More

    ವಾಸ್ತವ ಒಪ್ಪಿಕೊಳ್ಳಲಾಗದ ಅಕ್ಷರ ದ್ವೇಷಿಗಳು ಹೆಚ್ಚಳ: ಡಾ. ಬಿ.ಎಲ್.ಶಂಕರ್ ಆತಂಕ

    ತೀರ್ಥಹಳ್ಳಿ: ವಾಸ್ತವ ಒಪ್ಪಿಕೊಳ್ಳಲಾಗದ ಅಕ್ಷರ ದ್ವೇಷಿಗಳು ಹೆಚ್ಚಾಗುತ್ತಿರುವ ಸನ್ನಿವೇಶ ದೇಶದಲ್ಲಿ ನಿರ್ಮಾಣವಾಗಿದ್ದು ಲೇಖನಿ ಹಿಡಿದವರನ್ನು ಭಯೋತ್ಪಾದಕರಂತೆ ಕಾಣುವ ಸ್ಥಿತಿ ಎದುರಾಗಿದೆ ಎಂದು ಕುವೆಂಪು ಪ್ರತಿಷ್ಠಾನದ ಪ್ರಭಾರ ಅಧ್ಯಕ್ಷರೂ ಆಗಿರುವ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ. ಬಿ.ಎಲ್.ಶಂಕರ್ ಹೇಳಿದರು.
    ಕಡಿದಾಳು ಗ್ರಾಮದಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಹೊರ ತಂದಿರುವ ಕಟ್ಟುವ ಹಾದಿಯಲ್ಲಿ ಕೃತಿಯ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಚರಿತ್ರೆಯನ್ನೇ ತಿರುಚುತ್ತಿರುವ ಈ ಕಾಲಘಟ್ಟದಲ್ಲಿ ಇತಿಹಾಸದ ಭಾಗವಾಗಿ ಕುವೆಂಪು ಪ್ರತಿಷ್ಠಾನವನ್ನು ಶಾಶ್ವತಗೊಳಿಸುವಂತೆ ಲೇಖಕ ಕಡಿದಾಳು ಪ್ರಕಾಶ್ ರಚಿಸಿರುವ ಕಟ್ಟುವ ಹಾದಿಯಲ್ಲಿ ಕೃತಿ ಮುಂದಿನ ತಲೆಮಾರಿಗೆ ದಾಖಲೆಯಾಗಿ ಉಳಿಯಲಿದೆ ಎಂದರು.
    ಕುವೆಂಪು ಅವರನ್ನು ಒಪ್ಪಿಕೊಳ್ಳದ ದೊಡ್ಡ ಸಮೂಹವೇ ಇದೆ. ಮುಂದೆ ಈ ಪ್ರತಿಷ್ಠಾನದ ಇತಿಹಾಸವನ್ನೇ ತಿರುಚುವ ಸಾಧ್ಯತೆಯನ್ನೂ ಅಲ್ಲಗೆಳೆಯಲಾಗದು. ಕುವೆಂಪು ಪ್ರತಿಷ್ಠಾನ ಆರಂಭಗೊಂಡ ದಿನದಿಂದ ಪ್ರತಿಷ್ಠಾನದ ಸಮ ಕಾರ್ಯದರ್ಶಿ ಆಗಿ ಇದರ ಬೆಳವಣಿಗೆಯ ಭಾಗವಾಗಿರುವ ಕಡಿದಾಳು ಪ್ರಕಾಶ್‌ಗೆ ಪ್ರತಿಷ್ಠಾನದ ಪೂರ್ಣ ಅರಿವಿದೆ. ಅವರು ರಚಿಸಿರುವ ಈ ಕೃತಿ ಮುಂದಿನ ತಲೆಮಾರಿಗೆ ಶಾಶ್ವತ ದಾಖಲೆಯಾಗಿ ಉಳಿಯಲಿದೆ ಎಂದರು.
    ಪಠ್ಯಪುಸ್ತಕ ಮರುರಚನೆಯ ನಂತರದ ಬೆಳವಣಿಗೆ ಆತಂಕಕಾರಿಯಾಗಿದ್ದು, ಕುವೆಂಪು ಅವರ ಕವನಗಳನ್ನು ಪಠ್ಯದಿಂದ ತೆಗೆದುಹಾಕಲಾಗಿದೆ. ಅಪ್ಪಿತಪ್ಪಿಯೂ ಜಗದ ಕವಿಯ ಹೆಸರು ಹೇಳದ ಉದಾಹರಣೆಯೂ ಇದೆ. ಈ ಬೆಳವಣಿಗೆಯಿಂದಾಗಿಯೇ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾಗಿದ್ದ ಪ್ರೊ. ಹಂಪನಾ ಸೇರಿದಂತೆ ಕುವೆಂಪುವನ್ನು ಅನುಸರಿಸುತ್ತಿದ್ದ ಹಲವು ಮಂದಿ ತಾವುಗಳು ನಿರ್ವಹಿಸುತ್ತಿದ್ದ ತಮ್ಮ ಸ್ಥಾನಗಳನ್ನು ತ್ಯಜಿಸಿದ್ದಾರೆ. ಈ ಸಂದರ್ಭದಲ್ಲಿ ನಿಷ್ಠುರ ನಿಲುವಿನ ಲಂಕೇಶ್, ಯು.ಆರ್.ಅನಂತಮೂರ್ತಿ, ನಂಜುಂಡಸ್ವಾಮಿ, ತೇಜಸ್ವಿ, ರಾಮದಾಸ್ ಅವರಂತಹವರು ಇರಬೇಕಿತ್ತು ಎಂದೆನಿಸುತ್ತಿದೆ ಎಂದು ಹೇಳಿದರು.
    ವಿಮರ್ಶಕ ಡಾ. ನಾಗಭೂಷಣಸ್ವಾಮಿ ಕೃತಿ ಬಿಡುಗಡೆಗೊಳಿಸಿದರು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts