More

    ವಾಮಾಚಾರಕ್ಕೆ ಬೆಚ್ಚಿ ಬೀಳುವ ಜನ!

    ರೋಣ: ಇಂದಿನ ವೈಜ್ಞಾನಿಕ ಯುಗದಲ್ಲೂ ವಾಮಾಚಾರ ಎಂದರೆ ಜನರು ಬೆಚ್ಚಿಬೀಳುತ್ತ ತೀವ್ರ ಆತಂಕಕ್ಕೊಳಗಾಗುತ್ತಿದ್ದಾರೆ. ತಾಲೂಕಿನ ರೋಣ-ನರಗುಂದ ಮಾರ್ಗವಾಗಿ ಹುಬ್ಬಳ್ಳಿಗೆ ಹೋಗುವ ಬಾಚಲಾಪುರ ರಸ್ತೆಯ ವೃತ್ತ ಸೇರಿದಂತೆ ವಿವಿಧ ಸರ್ಕಲ್​ನಲ್ಲಿ ಮೇಲಿಂದ ಮೇಲೆ ವಾಮಾಚಾರ ನಡೆಯುತ್ತಿದೆ. ಈ ಮಾರ್ಗವಾಗಿ ರಾತ್ರಿ ವೇಳೆ ಸಂಚರಿಸುವವರು ಭಯದಲ್ಲೇ ತೆರಳುವಂತಹ ಪರಿಸ್ಥಿತಿ ನಿರ್ವಣವಾಗಿದೆ.

    ತಾಲೂಕಿನ ಬಾಚಲಾಪುರ ಗ್ರಾಮದಲ್ಲಿ 1000 ಮನೆಗಳಿದ್ದು, 5000 ಜನಸಂಖ್ಯೆ ಇದೆ. ಗ್ರಾಮದ ಸುತ್ತ ಮೂರು ರಸ್ತೆಗಳು ಕೂಡುವ ಅನೇಕ ಸ್ಥಳಗಳಿವೆ. ಅಲ್ಲಿ ನಿರಂತರವಾಗಿ ವಾಮಾಚಾರ ನಡೆಯುತ್ತಿದೆ. ಗುರುವಾರ ರಾತ್ರಿ ಮಾಡಿರುವ ವಾಮಾಚಾರದಲ್ಲಿ ಸೂಜಿ, ಗೊಂಬೆ, ಲಿಂಬೆ ಹಣ್ಣು, ಕೆಂಪು ವಸ್ತ್ರ, ಅರಿಶಿಣ, ಕುಂಕುಮ ಹಾಕಿ ರಂಗೋಲಿ ಬಿಡಿಸಿ ಹಣ್ಣು-ಹಂಪಲು ಇಟ್ಟು ಪೂಜೆ ಮಾಡಲಾಗಿದೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ಶಾಲೆ ಮಕ್ಕಳು, ಸಾರ್ವಜನಿಕರು ಹಾಗೂ ವಾಹನ ಸವಾರರು ಆತಂಕದಲ್ಲೇ ಸಾಗಬೇಕಾದ ಸ್ಥಿತಿ ಸೃಷ್ಟಿಯಾಗಿದೆ.

    ಕಳೆದ ಎಳ್ಳ ಅಮಾವಾಸ್ಯೆ ದಿನ ಇದೇ ಸ್ಥಳದಲ್ಲಿ ಮಣ್ಣಿನ ಗೊಂಬೆ ಮಾಡಿ ಅದಕ್ಕೆ ಸೂಜಿ ಚುಚ್ಚಿ, ಅರಿಶಿಣ, ಕುಂಕುಮ ಚೆಲ್ಲಿ, ಲಿಂಬೆ ಹಣ್ಣುಗಳ ಹಾರ ಮಾಡಿ ಹಾಕಲಾಗಿತ್ತು. ಮಧ್ಯರಾತ್ರಿಯಲ್ಲಿಯೇ ಇಂಥ ವಾಮಾಚಾರಗಳು ಎಗ್ಗಿಲ್ಲದೆ ನಡೆಯುತ್ತಿವೆ. ಬೆಳಗಾದೊಡನೆ ಕೃಷಿ ಕಾಯಕಕ್ಕೆ ತೆರಳುವ ರೈತರು, ಕೂಲಿಕಾರರು, ಶಾಲೆ-ಕಾಲೇಜ್ ವಿದ್ಯಾರ್ಥಿಗಳು, ದಿನನಿತ್ಯದ ಕೆಲಸಗಳಿಗಾಗಿ ತೆರಳುವ ಜನರು ಹೆದರಿ ಆಸ್ಪತ್ರೆಗೆ ದಾಖಲಾದ ನಿದರ್ಶನಗಳಿವೆ ಎನ್ನುತ್ತಾರೆ ಸ್ಥಳೀಯರು.

    ವಾಮಾಚಾರ ಮಾಡಿದರೆ ಏನು ಸಿಗುತ್ತದೆಯೋ ಗೊತ್ತಿಲ್ಲ. ಇದಕ್ಕೆಲ್ಲ ಯಾವಾಗ ಕಡಿವಾಣ ಬೀಳುತ್ತದೆಯೋ ತಿಳಿಯದಂತಾಗಿದೆ. ಗ್ರಾಮದ ಸುತ್ತಲೂ ಮೂರು ರಸ್ತೆಗಳು ಕೂಡಿರುವುದರಿಂದ ಇಲ್ಲಿ ಪ್ರತಿ ಅಮಾವಾಸ್ಯೆ, ಹುಣ್ಣಿಮೆ ಮತ್ತಿತರ ದಿನಗಳಲ್ಲಿ ಈ ಲಿಂಬೆ ಹಣ್ಣು, ಕೋಳಿ ಬಲಿಯಂತಹ ವಾಮಾಚಾರಗಳು ನಿರಂತರವಾಗಿ ನಡೆಯುತ್ತವೆ.

    | ಹನಮಂತ ಪೂಜಾರ ಗ್ರಾಮಸ್ಥ, ಬಾಚಲಾಪುರ

    ವಾಮಾಚಾರ ಅತಿ ಪುರಾತನ ವಿದ್ಯೆಗಳಲ್ಲೊಂದು. ಕ್ಷುದ್ರಶಕ್ತಿಗಳನ್ನು ಆಹ್ವಾನಿಸಿ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಬಹುದೆಂದು ಹೇಳುವ ಕಲೆಯಿದಾಗಿದೆ. ವೇದಗಳ ಪೈಕಿ ಅಥರ್ವಣ ವೇದದಲ್ಲಿ ವಾಮಾಚಾರ ಕುರಿತಂತೆ ಆಳವಾಗಿ ವಿವರಿಸಲಾಗಿದೆ. ವಶೀಕರಣ, ಕಣ್ಕಟ್ಟು ವಿದ್ಯೆ, ಮಾಟ ವಿದ್ಯೆ ಮತ್ತು ಸಮ್ಮೋಹನಗಳಂತವೂ ಈ ವಾಮಾಚಾರದ ಅಂಗಗಳಾಗಿವೆ. ಮೂರು ದಾರಿ ಕೂಡುವಲ್ಲಿ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಗಳಲ್ಲಿ ಕ್ಷುದ್ರಶಕ್ತಿಗಳನ್ನು ಒಲಿಸಿಕೊಳ್ಳಲು ಈ ದುಮಾರ್ಗವನ್ನು ಕೆಲವು ದುರುಳರು ಬಳಸಿಕೊಳ್ಳುತ್ತಾರೆ. ಇದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತದೆ.

    | ಮೇಘಯ್ಯಶಾಸ್ತ್ರಿ ಹಿರೇಮಠ

    ಕೊತಬಾಳ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts