More

    ವಸತಿ ಯೋಜನೆಗೆ ಅರ್ಧಚಂದ್ರ

    ಕಾರವಾರ: ಸರ್ಕಾರದ ನೆರವಿನಲ್ಲಿ ಮನೆ ಕಟ್ಟುವ ಆಸೆ ಕಂಡಿದ್ದ ಜಿಲ್ಲೆಯ ಬಡ ಜನರ ಕನಸು ನನಸಾಗಿಲ್ಲ. ಕಳೆದ ಕೆಲ ವರ್ಷಗಳಿಂದ ವಿವಿಧ ವಸತಿ ಯೋಜನೆಯಡಿ ಜಿಲ್ಲೆಗೆ ಮಂಜೂರಾದ ಮನೆಗಳ 16 ಕೋಟಿ ರೂಪಾಯಿ ಸಹಾಯಧನ ಬಿಡುಗಡೆ ಬಾಕಿ ಇದೆ ಎಂದು ಜಿಲ್ಲಾ ಪಂಚಾಯಿತಿ ಮಾಹಿತಿ ನೀಡಿದೆ.

    ಪ್ರಧಾನಮಂತ್ರಿ ಆವಾಸ್ ಯೋಜನೆ, ಡಾ.ಬಿ.ಆರ್. ಅಂಬೇಡ್ಕರ್ ಹೌಸಿಂಗ್ ಸ್ಕೀಮ್ ಬಸವ ವಸತಿ ಯೋಜನೆ, ದೇವರಾಜ ಅರಸು ವಸತಿ ಯೋಜನೆ, ಇಂದಿರಾ ಅವಾಸ್ ಹೀಗೆ ವಿವಿಧ ಯೋಜನೆಗಳಡಿ ಬಡವರು, ವಿವಿಧ ಮೀಸಲಾತಿ ವರ್ಗಕ್ಕೆ ಸೇರಿದವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 3 ಲಕ್ಷ ರೂಪಾಯಿಗಳವರೆಗೂ ಸಹಾಯಧನ ದೊರೆಯುತ್ತಿದೆ. ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಅನುದಾನ ಬಿಡುಗಡೆ ಮಾಡಲಾಗುತ್ತದೆ. ತಳಪಾಯ ಮಟ್ಟದಲ್ಲಿ ಒಂದು, ಲಿಂಟಲ್ ಹಂತದಲ್ಲಿ ಒಂದು ಹಾಗೂ ಮನೆ ಪೂರ್ಣವಾದ ಬಳಿಕ ಇನ್ನೊಂದು ಹೀಗೆ ಮೂರು ಕಂತುಗಳಲ್ಲಿ ಸರ್ಕಾರ ಸಹಾಯಧನ ನೀಡುತ್ತದೆ.

    ನೆಲಘಟ್ಟು ಅಥವಾ ಲಿಂಟಲ್ ಹಂತದ ನಿರ್ಮಾಣ ಕಾರ್ಯ ಮುಗಿಸಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿ ಜಿಪಿಎಸ್ ಮಾಡಿದರೂ ಹಣ ಬಿಡುಗಡೆಯಾಗುತ್ತಿಲ್ಲ. ಹಣದ ಕೊರತೆಯಿಂದ ಹಲವರು ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದಾರೆ. 2017-18ರಲ್ಲಿ ಆಯ್ಕೆಯಾದ ಫಲಾನುಭವಿಗಳಿಗೂ ಅನುದಾನ ಬಿಡುಗಡೆ ಇನ್ನೂ ಬಾಕಿ ಇದೆ. ಇತರ ಯೋಜನೆಗಳ ಅನುದಾನವೂ ಸಮರ್ಪಕವಾಗಿ ಬಿಡುಗಡೆಯಾಗಿಲ್ಲ ಎನ್ನುತ್ತಾರೆ ಅಧಿಕಾರಿಗಳು.

    ಈ ಕಾರಣಗಳೂ ಉಂಟು

    ಸರ್ಕಾರದ ಅನುದಾನ ವಿಳಂಬ ಒಂದೆಡೆಯಾದರೆ ಉಸುಕಿನ ಸಮಸ್ಯೆ, ಲಾಕ್​ಡೌನ್​ನಿಂದ ಕಾರ್ವಿುಕರ ಕೊರತೆ, ಇದ್ದಕ್ಕಿದ್ದಂತೆ ಹೆಚ್ಚಿದ ಸಾಮಗ್ರಿ ವೆಚ್ಚ. ಕರೊನಾದಿಂದ ಅನಾರೋಗ್ಯಕ್ಕೊಳಗಾಗಿ ಆರ್ಥಿಕ ಸಂಕಷ್ಟಕ್ಕೊಳಗಾಗಿರುವುದು. ದುಡಿಮೆ ಇಲ್ಲದೆ ಪರಿತಪಿಸುತ್ತಿರುವವರ ಸಂಖ್ಯೆ ಹೆಚ್ಚಿದೆ. ಈ ಕಾರಣಗಳಿಗಾಗಿ ಮನೆ ಕಟ್ಟುವ ಯೋಜನೆಯನ್ನು ಹಲವರು ಕೈಬಿಟ್ಟವರೂ ಇದ್ದಾರೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 2019-20ನೇ ಸಾಲಿನಲ್ಲಿ ಜಿಲ್ಲೆಗೆ 549 ಮನೆಗಳು ಮಂಜೂರಾಗಿದ್ದವು. 463 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಇದುವರೆಗೂ 20 ಮನೆಗಳು ಮಾತ್ರ ಪೂರ್ಣವಾಗಿವೆ. 142 ಮನೆಗಳು ಅಡಿಪಾಯದ ಹಂತದಲ್ಲಿವೆ. 43 ಮನೆಗಳು ಮಾತ್ರ ಲಿಂಟಲ್ ಹಂತಕ್ಕೆ ತಲುಪಿವೆ.

    ವಸತಿ ಯೋಜನೆಗಳಡಿ ಸರ್ಕಾರದಿಂದ ಅನುದಾನ ಬಿಡುಗಡೆಗೆ ಬಾಕಿ ಇರುವ ಬಗ್ಗೆ ಪತ್ರ ಬರೆಯಲಾಗಿದೆ. ಶೀಘ್ರದಲ್ಲಿ ಹಣ ಬಿಡುಗಡೆ ಮಾಡಿಸಲು ಪ್ರಯತ್ನಿಸಲಾಗುವುದು.

    | ಪ್ರಿಯಾಂಗಾ ಎಂ. ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts