More

    ವಾರದಲ್ಲಿ 425 ಆಕ್ಸಿಜನ್ ಬೆಡ್ ತಯಾರಿ

    ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ 2000 ಆಕ್ಸಿಜನ್ ಬೆಡ್ ಹೊರತುಪಡಿಸಿ, ಧಾರವಾಡ ಹಾಗೂ ಕಿಮ್್ಸ ಆವರಣದಲ್ಲಿನ ನೂತನವಾಗಿ ನಿರ್ವಿುಸಲಾಗುತ್ತಿರುವ ತಾಯಿ-ಮಕ್ಕಳ ಆರೋಗ್ಯ ಕೇಂದ್ರದಲ್ಲಿ 425 ಹೆಚ್ಚುವರಿ ಆಮ್ಲಜನಕ ಪೂರೈಕೆ ವ್ಯವಸ್ಥೆ ಸಹಿತ ಬೆಡ್ ತಯಾರಿಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

    ಇಲ್ಲಿಯ ಕಿಮ್್ಸ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ತಾಯಿ-ಮಕ್ಕಳ ಆರೋಗ್ಯ ಕೇಂದ್ರಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಭೇಟಿ ನೀಡಿ ಪರಿಶೀಲನೆ ನೆಡೆಸಿದರು.

    ಮೇ 1ರ ಒಳಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿ ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಬೆಡ್ ಸೌಕರ್ಯ ಕಲ್ಪಿಸಲು ಅವಕಾಶ ಮಾಡಿಕೊಡಬೇಕು ಎಂದು ಗುತ್ತಿಗೆದಾರರಿಗೆ ಸಚಿವರು ಸೂಚನೆ ನೀಡಿದರು.

    20 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಲಾಗುತ್ತಿರುವ ತಾಯಿ ಹಾಗೂ ಮಕ್ಕಳ ಆರೋಗ್ಯ ಕೇಂದ್ರದ ಬೇಸ್​ವೆುಂಟ್, ನೆಲ ಹಾಗೂ ಮೊದಲನೆ ಮಹಡಿಯಲ್ಲಿ ಈಗಾಗಲೇ ಕೋಳವೆ ಮೂಲಕ ಆಮ್ಲಜನಕ ಸರಬರಾಜು ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಅಗ್ನಿಶಾಮಕ ತುರ್ತವ್ಯವಸ್ಥೆ, ವಿದ್ಯುತ್, ನೀರು ಹಾಗೂ ಒಳಚಂರಡಿ ಸಂಪರ್ಕವನ್ನು ಕಲ್ಪಿಸಿ ತಾತ್ಕಾಲಿಕವಾಗಿ ಕೋವಿಡ್ ರೋಗಿಗಳಿಗಾಗಿ ಆಸ್ಪತ್ರೆಯನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

    ಸಚಿವರ ಮೆಚ್ಚುಗೆ: ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವರು, ನ್ಯಾಷನಲ್ ಅರ್ಬನ್ ಹೆಲ್ತ್ ಸ್ಕೀಮ್ ಅಡಿಯಲ್ಲಿ 2017ರಲ್ಲಿ ಭಾರತ ಸರ್ಕಾರದ 20 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳ್ಳಿ ಕಿಮ್ಸ್ ಆವರಣ ಹಾಗೂ 26 ಕೋಟಿ ರೂ. ವೆಚ್ಚದಲ್ಲಿ ಧಾರವಾಡದಲ್ಲಿ ತಾಯಿ ಮತ್ತು ಮಗು ಆರೈಕೆ ಆಸ್ಪತ್ರೆ ನಿರ್ವಿುಸಲು ಅನುದಾನ ಬಿಡುಗಡೆಯಾಗಿದೆ. ಆರೋಗ್ಯ ಇಲಾಖೆ ಇಂಜಿನಿಯರಿಂಗ್ ವಿಭಾಗದಿಂದ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಧಾರವಾಡ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡು, ತಾತ್ಕಾಲಿಕವಾಗಿ ಕೋವಿಡ್ ಆಸ್ಪತ್ರೆಗಳನ್ನು ಸ್ಥಾಪಿಸಲು ಅಗತ್ಯ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಡಳಿತದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಆಯುಷ್ಮಾನ್ ಭಾರತ ಯೋಜನೆಯಡಿ ಖಾಸಗಿ ಆಸ್ಪತ್ರೆಗಳು ಶೇ. 50ರಷ್ಟು ಹಾಸಿಗೆಗಳು ಮೀಸಲಿಡಬೇಕೆಂದು ಸೂಚಿಸಲಾಗಿದೆ. ಈ ಕುರಿತು ಖಾಸಗಿ ಆಸ್ಪತ್ರೆಗಳೊಂದಿಗೆ ಸಭೆ ನಡೆಸಲಾಗುವುದು.

    ಕರೊನಾ ಸೇನಾನಿಗಳು, ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟವರು ಹಾಗೂ 45 ವರ್ಷದ ಮೇಲ್ಪಟ್ಟ ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವವರಿಗೆ ಕೇಂದ್ರ ಸರ್ಕಾರ ಉಚಿತವಾಗಿ ಕೋವಿಡ್ ಲಸಿಕೆ ನೀಡಿದೆ. ಉಳಿದ ಕೋವಿಡ್ ಲಸಿಕಾ ಅಭಿಯಾನವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಹಭಾಗಿತ್ವದಲ್ಲಿ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ. ಅನುಕೂಲತೆ ಇರುವವರು ಹಣ ಪಾವತಿಸಿ ಲಸಿಕೆಗೆ ಪಡೆದುಕೊಳ್ಳುವುದರಲ್ಲಿ ತಪ್ಪಿಲ್ಲ ಎಂದರು.

    ಜಿಲ್ಲಾಧಿಕಾರಿ ನಿತೇಶ ಪಾಟೀಲ, ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ, ಇತರರು ಇದ್ದರು.

    ಕೈಮುಗಿದು ಕೇಳಿಕೊಳ್ಳುತ್ತೇನೆ

    ‘ದೇಶದ ಹಾಗೂ ರಾಜ್ಯದ ಜನರಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಜನರು ಪ್ರಾಣ ರಕ್ಷಣೆಗೆ ಒತ್ತು ಕೊಡಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿನಂತಿಸಿದರು.

    ‘ಎರಡು ತಿಂಗಳು ಕೇಂದ್ರ ಸರ್ಕಾರದಿಂದ ಅರ್ಹರಿಗೆ ನೇರವಾಗಿ ಆಹಾರ ಧಾನ್ಯ ವಿತರಿಸಲಾಗುವುದು. ರೂಪಾಂತರ ವೈರಸ್ ಅನಿರೀಕ್ಷಿತ ವೇಗದಲ್ಲಿ ಹಬ್ಬುತ್ತಿದೆ. ವೈಯಕ್ತಿಕವಾಗಿ ಹತ್ತಿರದವರ ಮದುವೆ ಸಮಾರಂಭಗಳಿಂದ ದೂರವಿದ್ದೇನೆ. ಜನರು ಸಹ ಸ್ವಯಂ ಲಾಕ್​ಡೌನ್, ನಿರ್ಬಂಧ ಹೇರಿಕೊಳ್ಳಬೇಕು’ ಎಂದು ಕೋರಿದರು.

    ಮದ್ಯ ಅಗತ್ಯ ವಸ್ತುವಿನಲ್ಲಿ ಬಂದಿದ್ದು ಗೊತ್ತಿಲ್ಲ

    ಹುಬ್ಬಳ್ಳಿ: ಕರೊನಾ ಸೋಂಕು ಹರಡುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ನಾಳೆಯಿಂದ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಆದರೆ, ಅಗತ್ಯ ವಸ್ತುಗಳ ಜತೆ ಮದ್ಯವನ್ನೂ ಸೇರಿಸಿರುವುದು ಏಕೆಂದು ಗೊತ್ತಿಲ್ಲ, ಇದನ್ನು ನಿಯಮಾವಳಿ ಮಾಡಿದವರನ್ನೇ ಕೇಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

    ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಶ್ನೆಗಳಿಗೆ ಉತ್ತರಿಸಿ, ನಾಳೆಯಿಂದ ರಾಜ್ಯದಲ್ಲಿ ಅಘೋಷಿತ ಲಾಕ್​ಡೌನ್ ಘೋಷಣೆಯಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 10 ಗಂಟೆವರೆಗೆ ಅವಕಾಶ ನೀಡಲಾಗಿದೆ. ಅಷ್ಟರಲ್ಲಿ ಮದ್ಯವನ್ನೂ ಖರೀದಿ ಮಾಡಲು ಸರ್ಕಾರ ಅವಕಾಶ ನೀಡಿದೆ. ಅಂದರೆ ಪಾರ್ಸೆಲ್ ತೆಗೆದುಕೊಂಡು ಹೋಗಬಹುದಾಗಿದೆ. ಯಾಕೆ ಮದ್ಯಕ್ಕೆ ಅವಕಾಶ ಕೊಟ್ಟಿದ್ದಾರೆ ಎಂಬುದು ನನಗಂತೂ ಗೊತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.

    ಬೆಂಗಳೂರಲ್ಲಿ ಬಹು ವೇಗವಾಗಿ ಕರೊನಾ ಹರಡುತ್ತಿದೆ. ಹಾಗಾಗಿ ರಾಜ್ಯ ಸರ್ಕಾರಕ್ಕೆ ಲಾಕ್​ಡೌನ್ ಮಾಡುವುದು ಅಗತ್ಯ ಎನಿಸಿರಬೇಕು. ತಜ್ಞರು ಕೊಟ್ಟ ವರದಿ ಅವರ ಮುಂದಿರಬಹುದು. ನಾನು ವರದಿಯನ್ನು ನೋಡಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಎಲ್ಲ ಜಿಲ್ಲೆಗಳಿಗೂ ಕಠಿಣ ಕ್ರಮಗಳು ಬೇಕಾಗಿವೆ. ಇದರಿಂದ ಕರೊನಾ ನಿಯಂತ್ರಣಕ್ಕೆ ಬರಬಹುದು. ಒಂದು ವಾರ ಪರಿಶೀಲನೆ ಮಾಡಿ ನೋಡೋಣ ಎಂದು ಆಶಾಭಾವ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts