More

    ಲೋಕಸಭಾ ಚುನಾವಣೆ:ಮೊದಲ ದಿನವೇ ಪ್ರಜ್ವಲ್ ರೇವಣ್ಣ ಸೇರಿದಂತೆ ಮೂವರು ನಾಮಪತ್ರ ಸಲ್ಲಿಕೆ

    ಹಾಸನ: ಲೋಕಸಭಾ ಚುನಾವಣೆಗೆ ಗುರುವಾರದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಮೊದಲ ದಿನವೇ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಸೇರಿದಂತೆ ಒಟ್ಟು ಮೂವರು ನಾಮಪತ್ರ ಸಲ್ಲಿಸಿದ್ದಾರೆ.
    ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾದ ಮೊದಲ ದಿನವೇ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಕರ್ನಾಟಕ ರಾಷಟ್ರೆ ಸಮಿತಿ ವತಿಯಿಂದ ದೇವರಾಜ ಚಾರ್ ಮತ್ತು ಪಕ್ಷೇತರರಾಗಿ ಅರ್.ಜಿ. ಸತೀಶ್ ತಮ್ಮ ಉಮೇದುವಾರಿಕೆಯನ್ನು ಜಿಲ್ಲಾಧಿಕಾರಿ ಹಾಗೂ ಚುನಾವಣಾ ಅಧಿಕಾರಿಯಾಗಿರುವ ಸಿ. ಸತ್ಯಭಾಮಾ ಅವರಿಗೆ ಸಲ್ಲಿಸಿದ್ದಾರೆ
    ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆಗೆ ಆಗಮಿಸುವ ಮೊದಲೇ ಶಾಸಕರಾದ ಎ.ಮಂಜು ಮತ್ತು ಸಿ.ಎನ್. ಬಾಲಕೃಷ್ಣ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ್ದರು. ನಂತರ ಪ್ರಜ್ವಲ್ ರೇವಣ್ಣ ಆಗಮಿಸಿ ಇಬ್ಬರು ನಾಯಕರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.
    ಆನಂತರ ಮಾಜಿ ಸಚಿವ ಎಚ್.ಡಿ.ರೇವಣ್ಣ ಎಂದಿನಂತೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಗನ ನಾಮಪತ್ರ ಸಲ್ಲಿಕೆಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಬರಿಗಾಲಿನಲ್ಲಿ ಆಗಮಿಸಿ ಎಲ್ಲ ಪತ್ರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಜಿಲ್ಲಾಧಿಕಾರಿಗಳಿಗೆ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾದರು ಇವರಿಗೆ ಹಾಸನ ಕ್ಷೇತ್ರದ ಶಾಸಕ ಎಚ್.ಪಿ.ಸ್ವರೂಪ್ ಸಾಥ್ ನೀಡಿದರು.
    ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಎ.ಮಂಜು, ಪ್ರಜ್ವಲ್ ರೇವಣ್ಣ ಅವರು ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಗುರುವಾರ ಸಾಂಕೇತಿಕವಾಗಿ ನಾಮಪತ್ರವನ್ನು ಸಲ್ಲಿಸಲಾಗಿದೆ. ಕಾರ್ಯಕರ್ತರು ಮುಖಂಡರು ಹೆಚ್ಚಿನ ಜನರನ್ನ ಸೇರಿಸಿಲ್ಲ. ಏ.4ರಂದು ಬಿಜೆಪಿ ಮತ್ತು ಜೆಡಿಎಸ್ ವರಿಷ್ಠರು ಆಗಮಿಸಿ ಅಂದು ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿ ಬಹಿರಂಗ ಸಭೆಯನ್ನು ಕೂಡ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಪ್ರಜ್ವಲ್ ಟೆಂಪಲ್ ರನ್:
    ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆಗೂ ಮೊದಲು ತಮ್ಮ ಮನೆದೇವರು ಹರದನಹಳ್ಳಿ ಈಶ್ವರ ಹಾಗೂ ಮಾವಿನಕೆರೆ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ನಾಮಪತ್ರವನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸಿದರು. ನಂತರ ಹೊಳೆನರಸೀಪುರದ ರೇವಣ್ಣ ಅವರ ಮನೆಗೆ ಶೃಂಗೇರಿ ಮಠದ ಸ್ವಾಮೀಜಿ ಆಗಮಿಸಿ ಆಶೀರ್ವದಿಸಿದರು.

    ಸೂಚಕರಾಗಿ ದೇವೇಗೌಡರು ಸಹಿ:
    ಲೋಕಸಭಾ ಚುನಾವಣೆಗೆ ಎರಡನೇ ಬಾರಿಗೆ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ನಾಮಪತ್ರಕ್ಕೆ ದೇವೇಗೌಡರಿಂದ ಸೂಚಕರಾಗಿ ಸಹಿ ಹಾಕಿದ್ದಾರೆ. ಹರದನಹಳ್ಳಿಯ ಅವರ ನಿವಾಸಕ್ಕೆ ತೆರಳಿ ಅವರ ಆಶೀರ್ವಾದವನ್ನು ಪಡೆದು ನಂತರ ನಾಮಪತ್ರ ಸಲ್ಲಿಕೆಗೆ ಮೊದಲು ಸೂಚಕರಾಗಿ ತಾತನ ಕೈಯಿಂದ ಸಹಿ ಹಾಕಿಸಿದ್ದಾರೆ ಈ ಸಂದರ್ಭದಲ್ಲಿ ಹಾಸನ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಹಾಜರಿದ್ದರು.

    ಜಿಲ್ಲಾಧಿಕಾರಿಗಳ ಕಚೇರಿ ಸುತ್ತ ಬಿಗಿ ಭದ್ರತೆ:
    ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿರುವುದರಿಂದ ಜಿಲ್ಲಾಧಿಕಾರಿಗಳ ಕಚೇರಿ ಸುತ್ತಾ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಡಿಸಿ ಕಚೇರಿ ಒಳಗೆ ಯಾರಿಗೂ ಅವಕಾಶವಿರಲಿಲ್ಲ ಅಲ್ಲದೆ ಜಿಲ್ಲಾಧಿಕಾರಿಗಳ ಮುಂಭಾಗದ ಬಿ.ಎಂ ರಸ್ತೆಯ ಒಂದು ಬದಿ ರಸ್ತೆಯನ್ನ ಬಂದ್ ಮಾಡಲಾಗಿತ್ತು .ಇದರಿಂದ ವಾಹನ ಸವಾರರು ಸ್ವಲ್ಪ ಸಮಯ ಪರದಾಡಿದರು. ನಂತರ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ಅವರು ಇದನ್ನ ಮನಗಂಡು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

    ಏ.4ರಂದು ಬೃಹತ್ ರ‌್ಯಾಲಿ ಮೂಲಕ ಮತ್ತೆ ನಾಮಪತ್ರ ಸಲ್ಲಿಕೆ:ಪ್ರಜ್ವಲ್
    ನಾಮಪತ್ರ ಸಲ್ಲಿಸಿದ ನಂತರ ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ,ಇದು ಸಾಂಕೇತಿಕವಾಗಿ ನಾಮಪತ್ರವನ್ನು ಸಲ್ಲಿಸಲಾಗಿದೆ ಏ.4ರಂದು ಬಿಜೆಪಿ ಮತ್ತು ಜೆಡಿಎಸ್‌ನ ರಾಜ್ಯ ನಾಯಕರ ಸಮ್ಮುಖದಲ್ಲಿ ಮತ್ತೆ ಎರಡು ಸೇಟ್ ನಾಮಪತ್ರವನ್ನು ಸಲ್ಲಿಸುವುದಾಗಿ ತಿಳಿಸಿದರು.
    ಅಂದು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ,್ಪ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವರು ಆಗಮಿಸಲಿದ್ದಾರೆ. ಆ ಸಂದರ್ಭದಲ್ಲಿ ಬೃಹತ್ ಮೆರವಣಿಗೆ ನಡೆಸಿ ಆನಂತರ ಬಹಿರಂಗ ಸಭೆಯನ್ನು ನಡೆಸಲಾಗುವುದು ಎಂದು ಹೇಳಿದರು.

    ಬಿಜೆಪಿ ಜಿಲ್ಲಾ ಮುಖಂಡರು ಗೈರು:
    ಜಿಲ್ಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಸಂಬಂಧಿಸಿದಂತೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಲೇ ಇದೆ. ರಾಜ್ಯ ಕೇಂದ್ರ ಮಟ್ಟದಲ್ಲಿ ತೀರ್ಮಾನವಾದರೂ ಕೂಡ ಜಿಲ್ಲಾಮಟ್ಟದಲ್ಲಿ ಇದು ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ ಮೊದಲ ದಿನವೇ ಬಿಜೆಪಿಯ ಯಾವೊಬ್ಬ ಮುಖಂಡರು ಕಾಣಿಸದೆ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಬಗ್ಗೆ ರೇವಣ್ಣ ಮಾತನಾಡಿ ಏ. 4ರಂದು ಎಲ್ಲರೂ ಒಟ್ಟಿಗೆ ಸೇರಿ ನಾಮಪತ್ರ ಸಲ್ಲಿಸುತ್ತೇವೆ ಇಂದು ದಿನ ಚೆನ್ನಾಗಿರುವುದರಿಂದ ಸಾಂಕೇತಿಕವಾಗಿ ಸಲ್ಲಿಸಲಾಗಿದೆ ಎಂದು ಹೇಳಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts