More

    ವಿಐಎಸ್‌ಎಲ್ ಮುಚ್ಚಲು ಕೇಂದ್ರದ ಹುನ್ನಾರ: ಶಾಸಕ ಬಿ.ಕೆ.ಸಂಗಮೇಶ್ವರ್ ಆರೋಪ

    ಭದ್ರಾವತಿ: ಇಲ್ಲಿನ ಪ್ರತಿಷ್ಠಿತ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಮುಚ್ಚಲು ಹೊರಟಲ್ಲಿ ಕಾಂಗ್ರೆಸ್‌ನಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ್ವರ್ ಎಚ್ಚರಿಸಿದ್ದಾರೆ.
    ಕೇಂದ್ರ ಉಕ್ಕು ಸಚಿವರು ಇಲ್ಲಿನ ವಿಐಎಸ್‌ಎಲ್ ಕಾರ್ಖಾನೆಗೆ 3 ಬಾರಿ ಭೇಟಿ ನೀಡಿದ್ದು, ಈ ಕಾರ್ಖಾನೆ ಅಭಿವೃದ್ಧಿಯತ್ತ ಸಾಗಬೇಕಾದಲ್ಲಿ ಕಾರ್ಖಾನೆಗೆ ಅಗತ್ಯವಿರುವ ಗಣಿಯನ್ನು ರಾಜ್ಯ ಸರ್ಕಾರ ಮಂಜೂರು ಮಾಡಬೇಕು. ಆಗ ಕೇಂದ್ರ ಸರ್ಕಾರ ಸೈಲ್ ಮೂಲಕ ಸುಮಾರು 6 ಸಾವಿರ ಕೋಟಿ ರೂ. ಬಂಡವಾಳ ತೊಡಗಿಸಲು ಸಾಧ್ಯವಾಗುತ್ತದೆ ಎಂದಿದ್ದರು. ಅದರಂತೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ 2017ರಲ್ಲಿ ಕಾರ್ಖಾನೆಗೆ ಅವಶ್ಯವಿರುವ 150 ಹೆಕ್ಟೇರ್ ಗಣಿಯನ್ನು ರಮಣದುರ್ಗ ಪ್ರದೇಶದಲ್ಲಿ ಮಂಜೂರು ಮಾಡಿದ್ದರು. ಇದೀಗ 2024ರಲ್ಲಿ ಗಣಿಗಾರಿಕೆ ಆರಂಭವಾಗಲಿದೆ. ಆದರೆ ಕೇಂದ್ರ ಸರ್ಕಾರ ಕಾರ್ಖಾನೆಗೆ ಬಂಡವಾಳ ತೊಡಗಿಸದೆ ಇದೀಗ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚುವ ಹುನ್ನಾರ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದಿದ್ದಾರೆ.
    ವಿಐಎಸ್‌ಎಲ್ ಕಾರ್ಖಾನೆ ಭದ್ರಾವತಿಯ ಆರ್ಥಿಕ ಬೆನ್ನೆಲುಬಾಗಿದ್ದು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 20 ಸಾವಿರಕ್ಕೂ ಅಧಿಕ ಕುಟುಂಬಗಳು ಈ ಕಾರ್ಖಾನೆಯನ್ನು ಅವಲಂಬಿಸಿ ಬದುಕುತ್ತಿವೆ. ಕ್ಷೇತ್ರದ ಆಸ್ತಿಯಾಗಿರುವ ವಿಐಎಸ್‌ಎಲ್ ಕಾರ್ಖಾನೆಯನ್ನು ಮುಚ್ಚಲು ಕಾಂಗ್ರೆಸ್ ಎಂದಿಗೂ ಅವಕಾಶ ನೀಡುವುದಿಲ್ಲ. ಕೇಂದ್ರ ಸರ್ಕಾರ ಕಾರ್ಖಾನೆಯನ್ನು ಸಂಪೂರ್ಣ ಮುಚ್ಚಲು ಹೊರಟಲ್ಲಿ ರಾಜ್ಯ, ರಾಷ್ಟ್ರ, ಜಿಲ್ಲೆಯ ಎಲ್ಲ ನಾಯಕರು ಬಿಜೆಪಿ ಆಡಳಿತ ವೈಖರಿ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts