More

    ವಕೀಲರು, ನ್ಯಾಯಾಧೀಶರು ನ್ಯಾಯಾಂಗದ ಎರಡು ಗಾಲಿಗಳು

    ಮಳವಳ್ಳಿ: ವಕೀಲರು ಹಾಗೂ ನ್ಯಾಯಾಧೀಶರು ನ್ಯಾಯಾಂಗ ವ್ಯವಸ್ಥೆಯ ಎರಡು ಗಾಲಿಗಳಿದ್ದಂತೆ. ಅದಕ್ಕೆ ಪೂರಕವಾಗಿ ನ್ಯಾಯಾಲಯದ ಸಿಬ್ಬಂದಿ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ತ್ವರಿತಗತಿಯಲ್ಲಿ ಪ್ರಕರಣಗಳನ್ನು ಇತ್ಯರ್ಥ ಮಾಡಲು ಸಾಧ್ಯವೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಜೆ.ರಮಾ ತಿಳಿಸಿದರು.


    ಪಟ್ಟಣದ ಅಂಬೇಡ್ಕರ್ ಭವನದಲ್ಲಿ ವಕೀಲರ ಸಂಘದಿಂದ ಗುರುವಾರ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಹಾಗೂ ದಿನಚರಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನ್ಯಾಯಾಧೀಶರು, ವಕೀಲರು ಹಾಗೂ ಸಿಬ್ಬಂದಿ ಎಲ್ಲರೂ ಒಂದಾಗಿ ಕೆಲಸ ನಿರ್ವಹಿಸಿದಾಗ ಮಾತ್ರ ನ್ಯಾಯಾಲಯದ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತವೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.


    ಶಾಸಕ ಡಾ.ಕೆ.ಅನ್ನದಾನಿ ದಿನಚರಿ ಬಿಡುಗಡೆಗೊಳಿಸಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ ವ್ಯವಸ್ಥೆಯು ಪ್ರಧಾನವಾದ ಅಂಗವಾಗಿದ್ದು, ಶಾಸಕಾಂಗ ಹಾಗೂ ಕಾರ್ಯಾಂಗದಲ್ಲಿ ಲೋಪವಾದಾಗ ನ್ಯಾಯಾಂಗ ವ್ಯವಸ್ಥೆಯ ಮೊರೆ ಹೋಗಲಾಗುತ್ತದೆ. ಆದ್ದರಿಂದ ಸಾಮಾನ್ಯ ಪ್ರಜೆಯಿಂದ ದೇಶದ ಉನ್ನತ ಪದವಿಯಲ್ಲಿರುವರು ಸಹ ನ್ಯಾಯಾಂಗದ ಅಡಿಯಲ್ಲಿ ಕೆಲಸ ನಿರ್ವಹಿಸಬೇಕು. ಕಾನೂನಿನ ಮುಂದೆ ಎಲ್ಲರೂ ಸಮಾನರು. ಯಾರೇ ತಪ್ಪು ಮಾಡಿದರೂ ಅವರು ಶಿಕ್ಷೆ ಅನುಭವಿಸಬೇಕು. ಇಂತಹ ವ್ಯವಸ್ಥೆಯನ್ನು ಹೊಂದಿರುವ ಸಂವಿಧಾನವನ್ನು ನೀಡಿದ ಡಾ.ಅಂಬೇಡ್ಕರ್ ಅವರನ್ನು ದೇಶದ ಸಾಮಾನ್ಯ ಪ್ರಜೆಯೂ ಗೌರವಿಸಬೇಕು ಎಂದು ಹೇಳಿದರು.


    ವಾಗ್ಮಿ ಪ್ರೊ.ಕೃಷ್ಣೇಗೌಡ, ಮಳವಳ್ಳಿ ಜೆಎಂಎಫ್‌ಸಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ ಮಾದೇಶ್, ಪ್ರಧಾನ ಸಿವಿಲ್ ನ್ಯಾಯಾಧೀಶೆ ಮಮತಾ ಶಿವಪೂಜೆ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸಚಿನ್ ಕುಮಾರ್ ಶಿವಪೂಜೆ, ಸಂಘದ ಅಧ್ಯಕ್ಷ ಡಿ.ಎಂ.ಸುಂದರ್, ಬಿಜೆಪಿ ಮುಖಂಡ ಮುನಿರಾಜು, ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ರಂಗನಾಥ್, ಸದಸ್ಯ ಎನ್.ಶಿವಕುಮಾರ್. ತಾಪಂ ಕಾರ್ಯನಿರ್ವಾಹಣಾಧಿಕಾರಿ ರಾಮಲಿಂಗಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts