More

    ವಚನಗಳ ಮರು ವ್ಯಾಖ್ಯಾನ ಅವಶ್ಯಕ : ಕನ್ನಡ ಪುಸ್ತಕ ಪ್ರಾಧಿಕಾರ ಮಾಜಿ ಅಧ್ಯಕ್ಷ ಡಾ. ನಂದೀಶ್ ಹಂಚೆ ಅಭಿಮತ

    ಮೈಸೂರು: ವಚನಗಳನ್ನು ಎಲ್ಲ ದೃಷ್ಟಿಕೋನದಿಂದ ನೋಡುವ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ವಚನಗಳನ್ನು ಮರು ವ್ಯಾಖ್ಯಾನ ಮಾಡುವ ತುರ್ತು ಸಂದರ್ಭದಲ್ಲಿ ನಾವಿದ್ದೇವೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರ ಮಾಜಿ ಅಧ್ಯಕ್ಷ ಡಾ. ನಂದೀಶ್ ಹಂಚೆ ಹೇಳಿದರು.

    ಶರಣ ಸಾಹಿತ್ಯ ಪರಿಷತ್ ನಗರ ಘಟಕ ನಗರದ ಎಂಜಿ ರಸ್ತೆಯ ಶ್ರೀ ರಾಜೇಂದ್ರ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದತ್ತಿ ಕಾರ್ಯಕ್ರಮ ಹಾಗೂ ನಗರ್ಲೆ ಶಿವಕುಮಾರ ರಚನೆಯ ‘ಸ್ಮರಣೀಯರು’ ಕೃತಿ ಬಿಡುಗಡೆ ಸಮಾರಂಭದಲ್ಲಿ ‘ಶರಣ ವೇದಮೂರ್ತಿ ಸಂಗಣ್ಣ ಮತ್ತು ಶರಣದರ್ಶನದ ಆಶಯ’ ವಿಷಯದ ಕುರಿತು ಮಾತನಾಡಿದರು.

    ವಚನ ಸಾಹಿತ್ಯದ ಕುರಿತು ಭಾವುಕ ಅಧ್ಯಯನಗಳೇ ಹೆಚ್ಚಾಗಿ ನಡೆದಿದ್ದು, ತಳಸ್ಪರ್ಶಿ ಅಧ್ಯಯನ ನಡೆದಿರುವುದು ಕಡಿಮೆ. ಹಾಗಾಗಿ ವಚನ ಸಾಹಿತ್ಯವನ್ನು ಎಲ್ಲ ದೃಷ್ಟಿ ಕೋನದಿಂದ ಅಧ್ಯಯನ ನಡೆಯುವ ಅವಶ್ಯಕತೆ ಇದೆ. ಅದೇ ರೀತಿ ವಚನಗಳನ್ನು ಓದಲು ಶಾಸ್ತ್ರೀಯ ದೃಷ್ಟಿಕೋನದ ಅವಶ್ಯಕತೆ ಇದೆ. ಇಲ್ಲವಾದಲ್ಲಿ ವಚನಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆ ಹೆಚ್ಚು ಇದೆ ಎಂದು ಹೇಳಿದರು.

    ವೇದಮೂರ್ತಿ ಸಂಗಣ್ಣ 12ನೇ ಶತಮಾನದ ಶರಣರು. ವೇದದಲ್ಲಿ ಅವರು ಅಪಾರ ಪಾಂಡಿತ್ಯ ಹೊಂದಿದ್ದ ಹಿನ್ನೆಲೆಯಲ್ಲಿ ಅವರಿಗೆ ವೇದಮೂರ್ತಿ ಎಂಬ ಬಿರುದ್ದು ಬಂತು. ಅವರ 10 ವಚನಗಳು ಲಭ್ಯವಾಗಿದ್ದು, ಆ ವಚನಗಳಲ್ಲಿ ವೇದದ ಕುರಿತು ಭಿನ್ನಾಭಿಪ್ರಾಯ ಇಲ್ಲ. ಆದರೆ, ವಚನಕಾರರು ವೇದವನ್ನು ತಿರಸ್ಕರಿಸಿದ್ದರು. ಅಲ್ಲದೆ, ವೇದಗಳ ಕುರಿತು ಅವರಿಗೆ ಭಿನ್ನಾಭಿಪ್ರಾಯ ಇತ್ತು. ಹಾಗಾದರೆ ವೇದಮೂರ್ತಿ ಸಂಗಣ್ಣ ಅವರ ವಚನಗಳನ್ನು ನಾವು ಯಾವ ದೃಷ್ಟಿಕೋನದಲ್ಲಿ ನೋಡಬೇಕು ಎಂಬುದು ಬಹಳ ಮುಖ್ಯ. ವಚನಕಾರರು ವೇದಗಳ ಕರ್ಮ ವಿಭಾಗವನ್ನು ತಿರಸ್ಕರಿಸಿ ವೇದದಲ್ಲಿರುವ ಜ್ಞಾನ ಹಾಗೂ ಭಕ್ತಿಯನ್ನು ಸ್ವೀಕರಿಸಿದ್ದಾರೆ. ವೇದಮೂರ್ತಿ ಸಂಗಣ್ಣ ಅವರು ಸಹ ವೇದದ ಕರ್ಮವನ್ನು ತಿರಸ್ಕರಿಸಿರುವುದನ್ನು ಅವರ ವಚನಗಳಲ್ಲಿ ಕಾಣಬಹುದು. ವೇದಮೂರ್ತಿ ಸಂಗಣ್ಣ ಅವರ ವಚನಗಳನ್ನು ಓದಿದರೆ ವೇದವನ್ನು ಯಾವ ದೃಷ್ಟಿಕೋನದಿಂದ ನೋಡಬೇಕು ಎಂಬುದು ಸ್ಪಷ್ಟವಾಗುತ್ತದೆ ಎಂದರು.

    ಸಂಸ್ಕೃತ ವಿದ್ವಾಂಸ ಪ್ರೊ.ಎಚ್.ವಿ. ನಾಗರಾಜರಾವ್ ‘ಸ್ಮರಣೀಯರು’ ಕೃತಿ ಬಿಡುಗಡೆ ಮಾಡಿದರು. ಸಾಹಿತಿ ನಗರ್ಲೆ ಶಿವಕುಮಾರ, ಶರಣ ಸಾಹಿತ್ಯ ಪರಿಷತ್ ನಗರಾಧ್ಯಕ್ಷ ಮ.ಗು. ಸದಾನಂದಯ್ಯ, ದತ್ತಿದಾನಿಗಳಾದ ಡಾ.ಎಚ್. ಮುದ್ದುಮಲ್ಲೇಶ್, ಮಲ್ಲಿಕಾರ್ಜುನ ಸಮಂತ್ರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts