More

    ಲಾರಿ ಚಾಲಕ, ಮಾಲೀಕರ ಪ್ರತಿಭಟನೆ

    ನರಗುಂದ: ಕೇಂದ್ರ ಉಗ್ರಾಣ ನಿಗಮಕ್ಕೆ (ಸೆಂಟ್ರಲ್ ವೇರ್ ಹೌಸ್) ಆಗಮಿಸಿದ್ದ ಲಾರಿಗಳಲ್ಲಿನ ತೊಗರಿ ಅನ್​ಲೋಡ್ ಮಾಡಿಕೊಳ್ಳದ ಉಗ್ರಾಣ ನಿಗಮದ ವ್ಯವಸ್ಥಾಪಕರ ವಿರುದ್ಧ ಆಕ್ರೋಶಗೊಂಡ ನೂರಾರು ಲಾರಿಗಳ ಚಾಲಕ ಮತ್ತು ಮಾಲೀಕರು ಅವರನ್ನು ತರಾಟೆಗೆ ತೆಗೆದುಕೊಂಡು ಕೆಲಕಾಲ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ಪಟ್ಟಣದಲ್ಲಿ ನಡೆದಿದೆ.

    ಕಲಬುರಗಿ, ವಿಜಯಪುರ, ಕೋಲಾರ ಜಿಲ್ಲೆಯ ವಿವಿಧೆಡೆ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ್ದ ತೊಗರಿಯನ್ನು ನರಗುಂದ ಸೆಂಟ್ರಲ್ ವೇರ್ ಹೌಸ್​ನಲ್ಲಿ ಸಂಗ್ರಹಿಸಲು ನೂರಾರು ಲಾರಿಗಳ ಮೂಲಕ ಕಳೆದೊಂದು ವಾರದ ಹಿಂದೆ ಕಳಿಸಲಾಗಿತ್ತು. ಆದರೆ, ನಾಲ್ಕೈದು ದಿನ ಕಳೆದರೂ ಲಾರಿಯಲ್ಲಿದ್ದ ತೊಗರಿಯನ್ನು ಇಲ್ಲಿನ ಅಧಿಕಾರಿಗಳು ಖಾಲಿ ಮಾಡಿರಲಿಲ್ಲ. ಇದರಿಂದ ಹತ್ತಾರು ಟನ್ ಭಾರ ಹೊತ್ತಿರುವ ಲಾರಿಗಳು ನಿಂತಲ್ಲೇ ನಿಂತು ಟೈರ್​ಗಳು ಬ್ಲಾಸ್ಟ್ ಆಗುತ್ತಿವೆ. ಇನ್ನುಳಿದ ಕೆಲ ಲಾರಿ ಟೈರ್​ಗಳು ಪಂಕ್ಚರ್ ಆಗುತ್ತಿವೆ. ದಿನ ಕಳೆದಂತೆ ನಮ್ಮ ಬಾಡಿಗೆ, ಚಾಲಕ ಮತ್ತು ಕ್ಲೀನರ್​ಗಳ ಖರ್ಚು ಹೆಚ್ಚಾಗಿ ಸಾವಿರಾರು ರೂ.ಗಳ ನಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸಿ ಉಗ್ರಾಣ ನಿಗಮದ ವ್ಯವಸ್ಥಾಪಕ ಎ.ವೈ. ಕುಂಗಾರೆ ಅವರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಕೆಲಕಾಲ ಉಗ್ರಾಣ ನಿಗಮದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

    ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ತೊಗರಿ ಸಂಗ್ರಹ ಗುತ್ತಿಗೆ ಪಡೆದಿರುವ ಸವದತ್ತಿಯ ಗಣೇಶ ಟ್ರೇಡಿಂಗ್ ಕಂಪನಿ ಮಾಲೀಕ ಡಿ.ವೈ. ಸಂಗೊಳ್ಳಿ ಹಾಗೂ ಕೇಂದ್ರ ಉಗ್ರಾಣದ ವ್ಯವಸ್ಥಾಪಕ ಎ.ವೈ. ಕುಂಗಾರೆ ಅವರೊಂದಿಗೆ ರ್ಚಚಿಸಿ ಹೆಚ್ಚುವರಿ ಕೂಲಿ ಕಾರ್ವಿುಕರನ್ನು ಕರೆಯಿಸಿ ಎಲ್ಲ ಲಾರಿಗಳಲ್ಲಿರುವ ತೊಗರಿಯನ್ನು ಎರಡ್ಮೂರು ದಿನಗಳಲ್ಲಿ ಖಾಲಿ ಮಾಡಿಸಿಕೊಡುವ ಭರವಸೆ ನೀಡಿದರು. ಆಗ ಲಾರಿ ಮಾಲೀಕರು ಹಾಗೂ ಚಾಲಕ, ಕ್ಲೀನರ್​ಗಳು ಪ್ರತಿಭಟನೆ ಕೈಬಿಟ್ಟರು.

    ಪ್ರತಿಭಟನೆಯಲ್ಲಿ ಪ್ರದೀಪ ಸಂದಿಗವಾಡ, ವಿಜಯ ಕರಕೀಕಟ್ಟಿ, ಶ್ರೀನಿವಾಸ ಬಂಡರಗಲ್ಲ, ಪ್ರಕಾಶ ಕಮತರ, ಮಹೇಶಕುಮಾರ ದೊಡಮನಿ, ರಾಘು ಕೊಚ್ಚಾರಿ, ವಿವೇಕ ಟೆಂಗಿನಕಾಯಿ, ಪರಶುರಾಮ ಕ್ಯಾತಿ, ವೆಂಕಟೇಶ ನಾಯ್ಕ, ಕುಮಾರ ಕಡೇಮನಿ, ಇತರರು ಉಪಸ್ಥಿತರಿದ್ದರು.

    ವಿಜಯಪುರದಿಂದ ನರಗುಂದ ಸೆಂಟ್ರಲ್ ವೇರ್​ಹೌಸ್​ಗೆ ಫೆ. 27ರಂದು ತೊಗರಿ ಹೇರಿಕೊಂಡು ಬಂದಿದ್ದೇವೆ. ಕೇವಲ 20 ಜನ ಕೂಲಿ ಕಾರ್ವಿುಕರಿರುವ ಈ ಉಗ್ರಾಣದಲ್ಲಿ ನೂರಾರು ಲಾರಿಗಳನ್ನು ಖಾಲಿ ಮಾಡಲು ಸಾಧ್ಯವಾಗುತ್ತಿಲ್ಲ. ಹೆಚ್ಚುವರಿ ಕಾರ್ವಿುಕರ ವ್ಯವಸ್ಥೆ ಮಾಡುವಂತೆ ಇಲ್ಲಿನ ಅಧಿಕಾರಿಗಳಿಗೆ ಮನವಿ ಮಾಡಿದರೂ ಅವರು ಸ್ಪಂದಿಸಿರಲಿಲ್ಲ. ಹೀಗಾಗಿ ಪ್ರತಿಭಟನೆ ಮಾಡಬೇಕಾಯಿತು.

    | ಪ್ರದೀಪ ಸಂದಿಗವಾಡ, ಲಾರಿ ಚಾಲಕ

    ತೊಗರಿ ಸಂಗ್ರಹ ಗುತ್ತಿಗೆ ಪಡೆದಿರುವ ಸವದತ್ತಿಯ ಡಿ.ವೈ. ಸಂಗೊಳ್ಳಿ ಅವರು ಯಾವುದೇ ಮಾಹಿತಿ ನೀಡದೇ ನೂರಾರು ಲಾರಿಗಳನ್ನು ಲೋಡ್ ಮಾಡಿ ಕಳಿಸಿದ್ದರಿಂದ ಸಮಸ್ಯೆಯಾಗಿತ್ತು. ಹೆಚ್ಚುವರಿ ಕಾರ್ವಿುಕರನ್ನು ಕರೆಸಿಕೊಂಡು ಎರಡ್ಮೂರು ದಿನಗಳಲ್ಲಿ ಎಲ್ಲ ಲಾರಿಗಳನ್ನು ಖಾಲಿ ಮಾಡಿಸಲಾಗುವುದು.

    | ಎ.ವೈ. ಕುಂಗಾರೆ, ಕೇಂದ್ರ ಉಗ್ರಾಣ ನಿಗಮದ ವ್ಯವಸ್ಥಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts