More

    ವಸ್ತು ಸಂಗ್ರಹಾಲಯ ಕಟ್ಟಡ ನಿರುಪಯುಕ್ತ

    ರಾಜೇಂದ್ರ ಶಿಂಗನಮನೆ ಶಿರಸಿ

    ಪುರಾತತ್ವ ಇಲಾಖೆಯು ಉದ್ದೇಶಿತ ಕೆಲಸಕ್ಕೆ ಬಳಸಿಕೊಳ್ಳದ ಕಾರಣ ತಾಲೂಕಿನ ಬನವಾಸಿಯ ಎರಡು ಬೃಹತ್ ಕಟ್ಟಡಗಳು ಹಾಳು ಸುರಿಯುತ್ತಿವೆ. ಇಲಾಖೆಯ ಈ ನಿರ್ಲಕ್ಷ್ಯಂದ ಇಂದಿಗೂ ಪ್ರಾಚೀನ ಹಾಗೂ ಐತಿಹಾಸಿಕ ಮಹತ್ವವುಳ್ಳ ವಸ್ತುಗಳು ಮಧುಕೇಶ್ವರ ದೇವಾಲಯದ ಆವರಣದಲ್ಲೇ ಉಳಿಯುವಂತಾಗಿವೆ.

    ಐತಿಹಾಸಿಕ ಮತ್ತು ಪ್ರಾಚೀನ ವಸ್ತುಗಳ ಸಂರಕ್ಷಣೆಯ ಹೊಣೆ ಹೊತ್ತ ಪುರಾತತ್ವ ಇಲಾಖೆಯು ಬನವಾಸಿ ಭಾಗದೆಡೆ ಜವಾಬ್ದಾರಿ ಮರೆತ ಕಾರಣ ಪ್ರಾಚೀನ ವಸ್ತುಗಳ ಸಂಗ್ರಹಾಲಯ ಹಾಗೂ ಪ್ರವಾಸಿ ಮಂದಿರ ಕಟ್ಟಡಗಳು ಹಾಳು ಕೊಂಪೆಯಂತಾಗಿವೆ. ಬನವಾಸಿ-ಸೊರಬ ಮಾರ್ಗದಲ್ಲಿರುವ ಈ ಕಟ್ಟಡಗಳು ಈಗ ಬನವಾಸಿಯ ಇತಿಹಾಸದ ಖ್ಯಾತಿಗೆ ಕಪ್ಪು ಚುಕ್ಕೆಯಾಗುತ್ತಿವೆ.

    ಪ್ರಯೋಜನ ಪಡೆಯದ ಇಲಾಖೆ: ಕರ್ನಾಟಕ ಗೆಜೆಟಿಯರ್ ಪ್ರಮುಖ ಕೆ.ಅಭಿಶಂಕರ ಅವರ ವಿಶೇಷ ಪ್ರಯತ್ನದ ಫಲವಾಗಿ ರಾಜ್ಯ ಪ್ರವಾಸೋದ್ಯಮ ಇಲಾಖೆಯು 1984ರಲ್ಲಿ 18 ಲಕ್ಷ ರೂಪಾಯಿ ವೆಚ್ಚದಲ್ಲಿ ಅಧ್ಯಯನ ಕೊಠಡಿ, ವಸತಿ ಮತ್ತು ಉಪಾಹಾರ ಗೃಹ ನಿರ್ಮಾಣ ಮಾಡಿತ್ತು. ಸುಮಾರು ಐದು ಎಕರೆ ಪ್ರದೇಶದಲ್ಲಿ ವಿಶಾಲ ಉದ್ಯಾನ, ರಸ್ತೆ, ಕಟ್ಟಡಗಳು ತಲೆ ಎತ್ತಿ ನಿಂತಿದ್ದವು. ಪ್ರಮುಖ ದ್ವಾರದ ದಿಕ್ಕಿಗೆ ಕಬ್ಬಿಣದ ಬೇಲಿ ಮಾಡಿ ಸೌಂದರ್ಯ ವರ್ಧನೆ ಮಾಡಲಾಗಿತ್ತು. ಆದರೆ, ಸ್ಥಳೀಯವಾಗಿ ಪ್ರವಾಸೋದ್ಯಮ ಇಲಾಖೆ ಕಚೇರಿ ಇಲ್ಲದ ಕಾರಣ ಕಟ್ಟಡವನ್ನು ಬಳಸದೆ ಹಾಗೆಯೇ ಇಡಲಾಗಿತ್ತು. 2000ನೇ ಇಸ್ವಿಯಲ್ಲಿ ಪ್ರಾಚೀನ ವಸ್ತುಗಳ ಸಂರಕ್ಷಣೆಯ ದೃಷ್ಟಿಯಿಂದ ಸಂಗ್ರಹಾಲಯ ಮಾಡುವುದಕ್ಕಾಗಿ ಪ್ರವಾಸಿ ಮಂದಿರದ ಜತೆಗೆ ಮ್ಯೂಸಿಯಂಗೆ ಯೋಗ್ಯವಾದ ಇನ್ನೊಂದು ಕಟ್ಟಡವನ್ನು ಪುರಾತತ್ವ ಇಲಾಖೆಗೆ ಹಸ್ತಾಂತರ ಮಾಡಿತ್ತು. ಆದರೆ, ಪುರಾತತ್ವ ಇಲಾಖೆ ಕೂಡ ಅಂದಿನಿಂದ ಇಲ್ಲಿಯವರೆಗೆ ಉದ್ದೇಶಿತ ವಿಷಯಕ್ಕಾಗಿ ಕಟ್ಟಡವನ್ನು ಬಳಸಿಲ್ಲ. ಈ ಮಧ್ಯೆ ಯಾವ ವಸ್ತುಗಳನ್ನು ಸಂರಕ್ಷಣೆ ಮಾಡಬೇಕಿತ್ತೋ ಅವೆಲ್ಲ ವಸ್ತುಗಳು ಇಂದಿಗೂ ಮಧುಕೇಶ್ವರ ದೇವಾಲಯದ ಆವರಣದಲ್ಲಿ ಬಿದ್ದಿವೆ. ಧಾರವಾಡದಲ್ಲಿ ಮುಖ್ಯ ಕೇಂದ್ರ ಹೊಂದಿರುವ ಪುರಾತತ್ವ ಇಲಾಖೆಯು ಹಸ್ತಾಂತರಿಸಲ್ಪಟ್ಟ ಕಟ್ಟಡ ಅಭಿವೃದ್ಧಿಗೆ ಅಪಾರವಾದ ಹಣವನ್ನು ವ್ಯಯಿಸಿದೆ. ಆದರೂ ವ್ಯವಸ್ಥಿತವಾಗಿ ಕಟ್ಟಡವನ್ನು ಬಳಸಿಕೊಂಡಿಲ್ಲ ಎಂಬುದು ಬನವಾಸಿಗರ ಆಕ್ಷೇಪವಾಗಿದೆ.

    ಅವ್ಯವಸ್ಥೆಯ ಆಗರ: ಕಟ್ಟಡದಿಂದ ಕಟ್ಟಡಗಳಿಗೆ ಸಾಗಲು ಲಕ್ಷ ರೂ. ವೆಚ್ಚ ಮಾಡಿ ಪೇವರ್ಸ್ ಬಳಸಿ ರಸ್ತೆ ನಿರ್ವಿುಸಲಾಗಿದೆ. ಇಲ್ಲಿನ ವಿದ್ಯುತ್ ಕಂಬಗಳು ಕಳ್ಳರ ಪಾಲಾಗಿವೆ. ಅಳಿದುಳಿದ ವಿದ್ಯುತ್ ದೀಪಗಳಿಗೆ ಪುಂಡರ ಕಲ್ಲಾಟ ನಡೆದಿದೆ. ಈ ಅವ್ಯವಸ್ಥೆಯ ನಡುವೆಯೇ 5 ಲಕ್ಷ ರೂ. ಮೊತ್ತದ ಜನರೇಟರ್ ಅಳವಡಿಸಲಾಗಿದೆ. ಪ್ರಮುಖ ಗೇಟಿಗೆ ಬೀಗ ಹಾಕಿದರೂ ಸಂಜೆ ಆಗುತ್ತಿದ್ದಂತೆ ಮದ್ಯ ವ್ಯಸನಿಗಳ, ಜುಗಾರಿಗಳ ಅಡ್ಡಾ ಆಗಿ ಮಾರ್ಪಾಡಾಗುತ್ತದೆ. ಇಂತಹ ಘಟನೆಗಳು ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಮೌನ ವಹಿಸಿದೆ. ತಕ್ಷಣ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಕ್ರಮ ವಹಿಸಬೇಕೆಂದು ಬನವಾಸಿ ಸಾರ್ವಜನಿಕರು ಆಗ್ರಹವಾಗಿದೆ.

    ದೇವಾಲಯದ ಆವಾರದ ಒಂದು ಭಾಗದಲ್ಲಿ ಪ್ರಾಚೀನ ಶಿಲಾಶಾಸನಗಳು, ಮೂರ್ತಿಗಳು ಹಾಗೂ ಇತರ ವಸ್ತುಗಳನ್ನು ಜೋಡಿಸಿಡಲಾಗಿದೆ. ನೆಲ ಹಾಸಿನ ಮೇಲೆಯೇ ಇವೆಲ್ಲ ಇದ್ದು ಧೂಳು ತಿನ್ನುತ್ತಿವೆ. ವಸ್ತು ಸಂಗ್ರಹಾಲಯಕ್ಕಾಗಿ ಧ ಉತ್ತಮ ಕಟ್ಟಡವಿದ್ದರೂ ಈ ವಸ್ತುಗಳ ಸ್ಥಳಾಂತರ ಆಗಿಲ್ಲ. ದಶಕಗಳಿಂದ ಈ ಅವ್ಯವಸ್ಥೆ ಮುಂದುವರಿಯುತ್ತಿದೆ. ತಕ್ಷಣ ಪುರಾತತ್ವ ಇಲಾಖೆಯು ಪ್ರಾಚೀನ ಹಾಗೂ ಐತಿಹಾಸಿಕ ವಸ್ತುಗಳನ್ನು ಮ್ಯೂಸಿಯಂಗೆ ಸ್ಥಳಾಂತರಿಸಬೇಕು. | ಶಿವಾಜಿ ಬನವಾಸಿ ಸ್ಥಳಿಕ

    ಪ್ರವಾಸೋದ್ಯಮ ಇಲಾಖೆ ಯಾವುದೇ ಕಟ್ಟಡದ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ. ಸ್ಥಳೀಯ ಸಂಸ್ಥೆ ಅಥವಾ ಸಂಘಟನೆಗಳಿಗೆ ಹಸ್ತಾಂತರಿಸುತ್ತದೆ. ಬನವಾಸಿಯಲ್ಲಿ ಕಟ್ಟಡ ಇರುವ ಬಗ್ಗೆ ಮಾಹಿತಿ ಇಲ್ಲ. ಪರಿಶೀಲಿಸಲಾಗುವುದು. | ಪುರುಷೋತ್ತಮ ಪ್ರವಾಸೋದ್ಯಮ ಇಲಾಖೆ ಪ್ರಭಾರ ಉಪನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts