More

    ವರ್ಷಧಾರೆಗೆ ಮೈದುಂಬಿವೆ ಜಲಪಾತಗಳು, ತುಂಬಿಕೊಂಡ ಕೆರೆಗಳು

    ಚಿಕ್ಕಬಳ್ಳಾಪುರ: ಇತ್ತೀಚಿಗೆ ಸುರಿಯುತ್ತಿವ ಮಳೆ, ಬರದಿಂದ ಕಂಗೆಟ್ಟಿದ್ದ ಬಯಲುಸೀಮೆಯ ಜಿಲ್ಲೆಯಲ್ಲಿ ಜೀವಕಳೆ ತಂದಿದೆ, ಜಲಮೂಲಗಳಿಗೆ ಗತವೈಭವ ಮರಳಿಸಿದೆ, ಕೆಲವೆಡೆ ಸಣ್ಣಪುಟ್ಟ ಅವಾಂತರ ಸೃಷ್ಟಿಸಿದ್ದರೆ, ಹಲವೆಡೆ ನೀರಿನ ಬವಣೆ ನೀಗಿಸಿದೆ…

    ಚಿಕ್ಕಬಳ್ಳಾಪುರ ತಾಲೂಕು ಕೇತೇನಹಳ್ಳಿಯ ಜರಮಡು ಜಲಪಾತ ಮೈದುಂಬಿದೆ. ಚನ್ನಗಿರಿಯಲ್ಲಿ ಜಲಧಾರೆ ಉಕ್ಕುತ್ತಿದೆ. ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಕ್ಕೆ ಕುಡಿಯುವ ನೀರಿನ ಆಸರೆಯಾದ ಜಕ್ಕಲಮಡು ಜಲಾಶಯ, ಬಾಗೇಪಲ್ಲಿಯ ಚಿತ್ರಾವತಿ ಜಲಾಶಯ, ಗೌರಿಬಿದನೂರಿನ ಉತ್ತರ ಪಿನಾಕಿನಿ, ಮಂಚೇನಹಳ್ಳಿಯ ದಂಡಿಗಾನಹಳ್ಳಿ ಕೆರೆ, ಗುಡಿಬಂಡೆಯ ಅಮಾನಿಬೈರಸಾಗರ ಸೇರಿ ಹಲವೆಡೆ ನೀರಿನ ಪ್ರಮಾಣ ಹೆಚ್ಚಾಗಿದೆ.

    ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತಲೂ ಮೇ ನಲ್ಲಿ ಶೇ.37, ಜೂನ್‌ನಲ್ಲಿ ಶೇ.82, ಜುಲೈನಲ್ಲಿ ಶೇ.70 ಮಳೆ ಬಿದ್ದಿದೆ. ಜತೆಗೆ ಆಗಸ್ಟ್ ಮೊದಲ ವಾರದಲ್ಲೂ ಧಾರಾಕಾರ ಮಳೆಯಾಗಿದೆ. ಬೆಟ್ಟಗುಡ್ಡದಲ್ಲಿ ಬಿದ್ದ ಮಳೆಯ ನೀರು ಜಲಾಶಯಗಳಿಗೆ ಹರಿದು ಬರುತ್ತಿದೆ. ಹಾಗೆಯೇ ಕಲ್ಲು ಬಂಡೆಗಳ ನಡುವೆ ಎತ್ತರದಿಂದ ಬೀಳುತ್ತಿರುವ ಜಲಧಾರೆಗಳು ನೋಡುಗರನ್ನು ಕೈ ಬೀಸಿ ಕರೆಯುತ್ತಿವೆ.

    ವರ್ಷಧಾರೆಯಿಂದ ಹಲವು ತಿಂಗಳು ಕುಡಿಯುವ ನೀರಿನ ಬವಣೆ ನೀಗುವ ನಿರೀಕ್ಷೆಯಿದ್ದು, ಮಳೆ ನೀರಿನ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಈಗಾಗಲೇ ಕೆರೆಗಳ ಕಾಮಗಾರಿ, ಹೂಳೆತ್ತಲಾಗದೆ.

    ನೊರೆ ಹಾಲಿನಂತೆ ಜರಮಡು ಜಲಪಾತ: ಕೆಲ ದಿನಗಳಿಂದ ಚಿಕ್ಕಬಳ್ಳಾಪುರ ತಾಲೂಕು ಕೇತೇನಹಳ್ಳಿ ಅರಣ್ಯ ಪ್ರದೇಶದಲ್ಲಿರುವ ಜರಮಡಗು ಕೇತೇನಹಳ್ಳಿ ಜಲಪಾತಕ್ಕೆ ಹೊಸ ಕಳೆ ಬಂದಿದೆ, ನೊರೆ ಹಾಲಿನಂತೆ ಬೀಳುತ್ತಿರುವ ಜಲಧಾರೆಯ ಮನಮೋಹಕ ದೃಶ್ಯ ಪ್ರವಾಸಿಗರನ್ನು ಸೆಳೆಯುತ್ತಿದೆ.ಅರಣ್ಯ ಪ್ರದೇಶದಲ್ಲಿ ಸಣ್ಣಪುಟ್ಟ ತೊರೆ, ಝರಿಗಳನ್ನು ಒಳಗೊಂಡಂತೆ ನಿರ್ಮಾಣವಾಗಿರುವ ಜರಮಡುಗು ಜಲಪಾತವು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಿಂದ ಉತ್ತರ ದಿಕ್ಕಿನಲ್ಲಿ ಬೆಟ್ಟದ ಸಾಲುಗಳ ನಡುವೆ ಇದೆ. ಸುಮಾರು 50 ಅಡಿ ಎತ್ತರದಿಂದ ಬಂಡೆಯ ಮೇಲಿಂದ ಧುಮ್ಮುಕ್ಕುವ ಜಲಪಾತ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದೆ.

    ಅಮಾನಿಬೈರಸಾಗರಕ್ಕೆ ಭರಪೂರ ನೀರು: ಗುಡಿಬಂಡೆ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಜೀವನಾಡಿಯಾದ, ಕುಡಿಯುವ ನೀರಿನ ಪ್ರಮುಖ ಆಸರೆಯಾದ ಅಮಾನಿಬೈರಸಾಗರ ಕೆರೆಗೆ 14 ಅಡಿಗಳಷ್ಟು ನೀರು ಬಂದಿದೆ, 25 ಅಡಿಗಳಷ್ಟು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಕೆರೆ ಸುಮಾರು 500 ಎಕರೆ ವಿಸ್ತೀರ್ಣ ಹೊಂದಿದ್ದು, 2500 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತದೆ. 2017ರಲ್ಲಿ ಕೆರೆ ಕೋಡಿ ಹರಿದಿತ್ತು, ಈ ವರ್ಷದ ವರ್ಷಧಾರೆ ಕೆರೆಗೆ ಜೀವಕಳೆ ತಂದಿದ್ದು, ಮನಮೋಹಕವಾಗಿದೆ.

    ದಂಡಿಗಾನಹಳ್ಳಿ ಕೆರೆ ಕೋಡಿ: ಗೌರಿಬಿದನೂರು ತಾಲೂಕು ಮಂಚೇನಹಳ್ಳಿ ಹೋಬಳಿಯ ದಂಡಿಗಾನಹಳ್ಳಿ ಕೆರೆ ಕೋಡಿ ಹರಿದಿದೆ, 98.38 ಎಕರೆ ಜಲಾವೃತ ಪ್ರದೇಶ ಹೊಂದಿರುವ ಈ ಕೆರೆ 526 ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತದೆ, 112.91 ಎಂಸಿಎ್ಟಿಯಷ್ಟು ನೀರು ಸಂಗ್ರಹ ಸಾಮರ್ಥ್ಯದ ಕೆರೆ ಈ ವರ್ಷದ ಮಳೆಗೆ ತುಂಬಿದೆ.

    ಪ್ರವಾಸಿಗರಿಗೆ ಕರೊನಾ ಅಡ್ಡಿ: ಕರೊನಾ ಹಿನ್ನೆಲೆಯಲ್ಲಿ ಜನ ಮತ್ತು ವಾಹನ ಸಂಚಾರ ಕಡಿಮೆಯಾಗಿದೆ. ಇದರ ನಡುವೆ ಸ್ಥಳೀಯರು ಜಿಲ್ಲೆಯಲ್ಲಿನ ಬೆಟ್ಟಗಳಿಗೆ ಟ್ರಕಿಂಗ್ ಹೋಗುತ್ತಿದ್ದಾರೆ. ಅರಣ್ಯ ಪ್ರದೇಶದಲ್ಲಿ ಅಡ್ಡಾಡುವುದರ ಜತೆಗೆ ಜಲಪಾತಗಳ ಬಳಿ ಸೆಲ್ಫಿ, ಫೋಟೋಗಳನ್ನು ತೆಗೆದುಕೊಂಡು ಖುಷಿಪಡುತ್ತಿದ್ದಾರೆ. ಈ ಮೊದಲು ಬೆಂಗಳೂರು ಸೇರಿ ವಿವಿಧೆಡೆಯಿಂದ ಪ್ರವಾಸಿಗರು ತಂಡೋಪತಂಡವಾಗಿ ಇಲ್ಲಿಗೆ ಭೇಟಿ ನೀಡುತ್ತಿದ್ದರು. ಆದರೆ, ಕರೊನಾ ಸೋಂಕಿನಿಂದಾಗ ಬರುವಿಕೆ ಕಡಿಮೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts