More

    ವರ್ಷಾಚರಣೆಗೆ ಖಾಕಿ ಕಾವಲು

    ಕಾರವಾರ/ ಗೋಕರ್ಣ: ಹೊಸ ವರ್ಷಾಚರಣೆಗೆ ಖಾಕಿ ಸರ್ಪಗಾವಲು ತಡೆಯೊಡ್ಡಿದೆ. ಇದರಿಂದ ಕಾರವಾರ ಭಾಗಕ್ಕೆ ಬಂದ ಹೆಚ್ಚಿನ ಪ್ರವಾಸಿಗರು ಹಾಗೂ ಸ್ಥಳೀಯರು ಗೋವಾ ರಾಜ್ಯದತ್ತ ತೆರಳಿದ್ದಾರೆ.

    ಪ್ರತಿ ವರ್ಷ ಕಾರವಾರ, ಗೋಕರ್ಣ, ಮುರ್ಡೆಶ್ವರ ಹಾಗೂ ಇತರ ಕಡಲ ತೀರಗಳಲ್ಲಿ ಸಾವಿರಾರು ಜನ ಸೇರುತ್ತಿದ್ದರು. ಊಟ, ತಿಂಡಿ ಮಾಡಿ, ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿ ಹೊಸ ವರ್ಷ ಸ್ವಾಗತಿಸುತ್ತಿದ್ದರು. ಕಾರವಾರ, ಗೋಕರ್ಣ ಸೇರಿದಂತೆ ವಿವಿಧ ರೆಸಾರ್ಟ್​ಗಳಲ್ಲಿ ಹೊಸ ವರ್ಷ ಸ್ವಾಗತಕ್ಕೆ ವಿಶೇಷ ಪಾರ್ಟಿ ಆಯೋಜನೆ ಮಾಡಲಾಗುತ್ತಿತ್ತು.

    ಈ ಬಾರಿ ಕೋವಿಡ್-19 ಸುರಕ್ಷತಾ ಕಾರಣ ನೀಡಿ ಜಿಲ್ಲೆಯ ಕರಾವಳಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮಧ್ಯಾಹ್ನ 4 ರ ನಂತರ ಟ್ಯಾಗೋರ್ ಕಡಲ ತೀರದಲ್ಲಿ ಡ್ರೋಣ್ ಕ್ಯಾಮರಾ ಬಳಸಿ ಸರ್ವೆಕ್ಷಣೆ ನಡೆಸಲಾಯಿತು. ಕಡಲ ತೀರಕ್ಕೆ ಬಂದ ಹಲವು ಪ್ರವಾಸಿಗರನ್ನು ಹಾಗೂ ಸ್ಥಳೀಯರನ್ನು ಪೊಲೀಸರು ಓಡಿಸಿದರು. ತೀರದ ಪಕ್ಕದಲ್ಲಿದ್ದ ಅಂಗಡಿಗಳನ್ನು ಮುಚ್ಚಿಸಿದರು.

    ಗೋವಾದತ್ತ ವಲಸೆ: ಗೋವಾದಲ್ಲಿ ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧವಿಲ್ಲ. ಇದರಿಂದ ಹೆಚ್ಚಿನ ಜನ ಗೋವಾದತ್ತ ತೆರಳಿದ್ದಾರೆ. ರೆಸಾರ್ಟ್, ಬಾರ್ ರೆಸ್ಟೋರೆಂಟ್​ಗಳು ಸಂಪೂರ್ಣ ಭರ್ತಿಯಾಗಿವೆ. ರ್ಪಾಂಗ್​ಗೂ ಜಾಗವಿಲ್ಲದಂತಾಗಿದೆ. ಕಡಲ ತೀರಗಳಲ್ಲಿ ಜನಜಂಗುಳಿ ನೆರೆದಿದೆ.

    ಎಲ್ಲ ಖಾಲಿ ಖಾಲಿ: 2020ಯ ಕೊನೆಯ ದಿನವಾದ ಗುರುವಾರ ಗೋಕರ್ಣ ಎಲ್ಲ ಕಡೆಗಳಲ್ಲಿ ಪ್ರವಾಸಿಗರು ವಿರಳವಾಗಿದ್ದರು. ನೂತನ ವರ್ಷಾಚರಣೆ ನಿಮಿತ್ತ ಪ್ರವಾಸಿಗರು ಮತ್ತು ವಾಹನಗಳ ಸಂಚಾರದಿಂದ ತುಂಬಿರುತ್ತಿದ್ದ ಇಲ್ಲಿನ ರಥಬೀದಿ, ಮುಖ್ಯ ರಸ್ಥೆಗಳು ಮತ್ತು ಬೀಚ್​ನಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡು ಬಂದರು. ಸಂಜೆಯಾಗುತ್ತಿದ್ದಂತೆ ಬೀಚ್​ಗಳಿಂದ ಜನರನ್ನು ಹೊರ ಹೋಗಲು ಧ್ವನಿ ವರ್ಧಕದ ಮೂಲಕ ಪೊಲೀಸರು ವಿನಂತಿಸಿದರು. ಕೆಲವು ರೆಸಾರ್ಟ್ ಮತ್ತು ಹೋಟೆಲ್​ಗಳಲ್ಲಿ ಬುಕಿಂಗ್ ರದ್ದಾಗಿದೆ ಎನ್ನಲಾಗಿದೆ. ಮೂರು ದಶಕಗಳ ಗೋಕರ್ಣದ ಪ್ರವಾಸೋದ್ಯಮ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವರ್ಷಾಂತ್ಯದ ದಿನ ಹಿಂದಿನ ಜನಜಂಗುಳಿ ಮತ್ತು ವಾಹನಗಳ ಓಡಾಟ ಗದ್ದಲದ ವಾತಾವರಣ ಮಾಯವಾಗಿ ಎಲ್ಲ ಪ್ರಮುಖ ತಾಣಗಳಲ್ಲಿ ಅತ್ಯಂತ ಶಾಂತತೆ ಕಂಡು ಬಂದಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts