More

    ಲೋಕಾರ್ಪಣೆಗೂ ಮುನ್ನವೇ ಅಮಾನಿ ಗೋಪಾಲಕೃಷ್ಣ ಕೆರೆಯ ಗಾಜಿನ ಮನೆಗೆ ಆಪತ್ತು?

    ಚಿಕ್ಕಬಳ್ಳಾಪುರ: ಕೆರೆಯ ಮೂಲಸ್ವರೂಪವನ್ನು ಹಾಳುವ ಮಾಡುವ ಅಭಿವೃದ್ಧಿ ಕೆಲಸ ಕೈಗೊಳ್ಳುವಂತಿಲ್ಲ ಎಂಬ ನ್ಯಾಯಾಲಯದ ಆದೇಶ ತಾಲೂಕಿನ ಅಣಕೂರು ಸಮೀಪದ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ನಿರ್ಮಿಸಲಾಗಿರುವ ಆಕರ್ಷಕ ಗಾಜಿನ ಮನೆಗೆ ಕಲ್ಲು ಹೊಡೆದಂತಾಗಿದೆ.

    ತೋಟಗಾರಿಕೆ ಇಲಾಖೆ ಕೆರೆಯ 70 ಎಕರೆ ವಶಪಡಿಸಿಕೊಂಡು, ಬಟಾನಿಕಲ್ ಪಾರ್ಕ್ ನಿರ್ಮಿಸಲು ಮುಂದಾಗಿದೆ. ಇದರ ಭಾಗವಾಗಿ 1,450 ಚದರ ಮೀಟರ್ ಜಾಗದಲ್ಲಿ ವಿದೇಶಿ ಆರ್ಕಿಟೆಕ್ಟ್ ರೂಪಿಸಿರುವ ಮಾದರಿಯಂತೆ ಅತ್ಯಾಧುನಿಕ ಶೈಲಿಯಲ್ಲಿ ಬರೋಬ್ಬರಿ 3.50 ಕೋಟಿ ರೂ. ವೆಚ್ಚದಲ್ಲಿ ಗಾಜಿನ ಮನೆ ನಿರ್ಮಾಣದ ಕಾಮಗಾರಿ ಕೈಗೊಂಡಿತ್ತು. ಕೆಲಸ ಪೂರ್ಣಗೊಂಡು ವರ್ಷ ಕಳೆದರೂ ಇದುವರೆಗೂ ಲೋಕಾರ್ಪಣೆಗೊಂಡಿಲ್ಲ.

    ಇದರ ನಡುವೆ ಕೆರೆಯಂಗಳದಲ್ಲಿ ಕಟ್ಟಡ ಕಾಮಗಾರಿ ಕೈಗೊಂಡಿರುವುದಕ್ಕೆ ಲೋಕಾಯುಕ್ತ ಮತ್ತು ನ್ಯಾಯಾಲಯಕ್ಕೆ ಪರಿಸರ ಪ್ರೇಮಿಗಳು ದೂರು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆದೇಶ, ಗಾಜಿನ ಮನೆಯ ಅಡಿಪಾಯವನ್ನೇ ಅಲುಗಾಡಿಸಿದೆ.
    ಲೋಕಾರ್ಪಣೆಗೂ ಮುನ್ನವೇ ತೆರವುಗೊಳಿಸಬೇಕಾದ ಪರಿಸ್ಥಿತಿ ಬಂದಿರುವುದು ಮುಂದಾಲೋಚನೆ ಇಲ್ಲದ ಅಧಿಕಾರಿಗಳ ಕಾರ್ಯವೈಖರಿಗೆ ಕನ್ನಡಿ ಹಿಡಿದಿದೆ. ಸರ್ಕಾರದ ಕೋಟ್ಯಂತರ ರೂ.ಅನುದಾನದಲ್ಲಿ ನಿರ್ಮಿಸಲಾಗಿರುವ ಗಾಜಿನ ಮನೆಯ ಮೇಲೆ ತೂಗುಗತ್ತಿ ನೇತಾಡುತ್ತಿದೆ.
    ಚಿಕ್ಕ ಅರಮನೆ : ಚಿಕ್ಕ ಅರಮನೆಯ ಮಾದರಿಯಲ್ಲಿ ಕಾಣಿಸುವ ಗಾಜಿನ ಮನೆಯನ್ನು ಅಣಕೂರು ಸಮೀಪದ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ನಿರ್ಮಿಸಲಾಗಿದ್ದು, ಅಲಂಕಾರ, ಔಷಧೀಯ ಸೇರಿ ಬಗೆಬಗೆಯ ಸಸಿಗಳನ್ನು ಬೆಳೆಸಲಾಗುತ್ತದೆ. ವಿವಿಧ ಬಣ್ಣದ ಆಕರ್ಷಕ ಹೂವುಗಳನ್ನು ಪ್ರದರ್ಶನಕ್ಕಿಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಗಾಜಿನಮನೆ ಹೊಂದಿರುವ ಬಟಾನಿಕಲ್ ಗಾರ್ಡನ್ ಜಿಲ್ಲೆಯ ಪ್ರವಾಸಿಗಳ ಪೈಕಿ ಪ್ರಮುಖ ಆಕರ್ಷಣೆಯಾಗಲಿದೆ ಎಂದೇ ಹೇಳಲಾಗಿತ್ತು.

    ಹಿಂದೆ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ಗಾಜಿನಮನೆ ನಿರ್ಮಾಣ ವಿರೋಧಿಸಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಇದರಿಂದ ವಿವಾದ ಉಂಟಾಗಿದೆ.
    ಕುಮಾರಸ್ವಾಮಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ

    ಅಧಿಕಾರಿಗಳ ತಲೆ ದಂಡ : ವಿರೋಧದ ನಡುವೆಯೂ ಗಾಜಿನಮನೆ ನಿರ್ಮಿಸಿದ ಅಧಿಕಾರಿಗಳನ್ನು ವಿವಾದವು ತಲೆ ದಂಡ ಪಡೆಯಲಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇಲ್ಲಿ ಮೊದಲು ಜಿಲ್ಲಾಡಳಿತವು ಹೈಟೆಕ್ ಮೆಡಿಕಲ್ ಕಾಲೇಜು, ಜಿಲ್ಲಾಡಳಿತ ಭವನ ನಿರ್ಮಿಸುವ ಯೋಜನೆ ರೂಪಿಸಿತ್ತು. ಆದರೆ, ಜಾಗ ಕೆರೆಯಾಗಿದ್ದರಿಂದ ಈ ಎರಡೂ ಯೋಜನೆಗಳು ಸ್ಥಳಾಂತರಗೊಂಡಿದ್ದವು. ಆದರೆ, ಇದರ ಅರಿವಿದ್ದರೂ ಬಟಾನಿಕಲ್ ಪಾರ್ಕ್ ಹೆಸರಲ್ಲಿ ಗಾಜಿನಮನೆ ನಿರ್ಮಿಸಲಾಗಿದೆ. ಈಗ ತೆರವುಗೊಳಿಸುವ ತೂಗುಗತ್ತಿ ನೇತಾಡುತ್ತಿದ್ದು, ಇದಕ್ಕೆ ಖರ್ಚಾದ ಹಣವನ್ನು ವಾಪಸ್ ಪಡೆಯುವ ಇಲ್ಲವೇ ಬಾಕಿ ಉಳಿದಿರುವ ಬಿಲ್‌ನ ಹಣ ಮಂಜೂರು ಮಾಡದಿರುವ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ.

    ಕೆರೆಯಲ್ಲಿ ಗಾಜಿನಮನೆ ನಿರ್ಮಿಸದಿರಲು ಪತ್ರದ ಮೂಲಕ ಸಂಬಂಧಪಟ್ಟವರ ಗಮನ ಸೆಳೆಯಲಾಗಿತ್ತು. ಆದರೆ, ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಇದೀಗ ತೆರವಿನ ಸಮಸ್ಯೆ ಉದ್ಭವಿಸಿದೆ. ಸರ್ಕಾರದ ಅನುದಾನ ವ್ಯರ್ಥಕ್ಕೆ ಕಾರಣವಾಗಿರುವ ಅಧಿಕಾರಿಗಳು ಮನೆಗೆ ಹೋಗುತ್ತಾರೆ.
    ಡಾ ಕೆ.ಸುಧಾಕರ್, ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts