More

    ವರ್ಷಧಾರೆಗೆ ಹಾಳಾಯಿತು ಪ್ರಮುಖ ಬೆಳೆ

    ಲಕ್ಷ್ಮೇಶ್ವರ: ತಾಲೂಕಿನಾದ್ಯಂತ ಕಳೆದ 3 ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಚಿತ್ತ ಮಳೆ ಅನೇಕ ಅವಾಂತರ ಸೃಷ್ಟಿಸಿದೆ.

    ಲಕ್ಷ್ಮೇಶ್ವರ ಪಟ್ಟಣ ಸೇರಿದಂತೆ ತಾಲೂಕಿನ ಯಳವತ್ತಿ, ಮಾಡಳ್ಳಿ, ಯತ್ನಳ್ಳಿ, ಮಾಗಡಿ, ಬಸಾಪುರ, ಅಕ್ಕಿಗುಂದ, ಗೊಜನೂರ, ಆದ್ರಳ್ಳಿ ಸೇರಿ ಹಲವು ಗ್ರಾಮಗಳ ಜಮೀನುಗಳಲ್ಲಿನ ಬೆಳೆ ಮಳೆಯಿಂದಾಗಿ ನೀರು ಪಾಲಾಗಿವೆ. ಕೆರೆ, ಹಳ್ಳ, ಬಾಂದಾರ, ಕೃಷಿ ಹೊಂಡಗಳು ಭರ್ತಿಯಾಗಿ ಹೊಲಗಳಿಗೆ ನುಗ್ಗಿರುವುದರಿಂದ ಅಪಾರ ಪ್ರಮಾಣದ ಬೆಳೆ ಹಾನಿ ಉಂಟು ಮಾಡಿದೆ.

    ಯತ್ನಳ್ಳಿ ಗ್ರಾಮದ ರೈತರು ಕಳೆದ ಒಂದು ವಾರದ ಹಿಂದೆ ಮಳೆ ಬಿಡುವು ಇದ್ದುದರಿಂದ ಶೇಂಗಾ ಕಿತ್ತು ಹಾಕಿದ್ದರು. ಕೆಲವರು ಒಕ್ಕಲು ಮಾಡುತ್ತಿದ್ದರು. ಏಕಾಏಕಿ ಸತತ 3 ದಿನಗಳ ಮಳೆಗೆ ಜಮೀನಿನಲ್ಲಿದ್ದ ಶೇಂಗಾ ನೀರಿನ ಜತೆಗೆ ಹರಿದು ಹೋಗಿದೆ. ಒಕ್ಕಲು ಆಗಿದ್ದ ಶೇಂಗಾ ತೊಯ್ದಿದೆ. ಕೈಗೆ ಬಂದ ಫಸಲು ಉಳಿಸಿಕೊಳ್ಳಲು ರೈತರು ಹೆಣಗಾಡುತ್ತಿದ್ದು, ಗ್ರಾಮದ ಶಾಲಾ ಆವರಣ, ದೇವಸ್ಥಾನ, ಸರ್ಕಾರಿ ಕಟ್ಟಡಗಳಲ್ಲಿ ಶೇಂಗಾ ಒಣಗಲು ಹಾಕಿದ್ದಾರೆ. ಉಳ್ಳಾಗಡ್ಡಿ, ಗೋವಿನಜೋಳ, ಹತ್ತಿ, ಮೆಣಸಿನಗಿಡ ಇತ್ಯಾದಿ ಬೆಳೆಗಳು ನೀರಿನಿಂದಾವೃತಗೊಂಡಿವೆ.

    ಸಂಚಾರ ಅಸ್ತವ್ಯಸ್ತ: ಬಹುತೇಕ ಗ್ರಾಮಗಳ ರಸ್ತೆಗಳಲ್ಲಿ ನೀರು ನಿಂತಿದೆ. ರೈತ ಸಂಪರ್ಕ ರಸ್ತೆಗಳ ಸ್ಥಿತಿಯಂತೂ ಹೇಳತೀರದು. ಇನ್ನೂ ಒಂದು ವಾರ ಕಾಲ ಜಮೀನಿಗೆ ಹೋಗಲು ಬಾರದಂತಹ ಪರಿಸ್ಥಿತಿಯಿದೆ. ತಾಲೂಕಿನ ಯತ್ನಳ್ಳಿ, ಚಿಂಚಲಿ, ಬಡ್ನಿ-ಮಲ್ಲಾಪುರ, ದೊಡ್ಡೂರ-ಲಕ್ಷ್ಮೇಶ್ವರ, ನೆಲೂಗಲ್-ಹುಲ್ಲೂರ, ಲಕ್ಷ್ಮೇಶ್ವರ-ಅಕ್ಕಿಗುಂದ ಸೇರಿ ಕೆಲ ಕಡೆ ರಸ್ತೆ ಮೇಲೆಯೇ ನೀರು ಹರಿಯುತ್ತಿರುವುದರಿಂದ ಭಾನುವಾರ ಕೆಲ ಹೊತ್ತು ಸಂಚಾರ ಅಸ್ತವ್ಯಸ್ತವಾಗಿತ್ತು.

    ಲಕ್ಷ್ಮೇಶ್ವರ-ಅಕ್ಕಿಗುಂದ ಮಾರ್ಗದ ಸೇತುವೆ ದಾಟುವ ವೇಳೆ ಬೈಕ್ ಸಮೇತ ಸಾವರ ಹಳ್ಳಕ್ಕೆ ಬಿದ್ದು ಅದೃಷ್ಟವಶಾತ್ ಪಾರಾಗಿದ್ದಾನೆ. ನೀರಿನ ಸೆಳೆತ ಕಡಿಮೆಯಾದ ಮೇಲೆ ಗ್ರಾಮಸ್ಥರ ಸಹಾಯದಿಂದ ಬೈಕ್ ಹೊರ ತೆಗೆಯಲಾಗಿದೆ.

    ಮನೆಗೆ ನುಗ್ಗಿದ ನೀರು: ಮೂರು ದಿನದಿಂದ ಸುರಿದ ಮಳೆಯ ಹೊಡೆತಕ್ಕೆ ತಾಲೂಕಿನ ಅನೇಕ ಕಡೆ ಮನೆಗಳು ನೆಲಕಚ್ಚಿವೆ. ಯಳವತ್ತಿ ಗ್ರಾಮದ ಎಸ್​ಸಿ ಕಾಲನಿಯ 45ಕ್ಕೂ ಹೆಚ್ಚು ಮನೆಗಳಲ್ಲಿ ಕೊಳಚೆ ನೀರು ಜಿನುಗುತ್ತಿದೆ. ಇದರಿಂದ ಧವಸ ಧಾನ್ಯ, ಇತರೆ ಗೃಹಬಳಕೆ ವಸ್ತುಗಳು ಹಾಳಾಗಿವೆ. ಮಠಪತಿಯವರ ಓಣಿಯ ಮಲ್ಲಿಕಾರ್ಜುನಗೌಡ ಪಿಡ್ಡನಗೌಡ್ರ ಮನೆಯೊಳಗೆ ಅಪಾರ ಪ್ರಮಾಣದ ಅಂತರ್ಜಲ ಜಿನುಗುತ್ತಿದೆ. ಮನೆಯಲ್ಲಿನ ದನಕರು, ದವಸ ಧಾನ್ಯಗಳನ್ನು ರಾತ್ರಿಯಿಂದ ಬೇರೆಡೆ ಸ್ಥಳಾಂತರಿಸಲು ಪರದಾಡಿದ್ದಾರೆ. ಡೀಸೆಲ್ ಇಂಜಿನ್ ಮೂಲಕ ಮನೆಯಲ್ಲಿನ ನೀರು ಹೊರ ಹಾಕುವ ಕಾರ್ಯ ಮಾಡಿದರೂ ನೀರು ಸಂಗ್ರಹವಾಗುವುದು ನಿಂತಿಲ್ಲ. ಇದರಿಂದ ಮನೆ ಕುಸಿಯುವ ಆತಂಕ ಉಂಟಾಗಿದೆ. ಗ್ರಾಮದ ಇಂದಿರಾ ಪ್ಲಾಟ್​ನ 6ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮಳೆ ನೀರು ಮನೆಗೆ ನುಗ್ಗಿ ರಾತ್ರಿಯಿಡಿ ಜನತೆ ಜಾಗರಣೆ ಮಾಡಿದ್ದಾರೆ.

    ಅತಿವೃಷ್ಟಿಯಿಂದ ಮುಂಗಾರಿನ ಬಹುತೇಕ ಬೆಳೆಗಳು ಹಾಳಾಗಿದ್ದು ರೈತ ಸಮುದಾಯ ಸಂಕಷ್ಟದಲ್ಲಿ ಬದುಕುತ್ತಿದೆ. ಮಳೆಗಾಲ ಬಂತೆಂದರೆ ಗ್ರಾಮದಲ್ಲಿನ ರಸ್ತೆಗಳು ಕೆಸರಿನಿಂದ ಆವೃತವಾಗುತ್ತವೆ. ಗ್ರಾಮ ಸಂರ್ಪಸುವ ಮತ್ತು ಎಲ್ಲ ರೈತ ಸಂಪರ್ಕ ರಸ್ತೆಗಳ ಸ್ಥಿತಿ ಅಯೋಮಯವಾಗುತ್ತದೆ. ಆದ್ದರಿಂದ ಜಿಲ್ಲಾಡಳಿತ ಖುದ್ದಾಗಿ ಪರಿಸ್ಥಿತಿ ಅವಲೋಕಿಸಿ ಪರಿಹಾರ ಕ್ರಮಕ್ಕೆ ಮುಂದಾಗಬೇಕು.
    | ಬಾಪುಗೌಡ ಪಾಟೀಲ, ಚಂದನಗೌಡ ಪಾಟೀಲ, ಮೈನು ಗಮ್ಮಣ್ಣವರ ರೈತರು

    ಚುನಾವಣೆ ಮತ್ತು ಇತರ ಕಚೇರಿ ಕೆಲಸಗಳ ಒತ್ತಡದಿಂದಾಗಿ ಗ್ರಾಮಕ್ಕೆ ತೆರಳಲು ಸಾಧ್ಯವಾಗಿಲ್ಲ. ಆದರೆ, ಗ್ರಾಮ ಲೆಕ್ಕಾಧಿಕಾರಿ ಮತ್ತು ಸಿಬ್ಬಂದಿಯಿಂದ ಸಂಪೂರ್ಣ ವರದಿ ಕಲೆ ಹಾಕಿ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ.
    | ಭ್ರಮರಾಂಬ ಗುಬ್ಬಿಶೆಟ್ಟಿ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts