More

    ಲಿಫ್ಟ್ ಮಾಡಿ ನೀರು ತಂದರೆ ತಪ್ಪಿಲ್ಲ, ಕರ್ನಾಟಕ ಪರ ವಕೀಲ ಮೋಹನ ಕಾತರಕಿ ಅಭಿಮತ, ಮಹದಾಯಿ ಯೋಜನೆ ಸ್ವರೂಪ ಬದಲಾವಣೆ ಕಾರ್ಯಾಗಾರ

    ಹುಬ್ಬಳ್ಳಿ: ಮಹದಾಯಿಯ ಉಪನದಿಗಳಾದ ಕಳಸಾ- ಬಂಡೂರಿ ನಾಲೆಗಳಿಂದ ಕಾಲುವೆಯಲ್ಲಿ ನೀರು ತರುವ ಬದಲು ಲಿಫ್ಟ್ ಮಾಡಿದರೆ (ಏತ) ಖರ್ಚು ಕಡಿಮೆಯಾಗುವುದಲ್ಲದೆ, ಅರಣ್ಯ ನಾಶದ ಪ್ರಮಾಣವೂ ಇಳಿಕೆಯಾಗಲಿದೆ ಎಂದು ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಹಾಗೂ ಮಹದಾಯಿ ಪ್ರಕರಣದಲ್ಲಿ ಕರ್ನಾಟಕದ ಪರ ವಾದ ಮಂಡಿಸುತ್ತಿರುವ ಮೋಹನ ಕಾತರಕಿ ಅಭಿಪ್ರಾಯಪಟ್ಟರು.

    ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಮಹದಾಯಿ ರೈತಪರ ಹೋರಾಟ ಸಮಿತಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ಇಂಜಿನಿಯರ್ಸ್ ದಿನಾಚರಣೆ ಹಾಗೂ ಮಹದಾಯಿ ಕಳಸಾ-ಬಂಡೂರಿ ಯೋಜನೆ ಸ್ವರೂಪ ಬದಲಾವಣೆ ಕುರಿತು ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

    ಡ್ಯಾಂ ನಿರ್ವಿುಸಿ ಸಹಜ ಹರಿವಿನ ಮೂಲಕ ನೀರು ತರುವುದಾದರೆ ಸುಮಾರು 600 ಹೆಕ್ಟೇರ್​ನಷ್ಟು ಅರಣ್ಯ ಮುಳುಗಡೆಯಾಗುತ್ತದೆ. ಇದಕ್ಕೆ ಪರಿಸರ ಇಲಾಖೆ ಅನುಮತಿ ಸಿಗುವುದು ಕಷ್ಟ. ಹಾಗಾಗಿ, ಲಿಫ್ಟ್ ಮಾಡಿ ಪರ್ಯಾಯ ಮಾರ್ಗದಲ್ಲಿ ನೀರು ತರಬಹುದೇ ಎಂದು ರಾಜ್ಯ ಸರ್ಕಾರ ಸಲಹೆ ಕೇಳಿತ್ತು. ಇದನ್ನು ಪರಿಶೀಲಿಸಿ ನೋಡಿ ಇದಕ್ಕೆ ಕಾನೂನಿನ ತೊಂದರೆ ಇರುವುದಿಲ್ಲ. ಈಗಾಗಲೇ ನ್ಯಾಯಾಧೀಕರಣ ನೀರು ಬಳಕೆಗೆ ಅನುಮತಿ ನೀಡಿದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದೇವೆ ಎಂದರು.

    ಲಿಫ್ಟ್ ಮೂಲಕ ನೀರು ತಂದರೆ ಕೇವಲ 50 ಎಕರೆಯಷ್ಟು ಅರಣ್ಯ ಬೇಕು. ಖರ್ಚು ಕೂಡ ಕಡಿಮೆ. ಮಶಿನರಿ ಸಮಸ್ಯೆ, ವಿದ್ಯುತ್ ಕೊರತೆಯಂತಹ ತೊಂದರೆಯಿಂದ ಈ ಹಿಂದೆ ಏತ ನೀರಾವರಿ ಯೋಜನೆಗಳು ಫೇಲ್ ಆಗಿರಬಹುದು. ಆದರೆ, ಈಗ ಅಂದಿನ ಸಮಸ್ಯೆಗಳು ಇಲ್ಲ. ಆಧುನಿಕ ತಂತ್ರಜ್ಞಾನ ಬಳಸಿ ಉತ್ತಮ ಯಂತ್ರ, ನಿರಂತರ ವಿದ್ಯುತ್ ನೀಡುವ ಮೂಲಕ ಇದನ್ನು ಯಶಸ್ವಿಗೊಳಿಸಬಹುದು. ಅಗತ್ಯ ಬಿದ್ದರೆ ಮುಂದಿನ ದಿನಗಳಲ್ಲಿ ಗೋಡೆ ಕಟ್ಟಿ ಕಾಲುವೆ ಮೂಲಕ ನೀರು ಹರಿಸಲು ಅವಕಾಶವಂತೂ ಇದ್ದೇ ಇರುತ್ತದೆ ಎಂದು ಹೇಳಿದರು.

    ರಾಜಕಾರಣಿಗಳ ಒಗ್ಗಟ್ಟು:

    ಕರ್ನಾಟಕದಲ್ಲಿ ನೀರಿನ ವಿಚಾರ ಬಂದಾಗ ರಾಜಕಾರಣಿಗಳು ಒಗ್ಗಟ್ಟಾಗುತ್ತಾರೆ. ಒಟ್ಟಾರೆ, ಉದ್ದೇಶ ಫಲಿಸಲು ರಾಜಕೀಯ ಮರೆತು ಒಂದಾಗುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಕಾತರಕಿ ಅವರು, ಈ ಯೋಜನೆ ಜಾರಿಯಾದರೆ ಸರ್ಕಾರಕ್ಕೆ ಹೆಚ್ಚು ಶಕ್ತಿ ಬರಲಿದೆ ಎಂದರು.

    ವಿರೋಧ ಇಲ್ಲ

    ಹೋರಾಟ ಸಮಿತಿ ಮುಖ್ಯಸ್ಥ ಎನ್.ಎಚ್. ಕೋನರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯ ಸರ್ಕಾರ ಯೋಜನೆಯ ಸ್ವರೂಪ ಬದಲಾವಣೆ ಮಾಡಿದ್ದರ ಉದ್ದೇಶ ಸ್ಪಷ್ಟಪಡಿಸಬೇಕು. ಕಾಮಗಾರಿಗೆ ಯಾವುದೇ ವಿರೋಧ ಇಲ್ಲ ಎಂದು ಹೇಳಿದರು.

    ಸಾನ್ನಿಧ್ಯ ವಹಿಸಿದ್ದ ಶಿರಹಟ್ಟಿಯ ಶ್ರೀ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಉತ್ತರ ಕರ್ನಾಟಕವೂ ನಮ್ಮದು ಎನ್ನುವ ಭಾವನೆ ಬಂದರೆ ರಾಜ್ಯ ಸರ್ಕಾರಕ್ಕೆ ಈ ಯೋಜನೆ ಪೂರ್ಣಗೊಳಿಸುವುದು ದೊಡ್ಡ ವಿಷಯವಲ್ಲ ಎಂದು ಪ್ರತಿಪಾದಿಸಿದರು.

    ನಿವೃತ್ತ ಇಂಜಿನಿಯರ್ ಎಂ.ಎಂ. ಹಿರೇಮಠ ಮಾತನಾಡಿ, ಶೇ. 90ರಷ್ಟು ಲಿಫ್ಟ್ ಇರಿಗೇಶನ್ ಯೋಜನೆಗಳು ಈ ಹಿಂದೆ ವಿಫಲವಾಗಿವೆ. ಮಹದಾಯಿ ವಿಷಯದಲ್ಲಿ ಕಡಿಮೆ ಅರಣ್ಯ ಬಳಸುವ ಈ ಯೋಜನೆ ಒಳ್ಳೆಯದು. ಆದರೆ, ಸಾಧಕ-ಬಾಧಕ ನೋಡಿಕೊಂಡು ಮುಂದಡಿ ಇಡಬೇಕು ಎಂದರು.

    ರೈತ ಮುಖಂಡ ರೋಣದ ಮಾತನಾಡಿ, ಇಷ್ಟು ವರ್ಷ ತಡೆದಿದ್ದೇವೆ. ಇನ್ನಷ್ಟು ದಿನ ತಡವಾದರೂ ಸಹಜವಾಗಿ ನೀರು ಹರಿದು ಬರುವಂತೆ ಸಮರ್ಪಕ ಯೋಜನೆ ರೂಪಿಸುವುದು ಉತ್ತಮ ಎಂದು ಸಲಹೆ ನೀಡಿದರು.

    ತಂತ್ರಜ್ಞಾನ ಬಳಸಿ ಕೇಬಲ್ ಮೂಲಕ ವಿದ್ಯುತ್ ಕೊಂಡೊಯ್ದು, ಒಂದೂವರೇ ಕೋಟಿ ರೂಪಾಯಿ ವಿದ್ಯುತ್ ಬಿಲ್​ನಲ್ಲಿ ಕಳಸಾ ನೀರು ಎತ್ತಬಹುದು ಎಂದು ಎನ್.ಎಸ್. ಕುಂಚೂರು, ಲಿಂಗರಾಜ ಸರದೇಸಾಯಿ ಇತರರು ಸಲಹೆ ನೀಡಿದರು.

    ಮಹದಾಯಿ ನದಿ ತಿರುವಿನಿಂದ ಮೀನುಗಾರಿಕೆ ನಶಿಸಲಿದೆ ಎಂದು ಗೋವಾ ಮೊಂಡು ವಾದ ಮಂಡಿಸುತ್ತಿದೆ. ಇದು ಸತ್ಯವಲ್ಲ ಎಂದು ಕೆಲವರು ಹೇಳಿದರು.

    ಇಂಜಿನಿಯರ್ ವಿ.ಎಂ. ಕುಲಕರ್ಣಿ ಅವರು ಯೋಜನೆ ವಿವರ ನೀಡಿದರು. ಕೆಪಿಎಸ್​ಸಿ ಮಾಜಿ ಸದಸ್ಯ ಜಿ.ಟಿ. ಚಂದ್ರಶೇಖರಪ್ಪ, ನಿವೃತ್ತ ಇಂಜಿನಿಯರ್​ಗಳಾದ ಎಸ್.ಎಸ್. ಕಣಗಾವಿ, ಕೃಷ್ಣಾಜಿ ಚವ್ಹಾಣ, ಎನ್.ಎಫ್. ಸಂಶಿಮಠ, ಮುಖಂಡರಾದ ಶಿವಣ್ಣ ಹುಬ್ಬಳ್ಳಿ, ಅಪ್ಪಣ್ಣ ಹಳ್ಳದ ಇತರರು ಇದ್ದರು. ಬಿ.ಎಚ್. ಪಾಟೀಲ ಸ್ವಾಗತಿಸಿದರು. ವಿಕಾಸ ಸೊಪ್ಪಿನ ಕಾರ್ಯಕ್ರಮ ನಿರೂಪಿಸಿದರು.

    ಗೋವಾ ಮನವೊಲಿಸುವುದು ಕಷ್ಟ

    ಕರ್ನಾಟಕದ ಜಲ ವಿವಾದಗಳು ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಎಲ್ಲ ರಾಜ್ಯಗಳೊಂದಿಗೆ ಇದೆ. ಆದರೆ, ಈ ಎಲ್ಲ ರಾಜ್ಯಗಳ ವಕೀಲರ ಮನವೊಲಿಸಿ ಹೆಚ್ಚಿನ ನೀರು ತರುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಮ್ಮ ವೃತ್ತಿಯ ಅನುಭವ ಹಂಚಿಕೊಂಡ ಮೋಹನ ಕಾತರಕಿ ಅವರು, ಗೋವಾ ಮನವೊಲಿಕೆ ಬಹಳ ಕಷ್ಟದ ಕೆಲಸ ಎಂದು ಹೇಳಿದರು.

    ಗೋವಾ ವಕೀಲರೊಬ್ಬರು ಜಲವಿವಾದ ವಿಚಾರಣೆ ಸಂದರ್ಭದಲ್ಲಿ ಲಿಂಬೆಹಣ್ಣು ಇಟ್ಟುಕೊಂಡು ಬರುತ್ತಿದ್ದರು. ಮಂತ್ರ, ತಂತ್ರ ಮಾಡಿ ನಮ್ಮ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದರು. ಇದನ್ನೆಲ್ಲ ನಾನು ನಂಬುತ್ತಿರಲಿಲ್ಲ. ಹಾಗಾಗಿ, ಯಾವುದೇ ಪ್ರಭಾವ ನನ್ನ ಮೇಲೆ ಆಗಲಿಲ್ಲ ಎಂದು ಕಾತರಕಿ ಅವರು ಸ್ವಾರಸ್ಯಕರ ಘಟನೆಗಳನ್ನು ಮೆಲುಕು ಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts