More

    ಲೀಸ್ ಜಾಗದಿಂದ 128 ಕೋ.ರೂ. ನಿರೀಕ್ಷೆ

    ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಲೀಸ್ ಅವಧಿ ಮುಗಿದ ಜಾಗವನ್ನು ಹರಾಜು ಮಾಡಿದರೆ ಮಾರ್ಗಸೂಚಿ ಮೌಲ್ಯದಂತೆ 128 ಕೋಟಿ ರೂ. ಆದಾಯ ಬರುವ ನಿರೀಕ್ಷೆ ಇದ್ದು, ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ತಿಳಿಸಿದರು.

    ಸೋಮವಾರ ಕರೆದಿದ್ದ ಹು-ಧಾ ಮಹಾನಗರ ಪಾಲಿಕೆಯ 2021-22ನೇ ಸಾಲಿನ ಬಜೆಟ್ ಪೂರ್ವಭಾವಿ ಸಾರ್ವಜನಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಕೆಲ ಜಾಗವನ್ನು ದೀರ್ಘ ಅವಧಿಯವರೆಗೆ ಲೀಸ್ ನೀಡಲಾಗಿದೆ. ಅವುಗಳನ್ನು ಬಿಟ್ಟು ಅವಧಿ ಮುಗಿದ ಸುಮಾರು 1200 ಆಸ್ತಿಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಕೆಲವರು ಮನೆ, ಅಂಗಡಿಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಇಂಥ ಪ್ರಕರಣಗಳಲ್ಲಿ ಅನು ಭೋಗದಾರರಿಗೆ ಮಾರಾಟ ಮಾಡಲು ಅವಕಾಶ ಇರಲಿದೆ. ಖಾಲಿ ಜಾಗ ಉಳಿಸಿಕೊಳ್ಳುತ್ತೇವೆ ಎಂದರು.

    5 ಕೋಟಿ ರೂ. ಆದಾಯದ ನಿರೀಕ್ಷೆ: ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಹಾಗೂ ನಾವು ಸೇರಿ ಇತ್ತೀಚೆಗೆ ಅವಳಿನಗರದಲ್ಲಿ ಸಂಚರಿಸಿ ಯಾವ ಯಾವ ಸ್ಥಳದಲ್ಲಿ ಪೇಯ್್ಡ ರ್ಪಾಂಗ್ ವ್ಯವಸ್ಥೆ ಮಾಡಬಹುದು ಎಂಬುದರ ಕುರಿತು ಚರ್ಚೆ ನಡೆಸಿದ್ದೇವೆ. ಸದ್ಯ ಪೇಯ್್ಡ ರ್ಪಾಂಗ್​ನಿಂದ ವಾರ್ಷಿಕವಾಗಿ 1 ಕೋಟಿ ರೂ. ಆದಾಯ ಗಳಿಸುತ್ತಿದ್ದು, ಉಳಿದೆಡೆ ಇರುವ ಅವಕಾಶಗಳನ್ನು ಬಳಸಿಕೊಂಡರೆ 5 ಕೋಟಿ ರೂ. ಬರಲಿದೆ ಎಂದು ಹೇಳಿದರು.

    ಪಾಲಿಕೆ ಉದ್ಯಾನಗಳಲ್ಲಿ ಐಸ್ ಕ್ರೀಮ್ ಪಾರ್ಲರ್ ನಡೆಸಲು ಬಾಡಿಗೆ ಆಧಾರದಲ್ಲಿ ಜಾಗ ನೀಡುವಂತೆ ಕೆಎಂಎಫ್ ಕೇಳಿದೆ. ಮಿಲ್ಕ್ ವೆಂಡಿಂಗ್ ಮಷಿನ್ ಅಳವಡಿಸುವಂತೆ ನಾವು ಕೇಳಿದ್ದೇವೆ. ಈ ವಿಷಯ ಇನ್ನೂ ಚರ್ಚೆಯ ಹಂತದಲ್ಲಿದೆ. ಜಿಎಸ್​ಟಿ ಜಾರಿಯಾದ ಮೇಲೆ ಜಾಹೀರಾತು ಕರ ಆಕರಣೆ ಮಾಡುವಂತಿಲ್ಲವೆಂದು ಕೆಲ ಜಾಹೀರಾತು ಸಂಸ್ಥೆಗಳು ನ್ಯಾಯಾಲಯಕ್ಕೆ ಮೊರೆ ಹೋಗಿವೆ. ಈ ಕೊರತೆಯನ್ನು ತುಂಬಿಕೊಳ್ಳಲು ಲೈಸೆನ್ಸ್ ಶುಲ್ಕ ಹೆಚ್ಚಿಸುವ ಬಗ್ಗೆ ನಾವು ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದರು.

    ಸಾರ್ವಜನಿಕರ ಬೇಡಿಕೆ: ಪಾಲಿಕೆ ಬಜೆಟ್​ಗೆ ಸಂಬಂಧಿಸಿದಂತೆ ಸಾರ್ವಜನಿಕರು, ಕೆಲ ಸಂಘ ಸಂಸ್ಥೆಗಳ ಪ್ರಮುಖರು ಸಭೆಯಲ್ಲಿ ಸಲಹೆ, ಸೂಚನೆ ನೀಡಿದರು. ಕೆಲವರು ಬೇಡಿಕೆಗಳನ್ನು ಮಂಡಿಸಿದರು.

    ಬಂಜಾರ ಸಮಾಜದ ಮುಖಂಡ ಪಾಂಡುರಂಗ ಪಮ್ಮಾರ ಮಾತನಾಡಿ, ಗೋಕುಲ ರಸ್ತೆ ಬಂಜಾರ ಕಾಲನಿಯಲ್ಲಿ ಬಡವರೇ ವಾಸಿಸುತ್ತಿದ್ದಾರೆ. 20 ವರ್ಷಗಳಿಂದ ರಸ್ತೆ, ಕುಡಿಯುವ ನೀರು, ಗಟಾರ ವ್ಯವಸ್ಥೆ ಇಲ್ಲ. ಈ ಬಜೆಟ್​ನಲ್ಲಿ ಬಂಜಾರ ಕಾಲನಿಗೆ ಹೆಚ್ಚಿನ ಪ್ರಾಶಸ್ಱ ನೀಡಬೇಕು ಎಂದು ಮನವಿ ಮಾಡಿದರು.

    ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಉಪಾಧ್ಯಕ್ಷ ಸಿದ್ದೇಶ್ವರ ಕಮ್ಮಾರ ಮಾತನಾಡಿ, ವಿದ್ಯಾನಗರ ತಿಮ್ಮಸಾಗರ ರಸ್ತೆಯಿಂದ ಹೊಸ ಕೋರ್ಟ್​ವರೆಗೆ ಒಳಚರಂಡಿ ಸಮಸ್ಯೆ ಬಗೆಹರಿಸಲು ಬಜೆಟ್​ನಲ್ಲಿ ಹಣ ಒದಗಿಸಬೇಕು ಎಂದು ಆಗ್ರಹಿಸಿದರು.

    ಸಮತಾ ಸೇನೆ ಮುಖಂಡ ಗುರುನಾಥ ಉಳ್ಳಿಕಾಶಿ ಮಾತನಾಡಿ, ಪಾಲಿಕೆ ಒಡೆತನದ ಎಲ್ಲ ವಾಣಿಜ್ಯ ಮಳಿಗೆಗಳ ಲೀಸ್ ಅವಧಿ ಮುಗಿದಿದೆ. ತಕ್ಷಣ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಿ. ಖಾಸಗಿ ಮಾಲ್, ಕಟ್ಟಡಗಳು ದುಬಾರಿ ರ್ಪಾಂಗ್ ಶುಲ್ಕ ವಸೂಲಿ ಮಾಡುತ್ತಿವೆ. ಅವರ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು.

    ಆಶ್ರಯ ಬಡಾವಣೆಗಳ ಅಭಿವೃದ್ಧಿಗಾಗಿ ಹಾಗೂ ಅಂಗವಿಕಲರ ಜೀವನೋಪಾಯಕ್ಕೆ ಯೋಜನೆ ರೂಪಿಸಲು ಈ ಬಾರಿ ಬಜೆಟ್​ನಲ್ಲಿ ಅನುದಾನ ಮೀಸಲಿಡಬೇಕು ಎಂದು ಹು-ಧಾ ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಪ್ರೇಮನಾಥ ಚಿಕ್ಕತುಂಬಳ ಸಲಹೆ ನೀಡಿದರು. ಸಂಜೀವ ದುಮಕನಾಳ, ಇತರರು ಇದ್ದರು. ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ ಸ್ವಾಗತಿಸಿದರು. ಅಧೀಕ್ಷಕ ಇಂಜಿನಿಯರ್ ಇ. ತಿಮ್ಮಪ್ಪ, ಪಿಆರ್​ಒ ಎಸ್.ಸಿ. ಬೇವೂರ ಇದ್ದರು.

    ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗೂ ಪೊಲೀಸ್ ಆಯುಕ್ತ ಲಾಬೂರಾಮ್ ಸಭೆಗೆ ಆಗಮಿಸಿರಲಿಲ್ಲ. ಇವರಿಬ್ಬರ ಉಪಸ್ಥಿತಿಗಾಗಿಯೇ ಈ ಹಿಂದೆ ಎರಡು ಬಾರಿ ಸಭೆ ಮುಂದೂಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts