More

    ಲೈಂಗಿಕ ದೌರ್ಜನ್ಯ ತಡೆ ಅರಿವು ಅತ್ಯಗತ್ಯ- ನ್ಯಾಯಾಧೀಶ ಪ್ರವೀಣ ನಾಯಕ ಹೇಳಿಕೆ 

    ದಾವಣಗೆರೆ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ, ಅವರ ರಕ್ಷಣೆ ಕುರಿತ ಕಾನೂನುಗಳ ಬಗ್ಗೆ ಇಂದಿನ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಅಗತ್ಯತೆ ಇದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಪ್ರವೀಣ ನಾಯಕ ಹೇಳಿದರು.

    ಬಾಲ ನ್ಯಾಯ ಕಾಯ್ದೆ, ಪೋಕ್ಸೋ, ಆರ್‌ಟಿಇ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ದತಿ ನಿಷೇಧ ಮತ್ತು ನಿರ್ಮೂಲನಾ ಕಾಯ್ದೆಗಳ ಕುರಿತು ನಗರದ ಸಿದ್ಧ್ದಗಂಗಾ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯುವಲ್ಲಿ ಶಿಕ್ಷಕರು, ಪಾಲಕರ ಪಾತ್ರ ದೊಡ್ಡದು. ಅವರಿಗೂ ಈ ಕಾನೂನು ಜ್ಞಾನ ಬೇಕಿದೆ. ಪೋಕ್ಸೋ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಜಾಮೀನು ಸಿಗುವುದಿಲ್ಲ. ಸಂತ್ರಸ್ತರ ಮಕ್ಕಳ ಹೆಸರನ್ನು ಗೌಪ್ಯವಾಗಿ ಇರಿಸಲಾಗುವುದು ಎಂದು ಹೇಳಿದರು.
    ಕುಟುಂಬದಲ್ಲೇ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಿದ್ದಾಗ ಹಾಗೂ ಅವರಿಗೆ ಕೌನ್ಸೆಲಿಂಗ್ ನೀಡಲು ಸಖಿ ಒನ್ ಸ್ಪಾಪ್ ಕೇಂದ್ರಗಳಲ್ಲಿ ಇರಿಸಿಕೊಳ್ಳಲಾಗುವುದು. ಮಕ್ಕಳು ಕಾನೂನು ಅರಿವಿನೊಂದಿಗೆ ಲೈಂಗಿಕ ಕಿರುಕುಳ ತಡೆಯಬೇಕು ಎಂದು ತಿಳಿಸಿದರು.
    ಕಾನೂನು, ಸಾಮಾನ್ಯ ಜ್ಞಾನದ ಅರಿವು ಮಾತ್ರ. ಅದಕ್ಕೆ ಯಾವುದೇ ಸಂಹಿತೆಯ ಅಗತ್ಯವಿಲ್ಲ. ಸರ್ಕಾರದ ಯೋಜನೆಗಳು, ಕಾನೂನುಗಳ ಬಗ್ಗೆ ಅರಿವು ಅಗತ್ಯವಿದೆ. ಅದರ ಅರಿವಿಲ್ಲದೇ ಹೋದರೆ ಬತ್ತಳಿಕೆಯಲ್ಲಿ ಬಾಣ ಇದ್ದಂತೆ. ಅದನ್ನು ಬಳಸಲಾಗುವುದಿಲ್ಲ ಎಂದು ಹೇಳಿದರು.
    ಉಪನ್ಯಾಸ ನೀಡಿದ ಮಹಾದೇವಿ ಹಿರೇಮಠ ಮಾತನಾಡಿ, ಕಾನೂನು ತಿಳಿವಳಿಕೆ ಇಲ್ಲದೇ ತಪ್ಪೆಸಗಿದ ನಂತರ ನಮಗೆ ಕಾನೂನಿನ ಮಾಹಿತಿ ಇರಲಿಲ್ಲ ಎನ್ನುವುದು ಸರಿಯಾದ ಕ್ರಮವಲ್ಲ. ಎಲ್ಲಾ ವಯೋಮಾನದ ಮಕ್ಕಳಿಗೆ ಕಾನೂನು ಅನ್ವಯ ಆಗಲಿದೆ. ಲಿಂಗ ಬೇಧವಿಲ್ಲದೇ ಕಾನೂನಿನ ಅರಿವನ್ನು ಎಲ್ಲರೂ ಪಡೆಯುವುದು ಇಂದಿನ ದಿನಮಾನಗಳಲ್ಲಿ ಅತ್ಯವಿದೆ ಎಂದು ತಿಳಿಸಿದರು.
    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ವಾಸಂತಿ ಉಪ್ಪಾರ ಮಾತನಾಡಿ, ಪಾಲಕರು ಅಥವಾ ಬೇರೆಯವರಿಂದ ಅಪಾಯ ಎದುರಾದಾಗ ಮಕ್ಕಳ ವೀಕ್ಷಣಾಲಯದಲ್ಲಿ ಸಂಘರ್ಷಕ್ಕೆ ಒಳಗಾದ ಬಾಲಕರನ್ನು 3 ತಿಂಗಳವರೆಗೆ ಇರಿಸಿ ಊಟ-ವಸತಿ ಹಾಗೂ ಶಿಕ್ಷಣ ಕಲ್ಪಿಸಲಾಗುತ್ತದೆ. ಬಾಲ್ಯವಿವಾಹ ಪ್ರಕರಣಗಳಲ್ಲಿ ಕೈ ಜೋಡಿಸಿದವರು ಹಾಗೂ ಪೌರೋಹಿತ್ಯ ಮಾಡಿದವರಿಗೂ ಕಾನೂನಿನ ಕಂಟಕ ತಪ್ಪಿದ್ದಲ್ಲ ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ಸಿದ್ಧ್ದಗಂಗಾ ಶಾಲೆಯ ಮುಖ್ಯ ಶಿಕ್ಷಕಿ ರೇಖಾರಾಣಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪೂರ್ಣಿಮಾ ಇದ್ದರು. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ದಾವಣಗೆರೆ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts