More

    ಲಿಂ. ಕುಮಾರ ಶ್ರೀ ಪುಣ್ಯಸ್ಮರಣೆ ಇಂದಿನಿಂದ

    ಹಾನಗಲ್ಲ: ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಶಿವಯೋಗ ಮಂದಿರದ ಸಂಸ್ಥಾಪಕರಾದ ಲಿಂ. ಹಾನಗಲ್ಲ ಕುಮಾರ ಶಿವಯೋಗಿಗಳವರ 90ನೇ ಪುಣ್ಯ ಸ್ಮರಣೋತ್ಸವ ಫೆ. 12ರಿಂದ 14ರವರೆಗೆ ನಡೆಯಲಿದ್ದು, ಧಾರ್ವಿುಕ ಗೋಷ್ಠಿ, ಆಧ್ಯಾತ್ಮಿಕ ಚಿಂತನೆ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.

    ಪಟ್ಟಣದ ಕುಮಾರೇಶ್ವರ ಮಠದ ಆವರಣದಲ್ಲಿ ಫೆ. 12ರಂದು ಬೆಳಗ್ಗೆ 8 ಗಂಟೆಗೆ ಅಡವಿಸ್ವಾಮಿಮಠದ ಕುಮಾರಸ್ವಾಮಿಗಳು ಷಟ್​ಸ್ಥಲ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಂಜೆ 6.30ಕ್ಕೆ ಪುಣ್ಯಸ್ಮರಣೋತ್ಸವದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಬೊಮ್ಮನಹಳ್ಳಿಯ ಶಿವಯೋಗೀಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ನೇತೃತ್ವ, ಕೂಡಲದ ಮಹೇಶ್ವರ ಶಿವಾಚಾರ್ಯರು ಸಮ್ಮುಖ ವಹಿಸುವರು. ಕೃಷಿ ಸಚಿವ ಬಿ.ಸಿ. ಪಾಟೀಲ ಅತಿಥಿಯಾಗಿ ಪಾಲ್ಗೊಳ್ಳುವರು. ನಿವೃತ್ತ ಪ್ರಾಚಾರ್ಯ ಎಚ್.ಬಿ. ಉಮಾಪತಿ ಉಪನ್ಯಾಸ ನೀಡುವರು. ಕುನ್ನೂರಿನ ಗೋ-ಆಧಾರಿತ ನೈಸರ್ಗಿಕ ಕೃಷಿಕ ಶಂಕರ ಸೊಗಲಿ ಅವರನ್ನು ಸನ್ಮಾನಿಸಲಾಗುವುದು. ವೀರೇಶ್ವರ ಪುಣ್ಯಾಶ್ರಮದ ಕಲಾವಿದರಾದ ಶಿವಬಸಯ್ಯ ಗಡ್ಡದಮಠ ಅವರಿಂದ ಸಂಗೀತ, ನಂತರ ಸ್ಥಳೀಯ ಕುಮಾರೇಶ್ವರ ಪ್ರಾಥಮಿಕ-ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

    ಫೆ. 13ರಂದು ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದು, ಹೋತನಹಳ್ಳಿಯ ಶಂಭುಲಿಂಗ ಶಿವಾಚಾರ್ಯರು, ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯರು ಸಮ್ಮುಖ ವಹಿಸುವರು. ಸಂಸದ ಶಿವಕುಮಾರ ಉದಾಸಿ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಮಾಜಿ ಸಚಿವ ಮನೋಹರ ತಹಸೀಲ್ದಾರ್ ಅತಿಥಿಗಳಾಗಿ ಪಾಲ್ಗೊಳ್ಳುವರು. ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ ಯುವಕರಿಗೆ ಸ್ಪೂರ್ತಿನುಡಿಗಳನ್ನಾಡುವರು. ಬಯಲಾಟ ಅಕಾಡೆಮಿ ಅಧ್ಯಕ್ಷ, ಕಲಾವಿದ ಟಿ.ಬಿ. ಸೊಲಬಕ್ಕನವರ ಹಾಗೂ ಪ್ರಸ್ತುತ ವರ್ಷ ನಿವೃತ್ತರಾದ ಶಿಕ್ಷಕರನ್ನು ಶ್ರೀಮಠದಿಂದ ಸನ್ಮಾನಿಸಲಾಗುವುದು. ನಂತರ ಕುಮಾರೇಶ್ವರ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು.

    ಫೆ. 14ರಂದು ಸಂಜೆ ನಡೆಯುವ ಧರ್ಮಸಭೆಯಲ್ಲಿ ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀದ್ರ ಮಹಾಸ್ವಾಮೀಜಿ ಸಾನ್ನಿಧ್ಯ, ಉತ್ಸವ ಸಮಿತಿ ಅಧ್ಯಕ್ಷ, ಶಾಸಕ ಸಿ.ಎಂ. ಉದಾಸಿ ಅಧ್ಯಕ್ಷತೆ, ಬೆಳಗಾವಿ ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮಿಗಳು ನೇತೃತ್ವ ವಹಿಸುವರು. ಬಿಜಕಲ್ಲ ಮಠದ ಶಿವಲಿಂಗ ಸ್ವಾಮೀಜಿ, ಸಚಿವ ಬಸವರಾಜ ಬೊಮ್ಮಾಯಿ, ಬಿಜೆಪಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಅತಿಥಿಗಳಾಗಿ ಪಾಲ್ಗೊಳ್ಳುವರು.

    ಕೆಪಿಎಸ್​ಸಿ ಪರೀಕ್ಷೆಯಲ್ಲಿ ಆಯ್ಕೆಗೊಂಡಿರುವ ವಾಣಿಜ್ಯ ತೆರಿಗೆ ಅಧಿಕಾರಿ ಭುವನೇಶ್ವರಿ ಪಾಟೀಲ, ತಹಸೀಲ್ದಾರ್ ಮಲ್ಲೇಶ ಪೂಜಾರ, ಡಿವೈಎಸ್​ಪಿ ಚಂದ್ರಶೇಖರ ಗಾಳಿ, ಸಹಾಯಕ ಆಯುಕ್ತರಾದ ಪಲ್ಲವಿ ಸಾತೇನಹಳ್ಳಿ ಅವರನ್ನು ಸನ್ಮಾನಿಸಲಾಗುವುದು.

    ಪಾದಯಾತ್ರೆ: ಸ್ಮರಣೋತ್ಸವದ ಅಂಗವಾಗಿ ಪ್ರತಿವರ್ಷದಂತೆ ಫೆ. 13ರಂದು ಬೆಳಗ್ಗೆ ಅಕ್ಕಿಆಲೂರು ವಿರಕ್ತಮಠದಿಂದ ಗ್ರಾಮದ ಸದ್ಭಕ್ತರು ಶಿವಬಸವ ಸ್ವಾಮಿಗಳ ನೇತೃತ್ವದಲ್ಲಿ ಪಾದಯಾತ್ರೆ ಮೂಲಕ ಹಾನಗಲ್ಲ ಮಠಕ್ಕೆ ಆಗಮಿಸಲಿದ್ದಾರೆ.

    ಸಾಮೂಹಿಕ ವಿವಾಹಗಳು: ಲಿಂ. ಕುಮಾರ ಶಿವಯೋಗಿಗಳ ಸ್ಮರಣೋತ್ಸವರ ನಿಮಿತ್ತ ಫೆ. 14ರಂದು ವಿವಿಧ ಮಠಾಧೀಶರ ಸಮ್ಮುಖದಲ್ಲಿ ಸಾಮೂಹಿಕ ವಿವಾಹಗಳು ನಡೆಯಲಿವೆ. ನಂತರ ಲಿಂ. ಕುಮಾರ ಶಿವಯೋಗಿಗಳ ಭಾವಚಿತ್ರದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts