More

    ವಸ್ತುಪ್ರದರ್ಶನ ಏರ್ಪಡಿಸಿ ರೈತರಿಗೆ ಮಾಹಿತಿ ನೀಡಿ

    ಕೆ.ಆರ್.ನಗರ: ಚುಂಚನಕಟ್ಟೆಯಲ್ಲಿ ಆರಂಭಗೊಂಡಿರುವ ಜಾನುವಾರು ಜಾತ್ರೆಯಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಆರೋಗ್ಯ ಇಲಾಖೆ ವತಿಯಿಂದ ಸಿಗುವ ಸವಲತ್ತುಗಳು ಮತ್ತು ಸೌಲಭ್ಯಗಳ ವಸ್ತುಪ್ರದರ್ಶನ ಏರ್ಪಡಿಸಿ ರೈತರಿಗೆ ಸಮಗ್ರ ಮಾಹಿತಿ ನೀಡಬೇಕು ಎಂದು ತಾಲೂಕು ಪಂಚಾಯಿತಿ ಪ್ರಭಾರ ಅಧ್ಯಕ್ಷ ಕೆ.ಪಿ.ಯೋಗೀಶ್ ಅಧಿಕಾರಿಗಳಿಗೆ ಸೂಚಿಸಿದರು.

    ತಾಲೂಕಿನ ಚುಂಚನಕಟ್ಟೆಗೆ ಗುರುವಾರ ಅಧಿಕಾರಿಗಳ ಜತೆ ತೆರಳಿ ಜಾನುವಾರು ಜಾತ್ರೆಗೆ ತಾಲೂಕು ಆಡಳಿತದಿಂದ ಕಲ್ಪಿಸಿರುವ ಸೌಲಭ್ಯಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಜಾತ್ರೆ ಮುಗಿಯುವವರೆಗೂ ಅಧಿಕಾರಿ ವರ್ಗದವರು ಹಾಜರಿದ್ದು, ಜಾತ್ರೆಯ ಯಶಸ್ವಿಗೆ ಶ್ರಮಿಸಬೇಕು. ಲೋಪ ಕಂಡು ಬಂದರೆ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದರು.

    ಜಾತ್ರಾ ಮಾಳದಲ್ಲಿರುವ ರಸ್ತೆಗೆ ಧೂಳು ಮೇಲೇಳದಂತೆ ನೀರು ಹಾಕಿಸಬೇಕು. ಜಾನುವಾರುಗಳಿಗೆ ರೋಗರುಜಿನಗಳು ಹರಡದಂತೆ ಸ್ವಚ್ಛತೆಗೆ ಒತ್ತು ನೀಡಬೇಕು. ಜಾತ್ರೆ ಮಾಳದಲ್ಲಿ ಕುಡಿಯುವ ನೀರಿನ ಸೌಲಭ್ಯ ಮತ್ತು ವಿದ್ಯುತ್ ದೀಪದ ವ್ಯವಸ್ಥೆಯನ್ನು ಕಲ್ಪಿಸುವಂತೆ ಕುಪ್ಪೆ ಗ್ರಾಪಂಗೆ ಸೂಚಿಸಲಾಗಿದೆ ಎಂದರು.

    ಜಾನುವಾರು ಜಾತ್ರೆಗೆ ಆಗಮಿಸಿರುವ ರಾಸುಗಳಿಗೆ ರೋಗಗಳು ಕಂಡು ಬಂದರೆ ತಕ್ಷಣವೇ ಚಿಕಿತ್ಸೆ ನೀಡಲು ಪಶು ಚಿಕಿತ್ಸಾ ಕೇಂದ್ರವನ್ನು ಈಗಾಗಲೇ ಚುಂಚನಕಟ್ಟೆಯ ಸಂತೆಯ ಅವರಣದಲ್ಲಿ ಆರಂಭಿಸಲಾಗಿದೆ. ಸೋಮವಾರದಿಂದ ಇಲ್ಲಿನ ನಾಡಕಚೇರಿಯ ಬಳಿ ಜನರಿಗಾಗಿ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ಸಹ ತಾಲೂಕು ಆರೋಗ್ಯ ಇಲಾಖೆ ಆರಂಭಿಸಲಿದೆ ಎಂದು ತಿಳಿಸಿದರು.

    ಜಾತ್ರೆ ವೀಕ್ಷಿಸಲು ವಿವಿಧ ಜಿಲ್ಲೆಗಳಿಂದ ಆಗಮಿಸುವ ರೈತರಿಗಾಗಿ ಕೆ.ಆರ್.ನಗರದಿಂದ ಚುಂಚನಕಟ್ಟೆಗೆ ಜಾತ್ರಾ ವಿಶೇಷ ಬಸ್ ಸೌಲಭ್ಯ ಕಲ್ಪಿಸಲು ಈಗಾಗಲೇ ಕೆ.ಆರ್.ನಗರ ಬಸ್ ಡಿಪೋ ಘಟಕಕ್ಕೆ ತಾಲೂಕು ಆಡಳಿತ ಸೂಚಿಸಿದೆ. ಭದ್ರತೆಯ ಜವಾಬ್ದಾರಿಯನ್ನು ಪೊಲೀಸ್ ವೃತ್ತ ನಿರೀಕ್ಷಕ ಪಿ.ಕೆ.ರಾಜು, ಉಪನಿರೀಕ್ಷಕ ಚೇತನ್ ನೋಡಿಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

    ತಾಲೂಕು ಕೃಷಿ ಸಹಾಯಕ ನಿರ್ದೇಶಕ ಶಶಿಧರ್, ತೋಟಗಾರಿಕೆಯ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರಸನ್ನಕುಮಾರ್, ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಸಹಾಯಕ ಕೆ.ವಿ.ರಮೇಶ್, ಪಿಡಿಒ ಚಂದ್ರಶೇಖರ್, ಪಶು ವೈದ್ಯರಾದ ಡಾ.ಸಂಜಯ್, ಡಾ.ರಾಮು ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts