More

    ವಿಕಸಿತ ಭಾರತದ ಅರ್ಥವೇನು? ಬಿಜೆಪಿಗರಿಗೆ ಕೆಪಿಸಿಸಿ ವಕ್ತಾರ ಗಣಿಹಾರ ಸಾಲು ಸಾಲು ಪ್ರಶ್ನೆ

    ವಿಜಯಪುರ: ಬೆಲೆ ಏರಿಕೆಯಿಂದಾಗಿ ದೇಶದ ಜನ ತತ್ತರಿಸಿದ್ದಾರೆ, ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ನಷ್ಟದಲ್ಲಿದ್ದಾರೆ, ಪ್ರಗತಿ ಎಂಬ ಪದವೇ ಅರ್ಥ ಕಳೆದುಕೊಂಡಿರುವಾಗಿ ಬಿಜೆಪಿಯ ವಿಕಸಿತ ಭಾರತ ಎಂಬ ಪದಕ್ಕೆ ಅರ್ಥವೇನಾದರೂ ಇದೆಯಾ? ಎಂದು ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಪ್ರಶ್ನಿಸಿದರು.

    ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಮಾಡಿದ ಸಾಧನೆ ಏನು? ಕೈಗೊಂಡ ಅಭಿವೃದ್ಧಿ ಎಂಥದ್ದು ಎಂಬುದನ್ನು ಜನರ ಮುಂದಿಟ್ಟು ಮತ ಕೇಳುವ ಬದಲು ಕೇವಲ ಧರ್ಮ- ದೇವರು ಮುಂದಿಟ್ಟು ಮತ ಕೇಳುವ ದುಃಸ್ಥಿತಿಗೆ ಬಿಜೆಪಿ ಬಂದಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಹರಿಹಾಯ್ದರು.

    ಧರ್ಮ, ಜಾತಿ ಹೆಸರಿನಲ್ಲಿ ಪ್ರಚಾರ ಮಾಡುತ್ತಿದ್ದಾರೆ, ಮತ ಕೇಳುತ್ತಿದ್ದಾರೆ. ಆದರೂ ಚುನಾವಣೆ ಆಯೋಗ ಹಲ್ಲಿಲ್ಲದ ಹಾವಿನಂತೆ ಕುಳಿತಿದೆ‌ ಎಂದರು.

    ಬಿಜೆಪಿ ದಂಧಾ ಲೇವ್ ಚಂದಾ ದೇವ್ ಎಂಬ ನೀತಿ ಮಾಡಿ ಚುನಾವಣೆ ಬಾಂಡ್ ಹೆಸರಲ್ಲಿ ಹಣ ಸಂಗ್ರಹಿಸುತ್ತಿದೆ‌. ಪಾರದರ್ಶಕತೆ ತರುವ ಬಗ್ಗೆ ಇದೀಗ ಮಾತನಾಡುತ್ತಿರುವ ಬಿಜೆಪಿ ಗೌಪ್ಯತೆ ಕಾಪಾಡುವ ಬಗ್ಗೆ ಮೊದಲೇ ನೀತಿ ರೂಪಿಸಿತ್ತು. ಸುಪ್ರೀಂ ಕೋರ್ಟ್ ಚಾಟಿ ಬೀಸಿದಾಗಲೇ ಮಾಹಿತಿ ನೀಡಬೇಕಾಯಿತು ಎಂದರು.

    ಕಾಂಗ್ರೆಸ್ ಪರ ಒಲವು:

    ಉತ್ತರ ಭಾರತ ಬದಲಾಗಿದೆ‌. ಬಿಜೆಪಿ ಸೋಲಿಸಲು ಪಣ ತೊಟ್ಟಿದ್ದಾರೆ ಅಲ್ಲಿನ ಜನ‌. ದಿನ ನಿತ್ಯದ ಚುನಾವಣೆ ಸಮೀಕ್ಷೆ ಗಳು ಕಾಂಗ್ರೆಸ್ ಪರ ಬರುತ್ತಿವೆ. ಹೀಗಾಗಿ ಕಂಗಾಲಾಗಿರುವ ಬಿಜೆಪಿಗರು ಉಪವಾಸ ಅಲೆಯುತ್ತಿದ್ದಾರೆ. ಮತಗಳಿಕೆಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ ಎಂದು ಗಣಿಹಾರ ಹೇಳಿದರು‌.

    ದೇಶದ ಭದ್ರತೆಗಾಗಿ ಮೋದಿ ಮಾಡಿದ್ದೇನು? ಪುಲ್ವಾಮಾ ದಾಳಿಯ ತನಿಖೆ ವರದಿ ಏನಾಯಿತು? ಆರ್ ಡಿಎಕ್ಸ್ ಒಳಗೆ ಹೇಗೆ ಬಂತು? ಎಂಬುದೇ ಈವರೆಗೂ ಬಹಿರಂಗವಾಗಿಲ್ಲ. ನೋಟ್ ಬ್ಯಾನ್ ಸಾಧನೆ ಏನೆಂಬುದು ಈವರೆಗೂ ಜನರಿಗೆ ಗೊತ್ತುಪಡಿಸಿಲ್ಲ. ಕೇವಲ ಸುಳ್ಳಿನ ಸರಮಾಲೆ ಹೆಣೆದು ಜನರನ್ನು ಮೋಸ ಮಾಡುತ್ತಿದೆ ಎಂದರು.

    ಸಿ.ಟಿ. ರವಿ ವಿರುದ್ಧ ವಾಗ್ದಾಳಿ:

    ರಾಹುಲ್ ಮದುವೆ ಗಂಡು ಎಂದರೆ ಯಾರೂ ಹೆಣ್ಣು ಕೊಡಲ್ಲ, ಮೋದಿ ಬಿಜೆಪಿ ಗಂಡು ಎಂದು ಸಿ.ಟಿ. ರವಿ ಅವರು ಸಂಸ್ಕೃತಿ ಹೀನ ಪದ ಬಳಸಿ ಭಾಷಣ ಮಾಡುತ್ತಾರೆ. ಆದರೆ, ತನ್ನ ಮಡದಿಗೆ ಪತಿಯಾಗದ ಮೋದಿ ಬಿಜೆಪಿಗೆ ಎಂಥ ಗಂಡ? ಬಿಜೆಪಿಗರು ಅಶ್ಲೀಲ ಮಾತನಾಡುವುದೇಕೆ? ರಾಹುಲ್ ಪಿಎಂ ಆದರೆ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ಬಿಜೆಪಿಗರು ಹೇಳುತ್ತಿದ್ದಾರೆ, ಅಷ್ಟಕ್ಕೂ ರಾಹುಲ್ ಗಾಂಧಿ ಪಿಎಂ ಅಭ್ಯರ್ಥಿ ಎಂದು ಹೇಳಿದವರು ಯಾರು? ನಿಮ್ಮಲ್ಲಿ ಮೋದಿ ಬಿಟ್ಟರೆ ಗತಿಯೇ ಇಲ್ಲವಾ? ಕೇವಲ ಮೋದಿ ಹೆಸರಲ್ಲಿ ಮತ ಕೇಳುತ್ತಿರುವುದೇಕೆ? ಬೇರೆ ನಾಯಕರೇ ಇಲ್ಲವೇ? ಎಂದು ಬಿಜೆಪಿಗರನ್ನು ಪ್ರಶ್ನಿಸಿದರು.

    ಗಂಡನ ಹಣ‌ಕಿತ್ತು ಹೆಂಡತಿಗೆ ಕೊಡುತ್ತಿದ್ದೀರಿ ಎಂದು ಲೇವಡಿ ಮಾಡುವ ಬಿಜೆಪಿಗರು ಜನರ ಹಣ ಕಿತ್ತು ಅಂಬಾನಿ- ಅದಾನಿಗೆ ಕೊಟ್ಟರಲ್ಲ ಆ ಬಗ್ಗೆ ಏಕೆ ಮಾತನಾಡಲ್ಲ? ಸರ್ಕಾರಿ ಸಂಸ್ಥೆಗಳನ್ನೇ ಮಾರಾಟ ಮಾಡಿದರಲ್ಲಾ? ಆ ಬಗ್ಗೆ ಮಾತನಾಡಿ ಎಂದು ತಿವಿದರು.

    ಬುಲೆಟ್ ಟ್ರೇನ್ ಎಲ್ಲಿ ಹೋಯಿತು? ಕಪ್ಪು ಹಣ ಬಂತಾ? ಉದ್ಯೋಗ ಸೃಷ್ಠಿ ಏನಾಯಿತು? ರೈತರ ಆದಾಯ ದ್ವಿಗುಣವಾಯಿತೇ? ಲೋಕ ಪಾಲ ಜಾರಿಗೆ ತಂದಿರಾ? ಎಂದು‌ ಸಾಲು ಸಾಲು ಪ್ರಶ್ನೆಗಳ ಸುರಿಮಳೆಗೈದ ಗಣಿಹಾರ, ಈ ಎಲ್ಲ ಕಾರಣಗಳಿಂದಾಗಿ ಜನ ಈ ಬಾರಿ ಐಎನ್ ಡಿಐಎ ಮೈತ್ರಿಕೂಟಕ್ಕೆ ಬೆಂಬಲಿಸಲು ಸಜ್ಜಾಗಿದ್ದಾರೆ ಎಂದರು.

    ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ಮಹಾದೇವಿ ಗೋಕಾಕ, ಸುಭಾಷ ಕಾಲೇಬಾಗ, ಸತೀಶ ಅಡವಿ, ವಸಂತ ಹೊನಮೊಡೆ, ಬೀರಪ್ಪ ಜುಮನಾಳ ಮತ್ತಿತರರಿದ್ದರು ‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts