More

    ವನಸಿರಿ ನಾಡಲ್ಲಿ ಸಿಂಗಾರಗೊಂಡಿವೆ ಮತಗಟ್ಟೆಗಳು

    ಎಚ್.ಡಿ.ಕೋಟೆ: ಶಾಲೆ ಅಂಗಳದ ತುಂಬ ರಂಗೋಲಿ, ತಳಿರು-ತೋರಣದ ಗೊಂಚಲು, ಚಿತ್ತಾಕರ್ಷವಾಗಿ ಸಿಂಗಾರಗೊಂಡ ಕೊಠಡಿ, ಎತ್ತ ನೋಡಿದರೂ ಗ್ರಾಮೀಣ ಚಿತ್ರಣ…!


    ಹೀಗೆ ಅಲಂಕೃತಗೊಳಿಸಲಾಗಿರುವ ಈ ಕೊಠಡಿಗಳು ಮತದಾನದ ಕೇಂದ್ರಗಳು ಎಂದರೆ ನಿಮಗೆ ಅಚ್ಚರಿಯಾಗಬಹುದು. ಹೆಗ್ಗಡದೇವನಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 282 ಮತಗಟ್ಟೆಗಳ ಪೈಕಿ 14 ಮತಗಟ್ಟೆಗಳನ್ನು ಆಯ್ಕೆ ಮಾಡಿ ಆಕರ್ಷಣೀಯ ಕೇಂದ್ರಗಳನ್ನಾಗಿ ಮಾಡಲಾಗಿದೆ.


    ಹಾಡಿಗಳಲ್ಲಿ ಗ್ರಾಮೀಣ ಸೊಗಡು: ಆದಿವಾಸಿ ಬುಡಕಟ್ಟು ಜನರನ್ನು ಆಕರ್ಷಿಸುವ ಸಲುವಾಗಿ ತಾಲೂಕಿನ ಬಸವನಗಿರಿ ಎ ಹಾಡಿ ಗಿರಿಜನ ಆಶ್ರಮ ಶಾಲೆ, ಭೀಮನಹಳ್ಳಿ ಸರ್ಕಾರಿ ಗಿರಿಜನ ಆಶ್ರಮ ಶಾಲೆ, ಪೆಂಜಹಳ್ಳಿ ಕಾಲನಿ ಗಿರಿಜನ ಆಶ್ರಮ ಶಾಲೆಗಳಲ್ಲಿ 3 ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಿ ಗ್ರಾಮೀಣ ಭಾಗದ ಆದಿವಾಸಿ ಸೊಗಡನ್ನೊಳಗೊಂಡ ವಿನ್ಯಾಸಗಳಿಂದ ಆಕರ್ಷಕವಾಗಿ ಮಾಡಲಾಗಿದೆ.


    ನಾರಿಯರಿಗೆ ಸಖಿ: ವಿಶೇಷವಾಗಿ ಮಹಿಳೆಯರನ್ನು ಆಕರ್ಷಿಸುವ ಸಲುವಾಗಿ 5 ಸಖಿ ಪಿಂಕ್ ಮತಗಟ್ಟೆಗಳನ್ನು ತಾಲೂಕಿನ ಹುಣಸೆಕುಪ್ಪೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮಾದಾಪುರದ ಪೂರ್ವ ಭಾಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಎಚ್.ಡಿ.ಕೋಟೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ (ಹೊಸ ಕಟ್ಟಡ), ಸರಗೂರು ಪಟ್ಟಣದ ಜೆ.ಎಸ್.ಎಸ್. ಹಿರಿಯ ಪ್ರಾಥಮಿಕ ಶಾಲೆ, ಹಳಿಯೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.


    ಯುವಜನರ ಮತಗಟ್ಟೆ: ಯುವಕ, ಯುವತಿಯರನ್ನು ಆಕರ್ಷಿಸುವ ಸಲುವಾಗಿ ಎಚ್.ಡಿ.ಕೋಟೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯ ಹೊಸ ಕಟ್ಟಡದಲ್ಲಿ ಯುವ ಮತದಾರರ ಮತಗಟ್ಟೆಯನ್ನು ತೆರೆಯಲಾಗಿದೆ. ಅಲ್ಲದೇ, ಅಲ್ಲಿ ಕೆಲಸ ನಿರ್ವಹಿಸಲು ಯುವ ಅಧಿಕಾರಿಗಳನ್ನೇ ನಿಯೋಜಿಸಲಾಗಿದೆ. ಆ ಮತಗಟ್ಟೆ ವ್ಯಾಪ್ತಿಯಲ್ಲಿ ಹೆಚ್ಚು ಯುವಕರು ನೋಂದಣಿ ಆಗಿರುವುದರಿಂದ ಆ ಮತಗಟ್ಟೆಯನ್ನು ಯುವಕ ಯುವ ಮತಗಟ್ಟೆ ಎಂದು ಕರೆಯಲಾಗಿದೆ.


    ವಿಶೇಷ ಮತಗಟ್ಟೆ : ಅಂಗವಿಕಲರನ್ನು ಆಕರ್ಷಿಸಿ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ವಿಶೇಷ ಮತಗಟ್ಟೆ ತೆರೆಯಲಾಗಿದೆ. ಅಂಗವಿಕಲರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧ ಸೌಲಭ್ಯ, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕೂರಲು ಬೇಕಾಗುವ ಆಸನ, ಮತಗಟ್ಟೆಗೆ ತೆರಳಲು ರ‌್ಯಾಂಪ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts