೇಕು ಎಂದರು.

    ಜಿಲ್ಲೆಯಲ್ಲಿ ಕರೊನಾ ಭಯವಿಲ್ಲ. ವಿದೇಶದಿಂದ ಬಂದವರ ಮೇಲೆ ಹಾಗೂ ಪ್ರವಾಸಿಗರ ಮೇಲೆ, ಹೊರ ಜಿಲ್ಲೆ, ಹೊರ ರಾಜ್ಯದ ರೈಲ್ವೆ, ಬಸ್ ಪ್ರಯಾಣಿಕರ ಮೇಲೆ ನಿಗಾವಹಿಸಲಾಗಿದೆ. ಬಸ್, ರೈಲ್ವೆ ಪ್ರಯಾಣಿಕರನ್ನು ಹೊರತುಪಡಿಸಿ ಕಾರು ಇತರೆ ಸೌಕರ್ಯ ಬಳಸಿ ಪ್ರಯಾಣ ಬೆಳೆಸುವವರ ಮೇಲೂ ನಿಗಾವಹಿಸಲಾಗುವುದು ಎಂದರು.

    ರೈಲ್ವೆ ಹಾಗೂ ಬಸ್ ನಿಲ್ದಾಣಗಳಲ್ಲಿ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗುತ್ತಿದೆ. ದೂರದೂರುಗಳಿಂದ ಬರುವ ಪ್ರಯಾಣಿಕರನ್ನು ಕಡ್ಡಾಯವಾಗಿ ಸ್ಕ್ರೀನಿಂಗ್ ಮಾಡಲು ಕ್ರಮ ಕೈಗೊಳ್ಳಲಾಗುವುದು. ಪ್ರತಿ ತಾಲೂಕು ಕೇಂದ್ರ ಹಾಗೂ ಜಿಲ್ಲಾ ಕೇಂದ್ರದಲ್ಲಿ ವೆಂಟಿಲೇಟರ್ ವ್ಯವಸ್ಥೆ ಮಾಡಲು ಹಾಗೂ ಐಸೋಲೇಷನ್ ವಾರ್ಡ್​ಗಳನ್ನು ರಚಿಸಲಾಗಿದೆ. ಮಾಸ್ಕ್ ಸೇರಿ ಕರೊನಾ ತಡೆಯ ಹೆಚ್ಚುವರಿ ವೈದ್ಯಕೀಯ ಉಪಕರಣಗಳಿಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

    ಮಾಸ್ಕ್ ಹಾಗೂ ಸಾನಿಟೈಸರ್ ಕೃತಕ ಅಭಾವ ಸೃಷ್ಟಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಎಲ್ಲ ಅಂಗಡಿ ಮಾಲೀಕರಿಗೆ, ಮಾಲ್​ಗಳಿಗೆ , ಮೆಡಿಕಲ್ ಶಾಪ್​ಗಳಿಗೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ, ಪ್ರಾದೇಶಿಕ ಸಾರಿಗೆ ಕಚೇರಿ ಸೇರಿ ಜನದಟ್ಟಣೆಯಿರುವ ಪ್ರದೇಶಗಳಲ್ಲಿ ಸ್ಕ್ರೀನಿಂಗ್ ಕೌಂಟರ್​ಗಳನ್ನು ತೆರೆದು ತಪಾಸಣೆ ಮಾಡಿಸಲಾಗುವುದು. ಸಂತೆಗಳ ರದ್ದು ಕುರಿತಂತೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗಿದೆ. ಮಾರುಕಟ್ಟೆ, ಸಂತೆ, ಜನರ ದೈನಂದಿನ ಬದುಕಿಗೆ ತೊಂದರೆಯಾಗದಂತೆ ಸಾಮಗ್ರಿಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿ ಹೆಚ್ಚು ಜನ ಗುಂಪುಗೂಡಗದಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

    ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಮೈಸೂರು ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಈವರೆಗೂ ಹಕ್ಕಿಜ್ವರ ಪ್ರಕರಣ ಕಂಡುಬಂದಿಲ್ಲ. ಆದರೂ ಎಲ್ಲ ಮುನ್ನೆಚ್ಚರಿಕೆ ವಹಿಸಲಾಗಿದೆ. ಮುಂದಿನ ಎರಡು ವಾರ ಕರೊನಾ ವೈರಸ್ ಹರಡುವಿಕೆ ತಡೆಗೆ ಅತ್ಯಂತ ಗಂಭೀರವಾದ ಸಮಯವಾಗಿದೆ. ಈ ಅವಧಿಯಲ್ಲಿ ಗರಿಷ್ಠ ಎಚ್ಚರ ವಹಿಸಲಾಗುವುದು. ವೈದ್ಯಕೀಯ ತಂಡಕ್ಕೆ ಎಲ್ಲ ಮುನ್ನೆಚ್ಚರಿಕೆ ಕೈಗೊಳ್ಳಲು ಸೂಚಿಸಲಾಗಿದೆ.

    | ಕೃಷ್ಣ ಬಾಜಪೈ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts