More

    ವಾಹನ ಸಂಚಾರ ತಡೆದು ಪ್ರತಿಭಟನೆ

    ಮುಂಡಗೋಡ: ಶಾಲಾ ಕಾಲೇಜುಗಳಿಗೆ ಹೋಗಿ ಬರಲು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಹಾಗೂ ಪಾಲಕರು ತಾಲೂಕಿನ ಬಾಚಣಕಿ ಗ್ರಾಮದ ಬಳಿ ಶಿರಸಿ ಹುಬ್ಬಳ್ಳಿ ಹೆದ್ದಾರಿ ಸಂಚಾರ ತಡೆ ನಡೆಸಿ ಗುರುವಾರ ಪ್ರತಿಭಟಿಸಿದರು.
    ತಾಲೂಕಿನ ಬಾಚಣಕಿ ಭಾಗದ ಬಾಚಣಕಿ, ಮಜ್ಜಿಗೇರಿ, ಅರಶಿಣಗೇರಿ, ಜೇನಮುರಿ ಹೀಗೆ ವಿವಿಧ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಪ್ರತಿದಿನ ಮುಂಡಗೋಡ ಶಾಲಾ ಕಾಲೇಜುಗಳಿಗೆ ಹೋಗಿ ಬರುತ್ತಾರೆ ಆದರೆ ಸಮಯಕ್ಕೆ ಸರಿಯಾಗಿ ಬಸ್ ಬಾರದ ಕಾರಣ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಿ ಬರಲು ತೊಂದರೆಯಾಗುತ್ತಿದೆ.
    ಈ ಬಗ್ಗೆ ಪಾಲಕರು ಹಲವಾರು ಬಾರಿ ಸಾರಿಗೆ ಸಂಸ್ಥೆಯವರಿಗೆ ಮೌಖಿಕ ಹಾಗೂ ಲಿಖಿತವಾಗಿ ತಿಳಿಸಿದರೂ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿ ಒಂದು ತಾಸಿಗೂ ಅಧಿಕ ಸಮಯ ಬಾಚಣಕಿ ಕ್ರಾಸ್ ಬಳಿ ಶಿರಸಿ ಹುಬ್ಬಳ್ಳಿ ರಾಜ್ಯ ಹೆದ್ದಾರಿಯಲ್ಲಿ ನಿಂತು ವಾಹನಗಳ ಸಂಚಾರ ತಡೆ ನಡೆಸಿದರು.
    ನಂತರ ಪೊಲೀಸ್ ಇನ್ಸ್​ಪೆಕ್ಟರ್ ಸಿದ್ದಪ್ಪ ಸಿಮಾನಿ ಹಾಗೂ ಬಸ್ ನಿಲ್ದಾಣಾಧಿಕಾರಿ ಎಂ.ಆರ್.ಮಾದರ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರೊಂದಿಗೆ ಚರ್ಚೆ ನಡೆಸಿದರು. ನಿಲ್ದಾಣಾಧಿಕಾರಿ ಎಂ.ಆರ್.ಮಾದರ ಮಾತನಾಡಿ, ಸದ್ಯದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
    ಪರದಾಡಿದ ಪ್ರಯಾಣಿಕರು: ಹುಬ್ಬಳ್ಳಿ ಶಿರಸಿ ಮಧ್ಯ ಹೆಚ್ಚಿನ ಸಂಖ್ಯೆಗಳಲ್ಲಿ ವಾಹನಗಳ ಸಂಚಾರ ನಡೆಯುತ್ತದೆ ಆದರೆ ಬಸ್​ಗಾಗಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯಿಂದ ನೂರಾರು ವಾಹನಗಳು ಸಾಲಾಗಿ ನಿಲ್ಲುವಂತಾಯಿತು. ಇದರಿಮದ ದೂರದೂರಿಗೆ ತೆರಳುವ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts