More

    ವರ್ಷಧಾರೆಯ ಅಬ್ಬರಕ್ಕೆ ನಲುಗಿದ ಜನ

    ಗದಗ: ಗುರುವಾರ ನಸುಕಿನಜಾವ ಎರಡು ಗಂಟೆಗೂ ಹೆಚ್ಚು ಕಾಲ ಸುರಿದ ಭಾರಿ ಗಾಳಿ ಮತ್ತು ಮಳೆಗೆ ಗದಗ-ಬೆಟಗೇರಿ ಅವಳಿ ನಗರ ಸೇರಿ ಜಿಲ್ಲೆಯಲ್ಲಿ ಅನೇಕ ಮರಗಳು ಧರೆಗುರುಳಿವೆ. ವಿದ್ಯುತ್ ಕಂಬಗಳು ಮುರಿದು ಕೆಲಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

    ಬುಧವಾರ ತಡರಾತ್ರಿಯಿಂದಲೇ ಮಳೆ ಜತೆಗೆ ಗಾಳಿ ಶುರುವಾಯಿತು. ನಸುಕಿನಜಾವ ಮಳೆ-ಗಾಳಿಯ ಆರ್ಭಟ ಜೋರಾಗಿತ್ತು. ಬಲವಾದ ಗಾಳಿ ಬೀಸಿದ್ದರಿಂದ ಅವಳಿ ನಗರದಲ್ಲಿ ಅನೇಕ ಮರಗಳು ನೆಲಕ್ಕೆ ಅಪ್ಪಳಿಸಿದವು. ಗಾಳಿಯ ರಭಸಕ್ಕೆ ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿದ್ದರಿಂದ ತಂತಿಗಳು ಹರಿದು ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಕೆಲವೆಡೆ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದವು. ಹೀಗಾಗಿ ಗುರುವಾರ ಅವಳಿ ನಗರದ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಂಡಿತ್ತು. ಹೆಸ್ಕಾಂ ಅಧಿಕಾರಿಗಳು ಕೂಡಲೇ ದುರಸ್ತಿಗೊಳಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿದರು.

    ಬೆಟಗೇರಿಯ ನೇಕಾರ ಕಾಲನಿಯಲ್ಲಿ ಶಂಕರಪ್ಪ ಎನ್ನುವವರ ಮನೆ ಮೇಲೆ ಮರ ಬಿದ್ದಿದ್ದರಿಂದ ಐದಾರು ಜನರು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ವಿವೇಕಾನಂದ ನಗರ, ರಾಜೀವಗಾಂಧಿ ನಗರದಲ್ಲಿ ಮರಗಳು ಉರುಳಿಬಿದ್ದಿದ್ದು, ಹಲವೆಡೆ ಮರದ ಟೊಂಗೆಗಳು ಮುರಿದು ಬಿದ್ದಿವೆ.

    ಎಸ್.ಎಂ. ಕೃಷ್ಣ ನಗರದಲ್ಲಿ ಕೆಲವು ಮನೆಗಳ ಹೆಂಚು ಹಾರಿಹೋಗಿವೆ. ರೈಲ್ವೆ ಸೇತುವೆ ಬಳಿ ಮನೆಯೊಂದು ಕುಸಿದು ಬಿದ್ದಿದೆ. ಆದರೆ ಮನೆಯಲ್ಲಿ ಯಾರು ಇಲ್ಲದ್ದರಿಂದ ಅನಾಹುತ ತಪ್ಪಿದಂತಾಗಿದೆ. ತಾಲೂಕಿನ ಹಾತಲಗೇರಿ, ಹರ್ಲಾಪೂರ, ಬಿಂಕದಕಟ್ಟಿ ಮತ್ತಿತರ ಗ್ರಾಮಗಳಲ್ಲಿ ಗಾಳಿ ಆರ್ಭಟಕ್ಕೆ ಮನೆಯ ಮೇಲ್ಛಾವಣಿ ಹಾರಿಹೋಗಿವೆ. ಗಾಳಿಯ ಹೊಡೆತಕ್ಕೆ ಮೇವಿನ ಬಣವೆಗಳು ಹಾಳಾಗಿದ್ದು, ಎಲ್ಲೆಂದರಲ್ಲಿ ಮೇವು ಹಾರಿಹೋಗಿದೆ.

    ಮಳೆ ಸುರಿದಿದ್ದರಿಂದ ನಗರದ ಬಳಗಾನೂರು ರಸ್ತೆಯಲ್ಲಿರುವ ಹಳ್ಳದ ಸೇತುವೆ ಮೇಲೆ ನೀರು ಹರಿದಿದೆ. ಅಲ್ಲದೆ, ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಕೃಷಿ ಹೊಂಡಗಳು ಭರ್ತಿಯಾಗಿವೆ. ಗದಗ-ಮುಂಡರಗಿ ರಸ್ತೆಯಲ್ಲಿ ಗಾಳಿಯ ರಭಸಕ್ಕೆ ನಾಮಫಲಕದ ಕಂಬಗಳು ಬಾಗಿರುವುದು ಕಂಡುಬಂದಿತು.

    8 ಎಕರೆ ಬಾಳೆ ತೋಟ ನಾಶ

    ಗುರುವಾರ ನಸುಕಿನಜಾವ ಗಾಳಿ ಸಹಿತ ಸುರಿದ ಮಳೆಗೆ ತಾಲೂಕಿನ ಲಕ್ಕುಂಡಿ ಗ್ರಾಮದ ರಾಮಚಂದ್ರ ಬೆಂತೂರ ಎಂಬುವವರ 8 ಎಕರೆ ಬಾಳೆತೋಟ ನಾಶವಾಗಿದೆ. ಒಂದು ತಿಂಗಳಲ್ಲಿ ಬಾಳೆ ಕಟಾವಿಗೆ ಬರುತ್ತಿತ್ತು. 250ರಿಂದ 300 ಟನ್ ಬಾಳೆ ಬರುವ ನಿರೀಕ್ಷೆ ಇತ್ತು. ಆದರೆ, ಮಳೆ ಮತ್ತು ಗಾಳಿಯಿಂದ ಬಾಳೆಗಿಡಗಳು ನೆಲೆಸಮವಾಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ರೈತ ರಾಮಚಂದ್ರ ಬೆಂತೂರ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts