More

    ವಿಡಿಯೋ ಕಾಲ್​ನಲ್ಲಿ ಮಕ್ಕಳಿಗೆ ಕಿಚ್ಚನ ಅಭಯ

    ಹುಬ್ಬಳ್ಳಿ: ಆ ಶಾಲೆ ಮಕ್ಕಳು ಬೀದಿಗೆ ಬಿದ್ದ ದುಃಖದಲ್ಲಿದ್ದರು. ಬುಧವಾರ ಅವರಿಗೆ ತರಗತಿಯ ವ್ಯವಸ್ಥೆಯೂ ಆಯಿತು, ನೆಚ್ಚಿನ ನಟನೊಡನೆ ವಿಡಿಯೋ ಕಾಲ್​ನಲ್ಲಿ ಮಾತನಾಡುವ ಅವಕಾಶವೂ ಸಿಕ್ಕಿತು…

    ಹೀಗೆ ಅವಕಾಶ ಪಡೆದವರು ಇಲ್ಲಿಯ ರಾಮನಗರದ ಹರಿಜನ ಹೆಣ್ಣುಮಕ್ಕಳ ಶಾಲೆ ವಿದ್ಯಾರ್ಥಿಗಳು. ಈ ಶಾಲೆಯ ಜಾಗವನ್ನು ನ್ಯಾಯಾಲಯದ ಆದೇಶದಂತೆ ಸ್ಥಳೀಯ ಗಾಂಧಿವಾಡ ಕೋ-ಆಪ್ ಹೌಸಿಂಗ್ ಸೊಸೈಟಿ ವಶಕ್ಕೆ ಪಡೆದಿದ್ದರಿಂದ ಮಕ್ಕಳು ಬೀದಿಗೆ ಬಿದ್ದಿದ್ದರು.

    ಮಕ್ಕಳು ಬೀದಿಗೆ ಬಿದ್ದಿರುವ ಕುರಿತು ದಿಗ್ವಿಜಯ ನ್ಯೂಸ್ ಮತ್ತು ವಿಜಯವಾಣಿಯಲ್ಲಿ ವರದಿ ಪ್ರಕಟವಾಗಿತ್ತು. ವರದಿಯನ್ನು ಗಮನಿಸಿದ್ದ ನಟ ಕಿಚ್ಚ ಸುದೀಪ್ ಅವರು, ಮಕ್ಕಳಿಗೆ ಶಾಲಾ ಕಟ್ಟಡದ ವ್ಯವಸ್ಥೆ ಮಾಡಿಕೊಡುವುದಾಗಿ ಘೊಷಿಸಿದ್ದರು. ಅದರಂತೆ, ವಿಳಂಬವಿಲ್ಲದೆ ಬುಧವಾರ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಟ್ಟರು. ಕಿಚ್ಚ ಸುದೀಪ ಚಾರಿಟಬಲ್ ಸೊಸೈಟಿ ಅಧ್ಯಕ್ಷ ರಮೇಶ ಕಿಟ್ಟಿ, ಪದಾಧಿಕಾರಿಗಳಾದ ನಾಗೇಂದ್ರ ಮಹಾದೇವ, ಪುಟ್ಟರಾಜು ಅವರು ಬುಧವಾರ ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದರು.

    ಮಕ್ಕಳ ಅಭ್ಯಾಸಕ್ಕೆ ತೊಂದರೆಯಾಗದಂತೆ ಪಕ್ಕದ ಬಾಬಾ ಇನ್​ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜ್​ನಲ್ಲಿ ತಾತ್ಕಾಲಿಕವಾಗಿ ತರಗತಿ ನಡೆಸಲು ವ್ಯವಸ್ಥೆ ಕಲ್ಪಿಸಿದರು. ಅದಕ್ಕೆ ತಗಲುವ ವೆಚ್ಚವನ್ನು ಸೊಸೈಟಿ ಭರಿಸಲಿದೆ. ಶಾಶ್ವತ ವ್ಯವಸ್ಥೆ ಆಗುವವರೆಗೆ ಜತೆಗಿರಲಿದೆ ಎಂದು ತಿಳಿಸಿದರು. ಅನುದಾನಿತ ಶಾಲೆಯನ್ನು ನಡೆಸುತ್ತಿರುವ ನಗರ ಹಿತಾಭಿವೃದ್ಧಿ ಯುವಕ ಸಂಘದ ಪದಾಧಿಕಾರಿಗಳು, ಶಿಕ್ಷಕರು, ಮಕ್ಕಳೊಂದಿಗೆ ರ್ಚಚಿಸಿದ ರಮೇಶ ಕಿಟ್ಟಿ ಮತ್ತು ಇತರರು, ಸೂಕ್ತ ಜಾಗ ಗುರುತಿಸಿದರೆ ಕಿಚ್ಚ ಸುದೀಪ ಚಾರಿಟಬಲ್ ಸೊಸೈಟಿ ವತಿಯಿಂದ ಕಟ್ಟಡ ನಿರ್ವಿುಸಿಕೊಡುತ್ತೇವೆ ಎಂದು ತಿಳಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ, ನಟ ಸುದೀಪ ಅವರ ಸೂಚನೆ ಮೇರೆಗೆ ಇಲ್ಲಿಗೆ ಬಂದು ಪರಿಶೀಲನೆ ನಡೆಸಿದ್ದೇವೆ. ಬಡ ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿ ನಿಲ್ಲಲು ಏನು ಬೇಕೋ ಅದನ್ನು ಮಾಡಿಕೊಡುವುದಾಗಿ ಸುದೀಪ ಅವರು ತಿಳಿಸಿದ್ದಾರೆ ಎಂದರು. ಬಿಇಒ ಶ್ರೀಶೈಲ ಕರಿಕಟ್ಟಿ, ಗಾಂಧಿವಾಡ ಹಿತವರ್ಧಕ ಸಂಘದ ಅಧ್ಯಕ್ಷ ಆನಂದ ಪಿಳ್ಳೈ, ಉಪಾಧ್ಯಕ್ಷೆ ರಿಚೆಲ್ ಪ್ರಕಾಶ, ಮುಖ್ಯೋಪಾಧ್ಯಾಯ ವೀರಪ್ಪ ಹಂಚಿನಮನಿ, ಸ್ಥಳೀಯರಾದ ಅಬ್ದುಲ್ ಗಣಿ ವಲಿ ಅಹಮ್ಮದ್, ಸುನೀಲ ಸಾಂಡ್ರಾ, ಶಾಲೆಯ ಹಳೇ ವಿದ್ಯಾರ್ಥಿಗಳು, ಸ್ಥಳೀಯರು ಇದ್ದರು.

    ನಾನಿದ್ದೇನೆ… ಚಿಂತೆ ಬಿಡಿ… ರಮೇಶ ಕಿಟ್ಟಿ ಅವರ ಮೊಬೈಲ್​ಗೆ ವಿಡಿಯೋ ಕರೆ ಮಾಡಿದ ನಟ ಸುದೀಪ ಅವರು ಮಕ್ಕಳು ಮತ್ತು ಶಿಕ್ಷಕರೊಂದಿಗೆ ಮಾತನಾಡಿದರು. ಶಾಲಾ ಕಟ್ಟಡ ಒದಗಿಸಿಕೊಡಲು ನಾನಿದ್ದೇನೆ, ಚಿಂತೆ ಬಿಡಿ. ಮಕ್ಕಳ ಶಿಕ್ಷಣ ಯೋಗ್ಯ ರೀತಿಯಲ್ಲಿ ಮುಂದುವರಿಯಲಿ ಎಂದು ಹೇಳಿದರು. ಸುದೀಪ ಅವರನ್ನು ಕಂಡು ಆನಂದ ತುಂದಿಲರಾದ ಮಕ್ಕಳು, ಥ್ಯಾಂಕ್ಯೂ ಸರ್… ಎನ್ನುತ್ತ ಆನಂದ ಭಾಷ್ಪ ಸುರಿಸಿದರು. ಮುಖ್ಯಾಧ್ಯಾಪಕ ವೀರಪ್ಪ ಹಂಚಿನಮನಿ ಅವರು ಸುದೀಪ ಅವರೊಂದಿಗೆ ಮಾತನಾಡಿ, ನೀವು ಕಟ್ಟಿಸಿಕೊಡುವ ಶಾಲಾ ಕಟ್ಟಡಕ್ಕೆ ನಿಮ್ಮ ತಾಯಿಯವರ ಹೆಸರನ್ನೇ ಇಡುವುದಾಗಿ ಹೃದಯತುಂಬಿ ಹೇಳಿದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts