More

    ವಾರಾಂತ್ಯದಲ್ಲೇ ಕರೊನಾ ಉಲ್ಬಣ!, ನಾಲ್ಕೇ ಗಂಟೆಯಲ್ಲಿ ಜನಜಂಗುಳಿ ಭಾನುವಾರ ಬಂದ್ರೆ ಮಾರುಕಟ್ಟೆಗಳು ಭರ್ತಿ

    ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
    ಕರೊನಾ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್‌ಡೌನ್ ಮುಂದುವರಿಸುತ್ತಿರುವುದು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗುತ್ತಿದೆಯೇ? ವಾರಾಂತ್ಯದಲ್ಲಿ ಜಿಲ್ಲೆಯ ನಗರ ಹಾಗೂ ಪಟ್ಟಣ ಪ್ರದೇಶಗಳ ಮಾರುಕಟ್ಟೆಗಳಲ್ಲಿ ಜಮಾವಣೆಯಾಗುತ್ತಿರುವ ಜನಸಾಗರವೇ ಇದಕ್ಕೆ ಸಾಕ್ಷಿಯಾಗಿದೆ.

    ಇಂದು ಬಿಟ್ಟರೆ ಮುಂದೆ ಯಾವತ್ತೂ ಸಿಗುವುದಿಲ್ಲವೇನೋ ಎಂಬಂತೆ ಕೋಳಿ, ಮಾಂಸದ ಅಂಗಡಿ, ಮಾರುಕಟ್ಟೆಗಳಲ್ಲಿ ಜನಸಂದಣಿ ಏರ್ಪಡುತ್ತಿದೆ. ಅರೆಬರೆ ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವ ನಿಯಮ ಗಾಳಿಗೆ ತೂರಿ ಜಾತ್ರೆಗೆ ಸೇರುವಂತೆ ಜನ ಜಮಾಯಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ತರಕಾರಿ, ಹಣ್ಣು ಮಾರುಕಟ್ಟೆಗಳಲ್ಲೂ ಇದೆ ಪರಿಸ್ಥಿತಿ ಪುನರಾವರ್ತನೆಯಾಗುತ್ತಿದೆ.

    ಒಂದೇ ಬಾರಿ ರಸ್ತೆಗಿಳಿಯುವ ವಾಹನಗಳು: ಒಂದೇ ಬಾರಿ ಅದೆಷ್ಟೋ ವಾಹನಗಳು ರಸ್ತೆಗಿಳಿಯುತ್ತಿದ್ದು ಎಲ್ಲೆಂದರಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ. ರಸ್ತೆಗಳ ಎರಡೂ ಬದಿಯಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಕಂಡು ಬರುತ್ತಿದ್ದು, ಇತರ ಸರಕು ಸಾಗಣೆ ವಾಹನಗಳ ಸಂಚಾರಕ್ಕೂ ತೊಂದರೆಯಾಗುತ್ತಿದೆ.

    ಅಗತ್ಯ ವಸ್ತುಗಳ ಖರೀದಿಗೆ ಸರ್ಕಾರ ಅವಕಾಶ ಕೊಟ್ಟಿರುವ ನಾಲ್ಕೇ ಗಂಟೆಗಳಲ್ಲಿ ವಾರಕ್ಕಾಗುವಷ್ಟು ಕರೊನಾ ಹರಡಿಸಲಾಗುತ್ತಿದೆ. ರೋಗಲಕ್ಷಣವಿಲ್ಲದ ಸೋಂಕಿತರು, ಹೋಂ ಐಸೋಲೇಷನ್ ನಲ್ಲಿರುವ ಸೋಂಕಿತರು ಈ ಜನಜಂಗುಳಿಯಲ್ಲಿ ಜಮಾವಣೆಯಾಗುತ್ತಿದ್ದು, ಕರೊನಾ ಉಲ್ಬಣಕ್ಕೆ ಕಾರಣವಾಗುತ್ತಿದ್ದಾರೆ. ಇದು ಪ್ರತಿ ವಾರಾಂತ್ಯದಲ್ಲಿ ಕಂಡುಬರುವ ದೃಶ್ಯವಾಗಿದೆ. ಇದೇ ಪುನರಾವರ್ತನೆಯಾದರೆ ಎಷ್ಟೇ ದಿನ ಲಾಕ್‌ಡೌನ್ ಮುಂದುವರಿಸಿದರೂ ಕರೊನಾ ಕಂಟ್ರೋಲಿಗೆ ಬರುವುದು ಅನುಮಾನ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

    ಪೊಲೀಸರ ಸುಳಿವಿಲ್ಲ: ಮುಖ್ಯ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿಕೊಂಡು ತಪಾಸಣೆ ನಡೆಸಿ ವಾಹನ ಜಪ್ತಿ ಮಾಡುವುದರಲ್ಲೇ ಬಿಜಿಯಾಗಿರುವ ಪೊಲೀಸರು ಇಂಥ ಜಾಗಗಳತ್ತ ಸುಳಿಯುತ್ತಿಲ್ಲ. 10 ಗಂಟೆ ಬಳಿಕವಷ್ಟೇ ಪೊಲೀಸರು ಕಾಣಿಸಿಕೊಂಡು ಜನರನ್ನು ಚದುರಿಸುವಷ್ಟರಲ್ಲೇ ಗಂಟೆ 12 ದಾಟಿರುತ್ತದೆ. ಹಳ್ಳಿಗಳಿಂದ ಜನ ಮುಂಜಾನೆಯೇ ನಗರ ಪ್ರದೇಶಗಳತ್ತ ಧಾವಿಸುತ್ತಾರೆ. ಇಲ್ಲಿನ ಕರೊನಾ ಅಂಟಿಸಿಕೊಂಡು ಹಳ್ಳಿಗಳಿಗೂ ಹರಡಿಸುತ್ತಿದ್ದಾರೆ. ಗ್ರಾಮಗಳಲ್ಲಿ ಕರೊನಾ ಉಲ್ಬಣಕ್ಕೆ ಇದೇ ಪ್ರಮುಖ ಕಾರಣವಾಗುತ್ತಿದೆಯೇ ಎಂಬ ಅನುಮಾನ ಮೂಡಿಸುತ್ತಿದೆ. ಒಂದೆಡೆ ಜಿಲ್ಲಾಡಳಿತ ಮೊಬೈಲ್ ಕ್ಲಿನಿಕ್ ಮೂಲಕ ಹಳ್ಳಿ ಹಳ್ಳಿಗೆ ತೆರಳಿ ಸೋಂಕಿತರನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುವತ್ತ ಹೆಚ್ಚಿನ ನಿಗಾವಹಿಸುತ್ತಿದೆ. ಆದರೆ ವಾರಾಂತ್ಯದ ದಿನಗಳಲ್ಲಿ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಏರ್ಪಡುತ್ತಿರುವ ಇಂಥ ಅವ್ಯವಸ್ಥೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದು ಒಂದೆರಡು ದಿನದ ಪರಿಸ್ಥಿತಿಯಾಗಿಲ್ಲ, ಪ್ರತಿ ಶನಿವಾರ ಹಾಗೂ ಭಾನುವಾರಗಳಲ್ಲಿ ಇದೇ ದೃಶ್ಯ ಸಾಮಾನ್ಯವಾಗಿದೆ.

    ಜಿಲ್ಲೆಯಲ್ಲಿ ಕರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಏನೆಲ್ಲ ಮಾಡಲು ಸಾಧ್ಯವಿದೆಯೋ ಅದನ್ನೆಲ್ಲ ಮಾಡಲಾಗುತ್ತಿದೆ. ಸಾರ್ವಜನಿಕರು ಸಹಕರಿಸದಿದ್ದರೆ ಜಿಲ್ಲಾಡಳಿತ ಪ್ರಯತ್ನಕ್ಕೆ ಯಶ ಸಿಗುವುದಿಲ್ಲ. ವಾರಾಂತ್ಯದ ದಿನಗಳಲ್ಲಿ ಇಂಥ ಪರಿಸ್ಥಿತಿ ನಿರ್ಮಾಣವಾಗದ ಹಾಗೆ ಕ್ರಮಕೈಗೊಳ್ಳಲಾಗುವುದು.
    ಕೆ.ಶ್ರೀನಿವಾಸ್, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts