More

    ವಿಜೃಂಭಣೆಯ ತ್ರಿಮೂರ್ತಿಗಳ ರಥೋತ್ಸವ


    ಜಡೇರುದ್ರಸ್ವಾಮಿ, ಕುಂಬೇಶ್ವರಸ್ವಾಮಿ, ಮಹದೇಶ್ವರಸ್ವಾಮಿ ದರ್ಶನ ಪಡೆದ ಭಕ್ತರು

    ಹನೂರು: ತಾಲೂಕು ವ್ಯಾಪ್ತಿಯ ಗಡಿಯಂಚಿನಲ್ಲಿರುವ ಹಾಗೂ ತಮಿಳುನಾಡಿಗೆ ಸೇರಿದ ಗೇರುಮಾಳಂ ಗ್ರಾಮದ ಜಡೇರುದ್ರಸ್ವಾಮಿ, ಕುಂಬೇಶ್ವರಸ್ವಾಮಿ ಹಾಗೂ ನಡುಕೇರಿ ಮಹದೇಶ್ವರ ಸ್ವಾಮಿ ರಥೋತ್ಸವವು ಬುಧವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭ ಣೆಯಿಂದ ಜರುಗಿತು.

    ಏಳು ದಿನಗಳ ಕಾಲ ನಡೆಯಲಿರುವ ಈ ಜಾತ್ರಾ ಮಹೋತ್ಸವಕ್ಕೆ ದೇಗುಲವನ್ನು ವಿವಿಧ ಪುಷ್ಪ ಹಾಗೂ ತಳಿರು ತೋರಣದಿಂದ ಸಿಂಗಾರ ಮಾಡಲಾಗಿತ್ತು. ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ಮಾಡಲಾಗಿತ್ತು. ತ್ರಿಮೂರ್ತಿಗಳು ನೆಲೆಸಿರುವ ಈ ಪುಣ್ಯಕ್ಷೇತ್ರವು ತಮಿಳುನಾಡು ರಾಜ್ಯದ ಈರೋಡ್ ಜಿಲ್ಲೆಯ ತಾಳವಾಡಿ ತಾಲೂಕಿಗೆ ಸೇರಿದೆ. ಈ ಜಾತ್ರೆಗೆ ಪ್ರತಿವರ್ಷ ತಮಿಳುನಾಡು ಹಾಗೂ ರಾಜ್ಯದ ಜನತೆ ಭಾಗವಹಿಸುವುದು ವಿಶೇಷ.

    ಜಾತ್ರೆಗೆ ನ.4ರಂದು ಜಾತ್ರೆಗೆ ಚಾಲನೆ ನೀಡಲಾಗಿತ್ತು. ಅಂದು ರಾತ್ರಿ 10ರಲ್ಲಿ ನಡುಕೇರಿ ಮಹದೇಶ್ವರಸ್ವಾಮಿ ದೇಗುಲದಲ್ಲಿ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ ಕೈಗೊಳ್ಳಲಾಗಿತ್ತು. 5 ರಂದು ಹಾಲರವಿ ಉತ್ಸವ ಹಾಗೂ ಬಾಯಿಬೀಗ ಸೇವೆಯೂ ನೆರವೇರಿದ್ದು, ಹರಕೆ ಹೊತ್ತ ಭಕ್ತರು ಬಾಯಿಬೀಗವನ್ನು ಹಾಕಿಸಿಕೊಂಡಿದ್ದರು. 6 ರಂದು ಬೆಳಗ್ಗೆ 5ಕ್ಕೆ ಕೊಂಡೋತ್ಸವ ರಾತ್ರಿ 7ರಲ್ಲಿ ಭಕ್ತರಿಗೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು.

    7ರಂದು ಜಡೇರುದ್ರಸ್ವಾಮಿ ಹಾಗೂ ಕುಂಬೇಶ್ವರಸ್ವಾಮಿ ದೇಗುಲದಲ್ಲಿ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ ಹಾಗೂ ದೀಪಾಲಂಕಾರದ ಸೇವೆ ನೆರವೇರಿಸಲಾಗಿತ್ತು.ಮಂಗಳವಾರ ರಾತ್ರಿ ಹಾಲರವಿ ಸೇವೆ ಹಾಗೂ ಬಾಯಿಬೀಗ ಸೇವೆ, ಬುಧವಾರ ಬೆಳಗ್ಗೆ 5 ಗಂಟೆಯಲ್ಲಿ ಕೊಂಡೋತ್ಸವ ಹಾಗೂ ಮಧ್ಯಾಹ್ನ 1.30ರಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

    ರಥೋತ್ಸವದ ಹಿನ್ನೆಲೆಯಲ್ಲಿ ತೇರನ್ನು ತಳಿರು-ತೋರಣ, ವಿವಿಧ ಪುಷ್ಪ, ಬಣ್ಣಬಣ್ಣದ ಬಟ್ಟೆಗಳಿಂದ ಸಿಂಗಾರ ಮಾಡಲಾಗಿತ್ತು. ದೇವರ ವಿಗ್ರಹಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ 1.30 ರಲ್ಲಿ ಸಲ್ಲುವ ಶುಭ ಲಗ್ನದಲ್ಲಿ ಮಹಾ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯಮೇಳದೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ಈ ವೇಳೆ ಭಕ್ತರು ಘೋಷಣೆಗಳನ್ನು ಕೂಗುತ್ತಾ ತೇರನ್ನು ಎಳೆದು ಸ್ವಾಮಿ ಕೃಪೆಗೆ ಪಾತ್ರರಾದರು.

    ಈ ವೇಳೆ ನಂದಿಧ್ವಜ ಕುಣಿತ, ಕಂಸಾಳೆ ನೃತ್ಯ ಹಾಗೂ ಹುಲಿ ವಾಹನ ಮೆರವಣಿಗೆ ಎಲ್ಲರ ಗಮನ ಸೆಳೆಯಿತು. ಆಗಮಿಸಿದ ಭಕ್ತರು ತೇರಿಗೆ ಹಣ್ಣು-ದವನವನ್ನು ಎಸೆಯುವುದರ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾದಲ್ಲದೇ ಧನ-ಧಾನ್ಯವನ್ನು ಎಸೆದು ಭಕ್ತಿ ಭಾವವನ್ನು ಮೆರೆದರು.

    ಜಾತ್ರೆಗೆ ತಮಿಳುನಾಡಿನ ಈರೋಡ್, ಸೇಲಂ, ಕೊಯಮ್ಮತ್ತೂರು, ಬಣ್ಣಾರಿ, ಸತ್ತಿಮಂಗಲ, ತಾಳವಾಡಿ ಸೇರಿದಂತೆ ರಾಜ್ಯದ ಹನೂರು, ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ, ಚಾಮರಾಜನಗರ, ಮೈಸೂರು, ಬೆಂಗಳೂರು ಇನ್ನಿತರ ಕಡೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ದೇವಾಲಯದ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ತಮಿಳನಾಡಿನ ಪೋಲಿಸರು ಬಂದೋಬಸ್ತ್ ಕಲ್ಪಿಸಿದ್ದರು.

    ಟಿಬೆಟಿಯನ್ನರು ಭಾಗಿ: ರಾಜ್ಯದ ಒಡೆಯರಪಾಳ್ಯ ಗ್ರಾಮದ ವಿವಿಧ ಕಾಲನಿಯಲ್ಲಿರುವ ಟಿಬೆಟಿಯನ್ನರು ಗೆರುಮಾಳಂನಲ್ಲಿ ನಡೆದ ರಥೋತ್ಸವದಲ್ಲಿ ಭಾಗಿಯಾಗಿದ್ದರು. ಇಲ್ಲಿ ನಡೆದ ರಥೋತ್ಸವ ಕಾರ್ಯಕ್ರಮ ಸೇರಿದಂತೆ ಧಾರ್ಮಿಕ ಕಾರ್ಯಕ್ರಮವನ್ನು ವೀಕ್ಷಿಸಿ ಕಣ್ತುಂಬಿಕೊಂಡರು. ಈ ಸಂದರ್ಭದಲ್ಲಿ ಇಲ್ಲಿನ ಧಾರ್ಮಿಕ ಕಾರ್ಯಗಳ ಬಗ್ಗೆ ಟಿಬೆಟಿಯನ್ನರು ಮೆಚ್ಚುಗೆ ವ್ಯಕ್ತಪಡಿಸಿದರು.

    ಮಂಜುನಾಥ್‌ಗೆ ಹಣ್ಣು ಧವನ ಎಸೆತ: ಹನೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಆರ್.ಮಂಜುನಾಥ್ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹಣ್ಣು ದವನಕ್ಕೆ ಜೆಡಿಎಸ್ ಮಂಜುನಾಥ್ ಎಂದು ಬರೆದು ಕೈಮುಗಿದು ತೇರಿಗೆ ಎಸೆದು ಈ ಬಾರಿ ಹನೂರು ಗೆದ್ದು ಬರಲಿ ಎಂದು ಬೇಡಿಕೊಂಡದ್ದು ವಿಶೇಷವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts